ಲಂಡನ್ನ ಶಾಲೆಗಳಲ್ಲಿ ಹಿಂದು ಮಕ್ಕಳ ವಿರುದ್ಧ ಹಿಂದು ವಿರೋಧಿ ದ್ವೇಷ (Anti-Hindu Hate)ದ ಪ್ರವೃತ್ತಿ ಹೆಚ್ಚುತ್ತಿದೆ. ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಹಿಂದು ವಿರೋಧಿಗಳಿಂದ ಕಿರುಕುಳ ಉಂಟಾಗುತ್ತಿದೆ. ಅಂಥವರ ದ್ವೇಷಕ್ಕೆ ಮಕ್ಕಳು ಮುದುಡಿಹೋಗುತ್ತಿದ್ದಾರೆ ಎಂದು ಲಂಡನ್ನಲ್ಲಿರುವ ಶೇ.51ರಷ್ಟು ಹಿಂದು ಸಮುದಾಯದ ಪಾಲಕರು ಹೇಳಿದ್ದಾರೆ ಎಂದು ಅಲ್ಲಿನ ಹೆನ್ರಿ ಜಾಕ್ಸನ್ ಸೊಸೈಟಿ ಎಂಬ ಚಿಂತಕರ ಚಾವಡಿ ತನ್ನ ಸಮೀಕ್ಷಾ ವರದಿಯನ್ನು ಕೊಟ್ಟಿದೆ. ಅಂದರೆ ಶಾಲೆಗಳಲ್ಲಿ ಹಿಂದು ಮಕ್ಕಳನ್ನು ಇಸ್ಲಾಮ್ಗೆ ಮತಾಂತರ ಆಗುವಂತೆ ಬೆದರಿಸುವುದು, ಅವರ ಮೈಮೇಲೆ ಗೋಮಾಂಸವನ್ನು ಎಸೆಯುವ ಕೃತ್ಯಗಳು ಹೆಚ್ಚುತ್ತಿವೆ ಎಂದು ಈ ಚಿಂತಕರ ಚಾವಡಿ ತನ್ನ ಸರ್ವೇ ವರದಿಯಲ್ಲಿ ತಿಳಿಸಿದ್ದು, ಆತಂಕ ಸೃಷ್ಟಿಸುವಂತಿದೆ ಮತ್ತು ಲಂಡನ್ನಲ್ಲಿ ಹಿಂದುಗಳ ಅಸ್ತಿತ್ವದ ಬಗ್ಗೆ ಎಚ್ಚರಿಕೆ ನೀಡುವಂತಿದೆ.
ಹೆನ್ರಿ ಜಾಕ್ಸನ್ ಸೊಸೈಟಿಯು ತನ್ನ ಸರ್ವೇಯಲ್ಲಿ 988 ಹಿಂದು ಪಾಲಕರನ್ನು ಒಳಗೊಂಡಿತ್ತು. ಅವರಲ್ಲಿ ಶೇ.51 ಪಾಲಕರು ತಮ್ಮ ಮಕ್ಕಳು ಶಾಲೆಯಲ್ಲಿ ಹಿಂದು ವಿರೋಧಿ ದ್ವೇಷಕ್ಕೆ, ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಪಾಲಕರು, ತಮ್ಮ ಮಕ್ಕಳು ಶಾಲೆಯಲ್ಲಿ ಅನುಭವಿಸುತ್ತಿರುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಚಿಂತಕರ ಚಾವಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
‘ನನ್ನ ಮಗ ಹಣೆಯ ಮೇಲೆ ಧಾರ್ಮಿಕ ತಿಲಕ ಇಟ್ಟು ಶಾಲೆಗೆ ಹೋಗುತ್ತಿದ್ದ. ಇದೇ ಕಾರಣಕ್ಕೆ ಅವನಿಗೆ ಕಿರುಕುಳ ನೀಡಲಾಗುತ್ತಿತ್ತು. ಬರುಬರುತ್ತ ಅವನು ಶಾಲೆಗೆ ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟ. ಈ ಹಿಂಸೆಯ ಕಾರಣಕ್ಕೆ ನನ್ನ ಮಗ ಪೂರ್ವಲಂಡನ್ನಲ್ಲಿ ಮೂರು ಬಾರಿ ಶಾಲೆ ಬದಲಿಸಬೇಕಾಯಿತು’ ಎಂದು ಒಬ್ಬ ಪಾಲಕರು ಹೇಳಿದ್ದಾರೆ.
ಹಾಗೇ, ಇನ್ನೊಬ್ಬರು ತನ್ನ ಮಗುವಿಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನನ್ನ ಮಗು ಪ್ರತಿದಿನ ಶಾಲೆಯಲ್ಲಿ ಟೀಕೆ, ಹಿಂಸೆ, ನಿಂದನಾತ್ಮಕ ಮಾತುಗಳಿಗೆ ಗುರಿಯಾಗುತ್ತಿದೆ. ಅದರಲ್ಲೂ ಕಾಶ್ಮಿರದಲ್ಲಿ ಆರ್ಟಿಕಲ್ 370ಯನ್ನು ತೆಗೆದು ಹಾಕಿದ ಮೇಲೆ ಇನ್ನಷ್ಟು ಜಾಸ್ತಿಯಾಗಿದೆ. ನೀವು ಕಾಫೀರರು, ನಂಬಿಕೆ ಇಲ್ಲದವರು ಎಂದು ಮಕ್ಕಳ ಎದುರು ಹೀಗಳೆಯಲಾಗುತ್ತದೆ. ಅಷ್ಟಲ್ಲದೆ, ನೀವು ಮತಾಂತರಗೊಳ್ಳಿ ಇಲ್ಲವೇ ನರಕಕ್ಕೆ ಹೋಗಿ ಎಂದು ಬೈಯ್ಯುತ್ತಾರೆ’ ಎಂದು ಅವರು ತಿಳಿಸಿದ್ದಾರೆ. ‘ಮಕ್ಕಳ ಬಳಿ ಬಂದು, ನೀವು ಸ್ವರ್ಗಕ್ಕೆ ಹೋಗಬೇಕು ಎಂದರೆ, ಇಸ್ಲಾಂಗೆ ಮತಾಂತರ ಹೊಂದಿ ಎನ್ನುತ್ತಾರೆ’ ಎಂದು ಮತ್ತೊಬ್ಬ ಹುಡುಗನ ತಂದೆ ಹೇಳಿದ್ದಾರೆ. ಈ ವಿಚಾರವನ್ನೆಲ್ಲ ಚಿಂತಕರ ಚಾವಡಿ ತನ್ನ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿದೆ.
ಶಾಲೆ ಆಡಳಿತಕ್ಕೆ ಗೊತ್ತೇ ಇರುವುದಿಲ್ಲ
ಹೀಗೆ ತಮ್ಮ ಶಾಲೆಯಲ್ಲಿ ಹಿಂದು ಮಕ್ಕಳ ಮೇಲೆ ದೌರ್ಜನ್ಯವಾಗುತ್ತಿದೆ. ಅವರಿಗೆ ಕಿರುಕುಳ ನೀಡಲಾಗುತ್ತಿದೆ, ಹಿಂದು ವಿರೋಧಿ ದ್ವೇಷ ಪಸರಿಸುತ್ತಿದೆ ಎಂಬುದನ್ನು ಅದೆಷ್ಟೋ ಶಾಲೆಗಳು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಇಂಥದ್ದನ್ನೆಲ್ಲ ಗುರುತಿಸಲು ಇದುವರೆಗೆ ಶೇ.19ರಷ್ಟು ಶಾಲೆಗಳಿಗೆ ಮಾತ್ರ ಸಾಧ್ಯವಾಗಿದೆ ಎಂದೂ ಈ ಚಿಂತಕರ ಚಾವಡಿ ಹೇಳಿದೆ.
ಇನ್ನು ಇಂಥ ಘಟನೆಗಳು ನಡೆದಾಗ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಆಯಾ ಶಾಲೆಗಳನ್ನು ಇಟ್ಟುಕೊಳ್ಳಬೇಕು. ‘ಏನು ನಡೆಯಿತು? ಅಪರಾಧದಲ್ಲಿ ಯಾರೆಲ್ಲ ಭಾಗಿಯಾಗಿದ್ದರು? ಬಳಿಕ ಶಾಲೆ ತೆಗೆದುಕೊಂಡ ಕ್ರಮಗಳು ಏನು?’ ಎಂಬಿತ್ಯಾದಿ ವಿವರಗಳನ್ನು ಶಾಲೆಗಳು ದಾಖಲೆ ರೂಪದಲ್ಲಿ ಇಡಬೇಕು. ಆದರೆ ನಮ್ಮ ಸರ್ವೇ ಸಮಯದಲ್ಲಿ ಕೇಳಿದಾಗ ಅಂಥ ದಾಖಲೆಗಳನ್ನು ಒದಗಿಸಲು ಶೇ.15ರಷ್ಟು ಶಾಲೆಗಳು ವಿಫಲಗೊಂಡಿವೆ ಎಂದೂ ತಿಳಿಸಿದೆ. ಹಾಗೇ, ಈ ಹಿಂದು ವಿರೋಧಿ ದ್ವೇಷ ಹೆಚ್ಚುತ್ತಿರುವ ಬಗ್ಗೆ ಅರಿವು ಮೂಡಬೇಕು. ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ಇದನ್ನು ನಿಯಂತ್ರಿಸಲು ಆಡಳಿತಗಳು ಮುಂದಾಗಬೇಕು ಎಂದೂ ಚಿಂತಕರ ಚಾವಡಿ ಒತ್ತಾಯಿಸಿದೆ.