ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ರೋಬ್ ಎಲಿಮೆಂಟರಿ ಶಾಲೆಯಲ್ಲಿ ಮೇ 24ರಂದು ನಡೆದ ಭೀಕರ ಹತ್ಯಾಕಾಂಡ (Texas School Shooting) ಜಗತ್ತನ್ನೇ ನಡುಗಿಸಿದೆ. 18 ವರ್ಷದ ಯುವಕನ ಗುಂಡೇಟಿಗೆ 19 ಅಮಾಯಕ ಮಕ್ಕಳು ಬಲಿಯಾಗಿದ್ದಾರೆ. ಆತನ ಬಂದೂಕಿನಿಂದ ಸಿಡಿದ ಗುಂಡುಗಳು ಪುಟ್ಟಪುಟ್ಟ ಜೀವಗಳನ್ನು ಛಿದ್ರಛಿದ್ರ ಮಾಡಿದ್ದನ್ನು ನೋಡಿ ವಿಶ್ವವೇ ಮರುಗಿದೆ. ಈ ಗುಂಡಿನ ದಾಳಿಗೆ ಮಕ್ಕಳಷ್ಟೇ ಅಲ್ಲ, ಇಬ್ಬರು ಶಿಕ್ಷಕಿಯರೂ ಮೃತಪಟ್ಟಿದ್ದಾರೆ. ಅದರಲ್ಲಿ ಒಬ್ಬಳು ಶಿಕ್ಷಕಿ ಮತ್ತೊಬ್ಬರು ಶಿಕ್ಷಕ. ಇವರಿಬ್ಬರೂ ವಿದ್ಯಾರ್ಥಿಗಳನ್ನು ರಕ್ಷಿಸಲು ಹೋದಾಗ ಗುಂಡು ತಗುಲಿ ಜೀವ ಹೋಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಮನಮಿಡಿಯುವ ಘಟನೆ ನಡೆದಿದೆ. ದುಷ್ಕರ್ಮಿ ಯುವಕನ ಗುಂಡಿಗೆ ಬಲಿಯಾಗಿದ್ದ ಶಿಕ್ಷಕಿಯ ಪತಿಯೂ ಸಾವನ್ನಪ್ಪಿದ್ದಾರೆ.
ಮೃತ ಶಿಕ್ಷಕಿ ಇರ್ಮಾ ಗಾರ್ಸಿಯಾ. ಇವರು ರೋಬ್ ಎಲಿಮೆಂಟರಿ ಶಾಲೆಯಲ್ಲಿ ನಾಲ್ಕನೇ ದರ್ಜೆ ಶಿಕ್ಷಕಿಯಾಗಿದ್ದರು. ಇವರ ಪತಿ ಜೋ ಗಾರ್ಸಿಯಾ. ಪತ್ನಿ ಸಾವನ್ನಪ್ಪಿದ ದುಃಖದಲ್ಲಿ ಬೆಂದುಹೋಗಿದ್ದರು. ಆಕೆಯ ಅಂತ್ಯಕ್ರಿಯೆಯನ್ನೆಲ್ಲ ಮಾಡಿ, ಕೊನೇದಾಗಿ ಸಮಾದಿಗೆ ಹೂವನ್ನಿಟ್ಟು ವಾಪಸ್ ಮನೆಗೆ ಬರುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಂದಹಾಗೇ, ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿ ತಮ್ಮ ಹೈಸ್ಕೂಲ್ ದಿನಗಳಿಂದಲೇ ಪರಸ್ಪರ ಪ್ರೀತಿಸತೊಡಗಿದ್ದರು. ಮದುವೆಯಾಗಿ 24ವರ್ಷ ಕಳೆದಿತ್ತು. ನಾಲ್ಕು ಮಕ್ಕಳು ಇದ್ದಾರೆ. ಈ ಪುಟ್ಟ ಮಕ್ಕಳೀಗ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ 19 ಮಕ್ಕಳನ್ನು ಗುಂಡಿಕ್ಕಿ ಕೊಂದ ಯುವಕ
ಅಮೆರಿಕದಲ್ಲಿ ಶಾಲೆ-ಯೂನಿವರ್ಸಿಟಿಗಳಲ್ಲಿ ಪದೇಪದೆ ಗುಂಡಿನ ದಾಳಿ ನಡೆಯುತ್ತಿರುತ್ತದೆ. ಜಾಗತಿಕವಾಗಿ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ, ಆಂತರಿಕವಾಗಿ ಕಪ್ಪುಚುಕ್ಕೆಯಾಗಿರುವ ಈ ಶೂಟೌಟ್ ನಿರ್ಮೂಲನ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಚಿಕ್ಕಚಿಕ್ಕ ಹುಡುಗರ ಕೈಯಿಗೆ ತುಂಬ ಸುಲಭವಾಗಿ ಬಂದೂಕು, ಪಿಸ್ತೂಲ್ ಸಿಗುವುದೇ ಇದಕ್ಕೆ ಪ್ರಮುಖ ಕಾರಣ. 2012ರಲ್ಲಿ ಅಮೆರಿಕದ ಶಾಲೆಯೊಂದರಲ್ಲಿ ಇಂಥದ್ದೇ ಫೈರಿಂಗ್ ನಡೆದಿತ್ತು. ಆಗ 26 ಮಕ್ಕಳು ಸಾವನ್ನಪ್ಪಿದ್ದರು. ಅದನ್ನು ಬಿಟ್ಟರೆ, ಈಗ ಟೆಕ್ಸಾಸ್ ಶಾಲೆಯಲ್ಲಿ ನಡೆದಿರುವುದೇ ಅತ್ಯಂತ ಭೀಕರ ಶೂಟೌಟ್ ಆಗಿದೆ.
ಇದನ್ನೂ ಓದಿ: ವಿಸ್ತಾರ Explainer: ಅಮೆರಿಕದ ಯುವಕರೇಕೆ ಕಿಲ್ಲರ್ ಆಗುತ್ತಿದ್ದಾರೆ?