Site icon Vistara News

ಬ್ರಿಟನ್​​ನಲ್ಲಿ ಲಿಜ್​ ಟ್ರಸ್​ ಸಂಪುಟ ಸೇರಿದ ಭಾರತ ಮೂಲದ ಸುಯೆಲ್ಲಾ ಬ್ರಾವರ್​ಮನ್; ಗೃಹ ಕಾರ್ಯದರ್ಶಿಯಾಗಿ ನೇಮಕ

Suella Braverman

ಲಂಡನ್​​: ಬ್ರಿಟನ್​ ನೂತನ ಪ್ರಧಾನಿ ಲಿಜ್​ ಟ್ರಸ್​​ ಸಂಪುಟದಲ್ಲಿ ಭಾರತದ ಮೂಲದ ಬ್ಯಾರಿಸ್ಟರ್​ ಸುಯೆಲ್ಲಾ ಬ್ರಾವರ್​ಮನ್​ಗೆ ಅವಕಾಶ ಸಿಕ್ಕಿದೆ. ಇವರು ಬ್ರಿಟನ್​​ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಗೃಹ ಕಾರ್ಯದರ್ಶಿ ಸ್ಥಾನದಲ್ಲಿ ಭಾರತ ಮೂಲದ ಪ್ರೀತಿ ಪಟೇಲ್​ ಇದ್ದರು. ಆದರೆ ರಿಷಿ ಸುನಕ್​ಗೆ ಪ್ರಧಾನಿ ಹುದ್ದೆ ಕೈತಪ್ಪಿ, ಲಿಜ್​ ಟ್ರಸ್ ಆಯ್ಕೆಯಾಗುತ್ತಿದ್ದಂತೆ ಪ್ರೀತಿ ಪಟೇಲ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅವರಿಂದ ತೆರವಾದ ಹುದ್ದೆಗೆ ಸುಯೆಲ್ಲಾ ಬ್ರಾವರ್​​ಮನ್​ ಆಯ್ಕೆಯಾಗಿದ್ದಾರೆ.

ಸುಯೆಲ್ಲಾ ಬ್ರಾವರ್​​ಮನ್​​ಗೆ 42 ವರ್ಷ.​ ಅವರು ಇಂಗ್ಲೆಂಡ್​ನ ಆಗ್ನೇಯ ಭಾಗದ ಫರೆಹ್ಯಾಮ್ ಕ್ಷೇತ್ರ​ ಪ್ರತಿನಿಧಿಸುವ ಕನ್ಸರ್ವೇಟಿವ್​ ಪಕ್ಷದ ಸಂಸತ್​ ಸದಸ್ಯೆ. ಈ ಹಿಂದಿನ ಬೋರಿಸ್​ ಜಾನ್ಸನ್​​ ಸರ್ಕಾರದಲ್ಲಿ ಅಟಾರ್ನಿ ಜನರಲ್​ ಆಗಿದ್ದರು. ​ಬೋರಿಸ್​ ಜಾನ್ಸನ್​​ರನ್ನು ಪ್ರಧಾನಿ ಹುದ್ದೆ ಮತ್ತು ಕನ್ಸರ್ವೇಟಿವ್​ ಪಕ್ಷದ ನಾಯಕತ್ವ ಸ್ಥಾನದಿಂದ ತೆಗೆಯಬೇಕು ಎಂದು ಒತ್ತಾಯಿಸಿದವರಲ್ಲಿ ಇವರೂ ಅಗ್ರಗಣ್ಯರಾಗಿದ್ದರು. ಇವರನ್ನೀಗ ಗೃಹ ಕಾರ್ಯದರ್ಶಿಯನ್ನಾಗಿ ಲಿಜ್​ ಟ್ರಸ್​ ಅವರೇ ಆಯ್ಕೆ ಮಾಡಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾದ ಸುಯೆಲ್ಲಾ ಬ್ರಾವರ್​ಮನ್ ಅವರ ​​ತಾಯಿ ಹೆಸರು ಉಮಾ (ತಮಿಳಿಗರು). ತಂದೆ ಗೋವಾ ಮೂಲದ ಕ್ರಿಸ್ಟಿ ಫರ್ನಾಂಡಿಸ್. ಉಮಾ ಮಾರಿಷಸ್​​ನಲ್ಲಿದ್ದವರು ಯುಕೆಗೆ ವಲಸೆ ಹೋಗಿದ್ದರು. ಕೀನ್ಯಾದಲ್ಲಿದ್ದ ಕ್ರಿಸ್ಟಿ ಫರ್ನಾಂಡಿಸ್ 1960ರ ಹೊತ್ತಿಗೆ ಯುಕೆಗೆ ಬಂದಿದ್ದರು. ಸುಯೆಲ್ಲಾ ಬ್ರಾವರ್​ಮನ್​ ಬ್ರಿಟನ್​ನಲ್ಲೇ ಹುಟ್ಟಿ-ಬೆಳೆದಿದ್ದಾರೆ. ಇದೀಗ ಬಡ್ತಿ ಪಡೆದಿರುವ ಅವರು, ತನಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ಬಯಸುತ್ತೇನೆ ಮತ್ತು ತೆರಿಗೆ ಕಡಿತಗೊಳಿಸಲು ಇಚ್ಛಿಸುತ್ತೇನೆ ಎಂದು ಹೇಳಿದರು. ‘ಲಿಜ್​ ಟ್ರಸ್​ ಇದೀಗ ಪ್ರಧಾನಮಂತ್ರಿಯಾಗಿದ್ದಾರೆ. ಆಡಳಿತಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಅವರು ಕಲಿಯುವುದು ಬಾಕಿ ಇನ್ನೇನೂ ಇಲ್ಲ. ಆದರೆ ಅವರ ಹೊಸ ಜವಾಬ್ದಾರಿಯಲ್ಲಿ ಸವಾಲುಗಳೂ ಸಾಕಷ್ಟು ಇವೆ. ಕಳೆದ ಆರು ವರ್ಷಗಳಿಂದಲೂ ನಮ್ಮ ಪಕ್ಷಕ್ಕೆ ಕಷ್ಟವೇ ಇತ್ತು. ಸ್ಥಿರಗೊಳಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕಾಗಿದೆ’ ಎಂದೂ ತಿಳಿಸಿದರು.

ಸುಯೆಲ್ಲಾ 2018ರಲ್ಲಿ ರೇಲ್​ ಬ್ರಾವರ್​ಮನ್​​ರನ್ನು ವಿವಾಹವಾಗಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇವರು ಬುದ್ಧ ಧರ್ಮಕ್ಕೆ ಸೇರಿದ್ದು, ಲಂಡನ್​ನ ಬುದ್ಧಿಸ್ಟ್​ ಕೇಂದ್ರಕ್ಕೆ ಸದಾ ಭೇಟಿ ಕೊಡುತ್ತಿರುತ್ತಾರೆ. ನೂತನ ಗೃಹ ಕಾರ್ಯದರ್ಶಿಯಾಗಿ ಸಂಸತ್ತಿನಲ್ಲಿ ಬುದ್ಧನ ಬೋಧನೆಗಳಾದ ಧಮ್ಮಪದ ಧರ್ಮಗ್ರಂಥದ ಮೇಲೆ ಆಣೆ ಮಾಡಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಇದನ್ನೂ ಓದಿ: Liz Truss | ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌ ಹಿನ್ನೆಲೆ ಏನು? ಇವರ ಎದುರಿರುವ ಸವಾಲುಗಳು ಯಾವವು?

Exit mobile version