ಎರಡು ದಿನಗಳ ಹಿಂದಷ್ಟೇ ಬಂಧಿತರಾಗಿದ್ದ ಇಮ್ರಾನ್ ಖಾನ್(Imran Khan)ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ‘ ಭ್ರಷ್ಟಾಚಾರ ಕೇಸ್ನಡಿ ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ, ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಬಂಧಿಸಿದ್ದು ಕಾನೂನು ಬಾಹಿರ ಮತ್ತು ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ತೋಷಖಾನಾ ಭ್ರಷ್ಟಾಚಾರ, ಅಂದರೆ ಅವರು ಪ್ರಧಾನಮಂತ್ರಿಯಾಗಿದ್ದಾಗ ಬಂದಿದ್ದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪದಡಿ ಎರಡು ದಿನಗಳ ಹಿಂದಷ್ಟೇ ಅವರನ್ನು ಇಸ್ಲಮಾಬಾದ್ ಹೈಕೋರ್ಟ್ ಆವರಣದಲ್ಲಿ ಪೊಲೀಸರು ಬಂಧಿಸಿದ್ದರು. ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿರುವ ಅವರು, ವಿಚಾರಣೆಗಾಗಿ ಆಗಮಿಸಿದ ಹೊತ್ತಲ್ಲೇ ಬಂಧನಕ್ಕೀಡಾಗಿದ್ದರು.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಪಾಕಿಸ್ತಾನದಲ್ಲಿ ದೊಡ್ಡ ಗಲಾಟೆ-ಗಲಭೆಯನ್ನು ಸೃಷ್ಟಿಸಿತ್ತು. ತೆಹ್ರೀಕ್ ಇ ಇನ್ಸಾಫ್ ಪಕ್ಷದ ಕಾರ್ಯಕರ್ತರು ಪಾಕಿಸ್ತಾನದ ಅನೇಕ ಕಡೆಗಳಲ್ಲಿ ಹಿಂಸಾಚಾರ ಸೃಷ್ಟಿಸಿದ್ದರು. ಅನೇಕ ಕಡೆಗಳಲ್ಲಿ ಬೆಂಕಿ ಹಚ್ಚಿದ್ದರು. ಇಮ್ರಾನ್ ಖಾನ್ರನ್ನು ಕಸ್ಟಡಿಗೆ ಪಡೆದಿದ್ದ ಪಾಕಿಸ್ತಾನ ನ್ಯಾಶನಲ್ ಅಕೌಂಟೇಬಿಲಿಟಿ ಬ್ಯೂರೋ (NAB) ಸತತವಾಗಿ ವಿಚಾರಣೆ ನಡೆಸುತ್ತಿತ್ತು. ಇನ್ನೊಂದೆಡೆ ಪಿಟಿಐ ಮುಖಂಡರು ಇಮ್ರಾನ್ ಖಾನ್ ಬಂಧನದ ವಿರುದ್ಧ ಪಾಕಿಸ್ತಾನ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹಾಗೇ, ಇಮ್ರಾನ್ ಖಾನ್ ಕೂಡ ತಮ್ಮ ಬಿಡುಗಡೆಗೆ ಮನವಿ ಮಾಡಿದ್ದರು.
ಇದನ್ನೂ ಓದಿ: Imran Khan: ವಿಷದ ಇಂಜೆಕ್ಷನ್ ಕೊಡಬಹುದೆಂಬ ಭಯದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್; ಪಾಕಿಸ್ತಾನ ರಣರಂಗ
ಇಮ್ರಾನ್ ಖಾನ್ ಸಲ್ಲಿಸಿದ್ದ ಬಿಡುಗಡೆ ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಝರ್ ಮತ್ತು ನ್ಯಾಯಮೂರ್ತಿ ಅಥರ್ ಮಿನಲ್ಲಾ ‘ಇಮ್ರಾನ್ ಖಾನ್ರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ಇಸ್ಲಮಾಬಾದ್ ಹೈಕೋರ್ಟ್ ಆವರಣದಿಂದ ಇಮ್ರಾನ್ ಖಾನ್ರನ್ನು ಬಂಧಿಸಿದ ಕ್ರಮನ್ನು ತೀವ್ರವಾಗಿ ಟೀಕಿಸಿದ್ದಾರೆ. ಹಾಗೇ, ಇಸ್ಲಮಾಬಾದ್ ಹೈಕೋರ್ಟ್ನಲ್ಲಿ ಇಮ್ರಾನ್ ಖಾನ್ ವಿಚಾರಣೆ ಮುಂದುವರಿಯಲಿ. ಆ ಕೋರ್ಟ್ ಏನು ತೀರ್ಪು ನೀಡುತ್ತದೆಯೋ, ಅದರಂತೆ ಕ್ರಮ ಆಗಬೇಕು’ ಎಂದೂ ಹೇಳಿದ್ದಾರೆ.