Site icon Vistara News

ಹಲ್ಲುಜ್ಜುವ ಬ್ರಷ್​​ನಿಂದ ಗೋಡೆ ಕೊರೆದು, ಜೈಲಿನಿಂದ ಪಾರಾಗಿದ್ದ ಇಬ್ಬರು ಕೈದಿಗಳು ಮರುದಿನವೇ ಅರೆಸ್ಟ್​!

Inmates escaped from prison are Arrested Again in Virginia

#image_title

ಹಲ್ಲುಜ್ಜುವ ಬ್ರಷ್​ ಮತ್ತು ಲೋಹದ ಸಾಧನವೊಂದನ್ನು ಬಳಸಿ, ಜೈಲಿನ ಗೋಡೆ ಕೊರೆದು ತೂತು ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಕೈದಿಗಳು (Inmates escape), ಅದಾಗಿ ಒಂದು ತಾಸಿನಲ್ಲಿ ಸಮೀಪದ ರೆಸ್ಟೋರೆಂಟ್​​ನಲ್ಲಿ ಸಿಕ್ಕಿಬಿದ್ದ ಘಟನೆ ವರ್ಜೀನಿಯಾದಲ್ಲಿ ನಡೆದಿದೆ. ಈ ಇಬ್ಬರು ಕೈದಿಗಳಲ್ಲಿ ಒಬ್ಬನಿಗೆ 37ವರ್ಷ ಮತ್ತು ಇನ್ನೊಬ್ಬನಿಗೆ 43ವರ್ಷ. ಒಬ್ಬಾತ ಹ್ಯಾಂಪ್ಟನ್​ ನಿವಾಸಿಯಾಗಿದ್ದು, ನ್ಯಾಯಾಂಗ ನಿಂದನೆ ಮತ್ತು ಇತರ ಕೇಸ್​ನಡಿ ಜೈಲುಪಾಲಾಗಿದ್ದ. ಇನ್ನೊಬ್ಬಾತ ಗ್ಲೌಸೆಸ್ಟರ್ ವಾಸಿಯಾಗಿದ್ದು, ಕ್ರೆಡಿಟ್ ಕಾರ್ಡ್​ ವಂಚನೆ, ಫೋರ್ಜರಿ ಮತ್ತು ಇನ್ನು ಹಲವು ಕೇಸ್​​ನಡಿ ಜೈಲು ಸೇರಿದ್ದ. ಅಂದಹಾಗೇ, ಇವರಿಬ್ಬರೂ ನ್ಯೂಸ್​ಪೋರ್ಟ್​ ನ್ಯೂಸ್ ಜೈಲ್​ ಅನೆಕ್ಸ್​​ನಲ್ಲಿ, ಒಂದೇ ಕೋಣೆಯಲ್ಲಿ ಇದ್ದರು.

ಸೋಮವಾರ ಸಂಜೆ ಕೈದಿಗಳನ್ನು ಲೆಕ್ಕ ಹಾಕುವಾಗ, ಇಬ್ಬರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಅವರಿದ್ದ ಕೋಣೆಯನ್ನು ಪರಿಶೀಲನೆ ಮಾಡಿದಾಗ ಗೋಡೆಗೆ ಒಂದು ತೂತಾಗಿರುವುದು ಕಂಡುಬಂದಿದೆ. ಅವರು ಅದನ್ನು ಟೂತ್​ಬ್ರಷ್​ ಮತ್ತು ಲೋಹದ ವಸ್ತುವಿನಿಂದ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಕೂಡಲೇ ಅವರಿಬ್ಬರ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿ, ಪತ್ತೆಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಹುಡುಕಾಟವನ್ನೂ ಶುರು ಮಾಡಿದ್ದರು. ಮರುದಿನ ಬೆಳಗ್ಗೆ ಅಂದರೆ ಮಂಗಳವಾರದ ಹೊತ್ತಿಗೆ ಇಬ್ಬರೂ, ಹ್ಯಾಂಪ್ಟನ್​​ನಲ್ಲಿರುವ ಐಎಚ್​​ಒಪಿ ರೆಸ್ಟೋರೆಂಟ್​​ನಲ್ಲಿ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಮತ್ತೆ ಅವರನ್ನು ಕಸ್ಟಡಿಗೆ ಪಡೆದಿದ್ದಾರೆ.

ಇದನ್ನೂ ಓದಿ: ನ್ಯಾಯಾಧೀಶರಿಗೇ ಕಾನೂನು ಪಾಠ ಹೇಳಿ, 250 ರೂ.ಕೊಡ್ತೇನೆ ಎಂದ ಏರ್ ಇಂಡಿಯಾ ಪ್ರಯಾಣಿಕ; ಜೈಲು ಶಿಕ್ಷೆ ವಿಧಿಸಿದ ಜಡ್ಜ್​​!

ಜೈಲಿನ ಗೋಡೆಯ ವಿನ್ಯಾಸವನ್ನು ಅವರು ಮೊದಲು ಅರಿತುಕೊಂಡಿದ್ದಾರೆ. ಬಳಿಕ ತಮ್ಮ ಕಾರ್ಯಾಚರಣೆ ನಡೆಸಿದ್ದರು. ಇನ್ನೊಮ್ಮೆ ಇಂಥ ಪ್ರಯತ್ನವನ್ನು ಯಾರೂ ಮಾಡದ ರೀತಿಯಲ್ಲಿ ನಾವು ಬಂದೋಬಸ್ತ್​ ಮಾಡುತ್ತೇವೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜೈಲಿನಿಂದ ಪರಾರಿಯಾಗಿದ್ದಕ್ಕೆ ಇಬ್ಬರ ವಿರುದ್ಧ ಹೆಚ್ಚುವರಿ ಕೇಸ್​ ಹಾಕಲಾಗಿದೆ.

Exit mobile version