Site icon Vistara News

ISIS Leader: ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥನ ಹತ್ಯೆ; ಎರ್ಡೊಗನ್‌ ಘೋಷಣೆ

Abu Hussein al-Qurashi

ಟರ್ಕಿ: ಜಾಗತಿಕ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನ ನಾಯಕ ಅಬು ಹುಸೇನ್ ಅಲ್-ಖುರಾಶಿಯನ್ನು ಟರ್ಕಿಯ ಗುಪ್ತಚರ ಪಡೆಗಳು ಸಿರಿಯಾದಲ್ಲಿ ಕೊಂದಿವೆ ಎಂದು ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಭಾನುವಾರ ಹೇಳಿದ್ದಾರೆ.

“ಈತನನ್ನು ನಿನ್ನೆ ಸಿರಿಯಾದಲ್ಲಿ ಟರ್ಕಿಯ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಮುಗಿಸಿದೆ. ಸಂಸ್ಥೆಯು ಖುರಾಶಿಯನ್ನು ಬಹಳ ಸಮಯದಿಂದ ಹಿಂಬಾಲಿಸಿತ್ತು ಎಂದು ಟರ್ಕ್ ಬ್ರಾಡ್‌ಕಾಸ್ಟರ್‌ಗೆ ನೀಡಿದ ಸಂದರ್ಶನದಲ್ಲಿ ಎರ್ಡೊಗನ್‌ ಹೇಳಿದ್ದಾರೆ. ಬಂಡುಕೋರ ಗುಂಪುಗಳಿಂದ ನಿಯಂತ್ರಿಸಲ್ಪಡುತ್ತಿರುವ ಉತ್ತರ ಸಿರಿಯನ್ ಪಟ್ಟಣವಾದ ಜಂಡರಿಸ್‌ನಲ್ಲಿ ಈ ದಾಳಿ ನಡೆದಿದೆ.

ಶನಿವಾರ ರಾತ್ರಿಯಿಡೀ ಜಂಡಾರಿಸ್‌ನ ಗಡಿಯಲ್ಲಿ ಸೇನೆ ಹಾಗೂ ಉಗ್ರರ ನಡುವೆ ಘರ್ಷಣೆಗಳು ನಡೆದಿವೆ. ಸ್ಥಳೀಯ ನಿವಾಸಿಗಳು ದೊಡ್ಡ ಸ್ಫೋಟವನ್ನು ಕೇಳಿದರು. ಆ ಪ್ರದೇಶಕ್ಕೆ ಯಾರೂ ಬರದಂತೆ ಭದ್ರತಾ ಪಡೆಗಳು ಸುತ್ತುವರಿದಿದ್ದವು ಎನ್ನಲಾಗಿದೆ. ಫೆಬ್ರವರಿ 6ರಂದು ಟರ್ಕಿ ಮತ್ತು ಸಿರಿಯಾ ಎರಡೂ ಕಡೆ ಸಂಭವಿಸಿದ ಭೂಕಂಪದಲ್ಲಿ ಹೆಚ್ಚು ಹಾನಿಗೊಳಗಾದ ಪಟ್ಟಣಗಳಲ್ಲಿ ಇದೂ ಒಂದು.

2022ರ ನವೆಂಬರ್‌ನಲ್ಲಿ ದಕ್ಷಿಣ ಸಿರಿಯಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ISISನ ಅಂದಿನ ನಾಯಕನನ್ನು ಕೊಲ್ಲಲಾಗಿತ್ತು. ನಂತರ ISIS ತನ್ನ ನಾಯಕನಾಗಿ ಅಲ್-ಕುರಾಶಿಯನ್ನು ಆಯ್ಕೆ ಮಾಡಿತ್ತು. ಇಸ್ಲಾಮಿಕ್ ಸ್ಟೇಟ್ 2014ರಲ್ಲಿ ಇರಾಕ್ ಮತ್ತು ಸಿರಿಯಾದ ಹಲವು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಸಮಯದಲ್ಲಿ ಅದರ ಮುಖ್ಯಸ್ಥನಾಗಿದ್ದ ಅಬು ಬಕರ್ ಅಲ್-ಬಾಗ್ದಾದಿ, ಆ ಪ್ರದೇಶದಾದ್ಯಂತ ಇಸ್ಲಾಮಿಕ್ ಕ್ಯಾಲಿಫೇಟ್ ಅನ್ನು ಘೋಷಿಸಿದ್ದ.

ಆದರೆ ಸಿರಿಯಾ ಮತ್ತು ಇರಾಕ್‌ನಲ್ಲಿ ಅಮೆರಿಕ ಬೆಂಬಲಿತ ಪಡೆಗಳು ಮತ್ತು ಇರಾನ್, ರಷ್ಯಾ ಮತ್ತು ವಿವಿಧ ಅರೆಸೇನಾ ಪಡೆಗಳ ಬೆಂಬಲದೊಂದಿಗೆ ಐಎಸ್‌ನ ಹಿಡಿತವನ್ನು ಧ್ವಂಸ ಮಾಡಿದ್ದವು. ಉಳಿದ ಸಾವಿರಾರು ಉಗ್ರಗಾಮಿಗಳು ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ಒಳನಾಡಿನಲ್ಲಿ ಅಡಗಿಕೊಂಡಿದ್ದಾರೆ. ರಹಸ್ಯ ಹಿಟ್-ಅಂಡ್-ರನ್ ದಾಳಿಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Sudan crisis : ಸೇನಾಪಡೆ ಮತ್ತು ಅರೆ ಸೇನಾಪಡೆ ನಡುವಿನ ಕಾಳಗಕ್ಕೆ ತತ್ತರಿಸಿದ ಬಡ ಸುಡಾನ್, ಏನಿದರ ಹಿನ್ನೆಲೆ?

Exit mobile version