ವಾಷಿಂಗ್ಟನ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಎರಡನೇ ಪತ್ನಿಯಾಗಿದ್ದ ರೆಹಮ್ ಖಾನ್ (49) ಅವರು ಮೂರನೇ (Reham Khan Marriage) ಮದುವೆಯಾಗಿದ್ದಾರೆ. ಅಮೆರಿಕ ಮೂಲದ ಪಾಕಿಸ್ತಾನದ ನಟ ಮಿರ್ಜಾ ಬಿಲಾಲ್ (Mirza Bilal) ಅವರನ್ನು ರೆಹಮ್ ಖಾನ್ ವರಿಸಿದ್ದು, ಈ ಕುರಿತು ಅವರೇ ಜಾಲತಾಣದಲ್ಲಿ ಘೋಷಿಸಿದ್ದಾರೆ.
“ಅಮೆರಿಕದಲ್ಲಿ ನಮ್ಮ ಮದುವೆಯು ಸರಳವಾಗಿ (Nikkah) ನಡೆದಿದೆ. ಮಿರ್ಜಾ ಬಿಲಾಲ್ ಅವರ ಪೋಷಕರು ಹಾಗೂ ನನ್ನ ಮಗ ಮದುವೆಗೆ ಸಾಕ್ಷಿಯಾದರು. ಕೊನೆಗೂ ನಾನು ನಂಬುವ ವ್ಯಕ್ತಿ ಸಿಕ್ಕ” ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳ ಸಮೇತ ಪೋಸ್ಟ್ ಮಾಡಿದ್ದಾರೆ. ರೆಹಮ್ ಖಾನ್ ಅವರು ಬ್ರಿಟನ್-ಪಾಕಿಸ್ತಾನದ ಪತ್ರಕರ್ತೆಯಾಗಿದ್ದಾರೆ. ಬಿಲಾಲ್ ಮೊದಲು ರೂಪದರ್ಶಿಯಾಗಿದ್ದರು. ಇದಾದ ಬಳಿಕ ಅವರು ನಟನೆಯಲ್ಲಿ ತೊಡಗಿಕೊಂಡಿದ್ದು, ‘ದಿಲ್ ಪೆ ಮತ್ ಲೇ ಯಾರ್’, ‘ದಿ 4 ಮೆನ್ ಶೋ’ ಸೇರಿ ಹಲವು ಶೋಗಳ ಭಾಗವಾಗಿದ್ದರು.
ರೆಹಮ್ ಖಾನ್ ಅವರಿಗೆ ಇದು ಮೂರನೇ ಮದುವೆಯಾಗಿದೆ. ಮೊದಲಿಗೆ ಅವರು ಇಜಾಜ್ ರೆಹಮಾನ್ ಎಂಬುವರನ್ನು 1993ರಲ್ಲಿ ಮದುವೆಯಾಗಿದ್ದರು. ಇಬ್ಬರೂ 2005ರಲ್ಲಿ ವಿಚ್ಛೇದನ ಪಡೆದರು. ನಂತರ, 2014ರಲ್ಲಿ ರೆಹಮ್ ಅವರು ಇಮ್ರಾನ್ ಖಾನ್ ಅವರನ್ನು ವರಿಸಿದರು. ಆದರೆ, ಇಬ್ಬರ ದಾಂಪತ್ಯವು ಕೇವಲ 10 ತಿಂಗಳಿಗೆ ಮುರಿದುಬಿತ್ತು. 2015ರಲ್ಲಿ ರೆಹಮ್ ಹಾಗೂ ಇಮ್ರಾನ್ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದಾರೆ.
ಇದನ್ನೂ ಓದಿ | Imran Khan Wife | ದುಬಾರಿ ವಾಚ್ ಮಾರಿ ಜೀವನ ಸಾಗಿಸುವ ಗತಿ ಬಂತೇ ಇಮ್ರಾನ್ ಖಾನ್‌ಗೆ? ಪತ್ನಿ ಆಡಿಯೊ ವೈರಲ್