Site icon Vistara News

Helicopter Crash: ನೇಪಾಳದ ಮೌಂಟ್​ ಎವರೆಸ್ಟ್​ ಶಿಖರದ ಬಳಿ ಹೆಲಿಕಾಪ್ಟರ್​ ಪತನ; 5 ಶವಗಳು ಪತ್ತೆ

Helicopter

ನೇಪಾಳದಲ್ಲಿ ಪ್ರವಾಸಿಗರ ಹೆಲಿಕಾಪ್ಟರ್​ವೊಂದು ಪತನಗೊಂಡಿದೆ (Helicopter Crash). ಈ ಹೆಲಿಕಾಪ್ಟರ್​ ಸೋಲುಕುಂಬುವಿನಲ್ಲಿ ಟೇಕ್​ ಆಫ್​ ಆಗಿ, ಕಾಠ್ಮಂಡು ಕಡೆಗೆ ಸಂಚಾರ ಮಾಡುತ್ತಿತ್ತು. ಮೌಂಟ್ ಎವರೆಸ್ಟ್ ಶಿಖರದ ಸಮೀಪವೇ ಕಣ್ಮರೆಯಾಗಿತ್ತು. ಲಿಖುಪಿಕೆ ಗ್ರಾಮೀಣ ಪುರಸಭೆ ವ್ಯಾಪ್ತಿಯ ಲಾಮ್ಜುರಾ ಎಂಬಲ್ಲಿ ಪತನಗೊಂಡಿದ್ದಾಗಿ (Nepal Helicopter Crash)ಕಾಠ್ಮಂಡು ಪೋಸ್ಟ್​ ವರದಿ ಮಾಡಿದೆ. ಇದರಲ್ಲಿ ಪೈಲೆಟ್​ ಮತ್ತು ಐವರು ಪ್ರಯಾಣಿಕರು ಇದ್ದರು. ಐದೂ ಮಂದಿ ಯುಎಸ್​ನ ಮೆಕ್ಸಿಕೊದವರೇ ಆಗಿದ್ದರು. ಹೆಲಿಕಾಪ್ಟರ್ ಪತನಗೊಂಡು ಆರೂ ಜನರ ಪ್ರಾಣ ಹೋಗಿದ್ದು, ಸ್ಥಳದಲ್ಲಿ ಐದು ಶವಗಳು ಪತ್ತೆಯಾಗಿದೆ.

ಸೋಲುಕಂಬುವಿನ ಸುರ್ಕೆಯಿಂದ ಹೊರಟ 15 ನಿಮಿಷಗಳಲ್ಲಿ, ಅಂದರೆ ಬೆಳಗ್ಗೆ ಸುಮಾರು 10 ಗಂಟೆ ಹೊತ್ತಿಗೆ ಏರ್​ ಕಂಟ್ರೋಲ್ ಟವರ್​​ನ ಸಂಪರ್ಕ ಕಡಿತಗೊಂಡಿತ್ತು. ಅದಾದ ಮೇಲೆ ಹೆಲಿಕಾಪ್ಟರ್ ಎತ್ತ ಚಲಿಸಿತು ಎಂಬುದು ಗೊತ್ತಾಗಿರಲಿಲ್ಲ ಎಂದು ಏರ್​ಪೋರ್ಟ್​ ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ತಿಳಿಸಿದ್ದಾರೆ.

ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಈ ಬಗ್ಗೆ ಟ್ವೀಟ್ ಮಾಡಿ ‘ಮನಂಗ್ ಏರ್​ ಪ್ರೈವೇಟ್ ಲಿಮಿಟೆಡ್​ ಕಂಪನಿಗೆ ಸೇರಿದ 9ಎನ್​-ಎಎಂವಿ (AS 50) ಹೆಲಿಕಾಪ್ಟರ್​ ಸೋಲುಕುಂಬುವಿನ ಸುರ್ಕೆಯಿಂದ ಕಾಠ್ಮಂಡು ಕಡೆಗೆ ಹೊರಟಿತ್ತು. ಕೆಲವೇ ಹೊತ್ತಲ್ಲಿ ನಾಪತ್ತೆಯಾಗಿದ್ದು, ಹುಡುಕಲಾಗುತ್ತಿದೆ’ ಎಂದು ತಿಳಿಸಿತ್ತು. ಈ ಹೆಲಿಕಾಪ್ಟರ್​​ನ ಪೈಲೆಟ್​ ಹಿರಿಯ ಕ್ಯಾಪ್ಟನ್​ ಚೆಟ್ ಗುರುಂಗ್ ಅವರಾಗಿದ್ದರು. ಹೆಲಿಕಾಪ್ಟರ್​ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದೇ ಪತನಕ್ಕೆ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ: Nepal plane crash | ನೇಪಾಳ ವಿಮಾನದಲ್ಲಿ ದುರಂತದಲ್ಲಿ ಮೃತಪಟ್ಟ 42 ಜನರ ಗುರುತು ಪತ್ತೆ; ಸಿಕ್ಕಿಲ್ಲ ಇನ್ನೂ ಇಬ್ಬರ ಮೃತದೇಹ

ಲುಕ್ಲಾ ಮತ್ತು ಫಪ್ಲು ಪ್ರದೇಶಗ ಮಧ್ಯೆ ಲಾಮ್ಜುರಾ ಪ್ರದೇಶವಿದ್ದು, ಇಲ್ಲಿನ ಭಾಕಂಜೆ ಎಂಬ ಹಳ್ಳಿಯ ಬಳಿ ಹೆಲಿಕಾಪ್ಟರ್ ಅವಶೇಷಗಳು ಸಿಕ್ಕಿವೆ. ಆ ಹಳ್ಳಿ ಜನರೇ ಅದನ್ನು ಹುಡುಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ನೇಪಾಳದಲ್ಲಿ ಹೆಲಿಕಾಪ್ಟರ್​-ವಿಮಾನಗಳ ಪತನ ಸರ್ವೇಸಾಮಾನ್ಯ. ಇದಕ್ಕೂ ದೊಡ್ಡದಾದ ಭೀಕರ ಅಪಘಾತಗಳನ್ನು ಆ ದೇಶ ಕಂಡಿದೆ. ನೇಪಾಳವು ಪರ್ವತ ಭೂಪ್ರದೇಶವಾದ ಕಾರಣ ವಿಮಾನಗಳ ಹಾರಾಟ, ಲ್ಯಾಂಡಿಂಗ್‌ಗೆ ಕಷ್ಟವಾಗುತ್ತದೆ. ಶಿಖರಗಳ ಬಳಿಯೇ ವಿಮಾನ ನಿಲ್ದಾಣಗಳು ಇರುವುದರಿಂದ ಟೇಕ್‌ಆಫ್‌ ಹಾಗೂ ಲ್ಯಾಂಡ್‌ ಆಗುವಾಗ ಹೆಚ್ಚಿನ ದುರಂತಗಳು ಸಂಭವಿಸುತ್ತಿವೆ. ಇನ್ನು ನೇಪಾಳ ಸರ್ಕಾರ ಹಾಗೂ ಖಾಸಗಿ ವಿಮಾನಯಾನ ಸಂಸ್ಥೆಗಳು ಹೊಸ ಹೊಸ ವಿಮಾನಗಳ ಮೇಲೆ ಹೂಡಿಕೆ ಮಾಡದಿರುವುದು, ಮೂಲ ಸೌಕರ್ಯಗಳ ಕೊರತೆ ಹಾಗೂ ವಿಮಾನಯಾನ ಕ್ಷೇತ್ರದ ಮೇಲೆ ಸರಿಯಾದ ನಿಯಂತ್ರಣ ಇರದ ಕಾರಣ ಹೆಚ್ಚಿನ ದುರಂತಗಳು ಸಂಭವಿಸುತ್ತಿವೆ ಎನ್ನಲಾಗಿದೆ.

Exit mobile version