ಮೆಲ್ಬೊರ್ನ್ : ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಉಗ್ರರು ಹಿಂದು ದೇಗುಲಗಳ ಮೇಲೆ (Temple vandalised in Australia) ದಾಳಿ ನಡೆಸುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇದು ಭಯೋತ್ಪಾದಕ ಕೃತ್ಯ ನಡೆಸುವವರಿಗೆ ಕಟ್ಟಕಡೆಯ ಎಚ್ಚರಿಕೆ ಎಂಬುದಾಗಿ ಹೇಳಿದೆ. ಕಳೆದ ತಿಂಗಳು ಇಲ್ಲಿನ ಸ್ವಾಮಿನಾರಾಯಣ ದೇವಸ್ಥಾನ, ಇಸ್ಕಾನ್ ಮಂದಿರ ಹಾಗೂ ಐತಿಹಾಸಿಕ ಶಿವ- ವಿಷ್ಣು ದೇವಸ್ಥಾನಗಳ ಮೇಲೆ ದಾಳಿ ಮಾಡಿ ಹಿಂದು ವಿರೋಧಿ ಬರಹಗಳನ್ನು ಬರೆಯಲಾಗಿತ್ತು. ಈ ಬಗ್ಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಗುರುವಾರ (ಜನವರಿ 26ರಂದು) ಹೇಳಿಕೆ ಬಿಡುಗಡೆ ಮಾಡಿದೆ.
ಭಾರತ ವಿರೋಧಿಗಳ ವೈಭವೀಕರಣ ನಡೆಯುತ್ತಿದೆ. ಹಿಂದುಗಳ ಪವಿತ್ರ ತಾಣಗಳ ಮೇಲೆ ದಾಳಿ ನಡೆಯುತ್ತಿದೆ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇದುಕೊನೇ ಎಚ್ಚರಿಕೆ ಎಂಬುದಾಗಿ ಆಸ್ಡ್ರೇಲಿಯಾದ ರಾಜ್ಯಧಾನಿ ಕ್ಯಾನ್ಬೆರಾದಲ್ಲಿರುವ ರಾಯಭಾರ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದೆ.
‘ಆಸ್ಟ್ರೇಲಿಯಾದಲ್ಲಿ ನೆಲೆಯೂರಿರುವ ಖಲಿಸ್ತಾನಿ ಉಗ್ರರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಎನ್ನುವ ನಿಷೇಧಿತ ಭಯೋತ್ಪಾದನಾ ಸಂಸ್ಥೆ ಹಾಗೂ ಆಸ್ಟ್ರೇಲಿಯಾದ ಹೊರಗೆ ಇರುವ ಇಂಥ ಸಂಸ್ಥೆಗಳು ಕುಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿವೆ’ ಎಂದು ಭಾರತ ಆರೋಪಿಸಿದೆ.
ಇದನ್ನೂ ಓದಿ | ಆಕ್ರಮಣಕ್ಕೆ ಒಳಗಾದ ಎಲ್ಲ ದೇಗುಲಗಳ ಮರುನಿರ್ಮಾಣ ಬೇಕಿಲ್ಲ ಎಂದ ಸದ್ಗುರು
ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಕಚೇರಿಯೂ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ದೇಗುಲಗಳ ಧ್ವಂಸ ಪ್ರಕರಣ ಆಘಾತ ತಂದಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.