Site icon Vistara News

Ismail Haniyeh: ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹಿನ್ನೆಲೆ ಏನು? ಈತನನ್ನು ಇಸ್ರೇಲ್‌ ಮುಗಿಸಿದ್ದೇಕೆ?

Ismail Haniyeh

ಇರಾನ್‌ನ (Iran) ಟೆಹ್ರಾನ್‌ನಲ್ಲಿ (Tehran) ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh) ಮತ್ತು ಅವರ ಅಂಗರಕ್ಷಕನೊಬ್ಬನನ್ನು ಇಸ್ರೇಲ್‌ ಹತ್ಯೆ ಮಾಡಿರುವುದು ಭಾರೀ ಸಂಚಲನ ಮೂಡಿಸಿದೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿ (Palestinian militant group) ತಂಡ ಬುಧವಾರ ಇದನ್ನು ಖಚಿತಪಡಿಸಿದೆ. ಟೆಹ್ರಾನ್‌ನಲ್ಲಿರುವ ಇಸ್ಮಾಯಿಲ್‌ ನಿವಾಸದ ಮೇಲೆ ದಾಳಿ ನಡೆದಿದ್ದು ಈ ವೇಳೆ ಇಸ್ಮಾಯಿಲ್ ಹನಿಯೆಹ್ ಕೊಲ್ಲಲ್ಪಟ್ಟಿದ್ದಾನೆ. ಈ ನಟೋರಿಯಸ್‌ ಇಸ್ಮಾಯಿಲ್‌ ಯಾರು ಎಂಬ ಮಾಹಿತಿ ಇಲ್ಲಿದೆ.

ಇಸ್ಮಾಯಿಲ್ ಹನಿಯೆಹ್ ಯಾರು?

ಮಧ್ಯಪ್ರಾಚ್ಯ ರಾಜಕೀಯ ವಲಯದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಇಸ್ಮಾಯಿಲ್ ಹನಿಯೆಹ್ ಗಾಜಾದ ಶತಿ ನಿರಾಶ್ರಿತರ ಶಿಬಿರದಲ್ಲಿ 1963ರಲ್ಲಿ ಜನಿಸಿದ್ದ. ವಿಶ್ವಸಂಸ್ಥೆಯ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಈತ 1987ರಲ್ಲಿ ಅರೇಬಿಕ್ ಸಾಹಿತ್ಯದಲ್ಲಿ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದಿದ್ದ. ವಿಶ್ವವಿದ್ಯಾನಿಲಯದಲ್ಲಿದ್ದಾಗ ಹಮಾಸ್‌ ಉಗ್ರಗಾಮಿ ಸಂಘಟನೆ ಜತೆ ಸೇರಿಕೊಂಡಿದ್ದ.

ಮೊದಲ ಬಾರಿಗೆ ಇಸ್ಮಾಯಿಲ್ ಹನಿಯೆಹ್ ಇಂತಿಫಾಡಾದಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ. ಇದಕ್ಕಾಗಿ ಇಸ್ರೇಲಿ ಮಿಲಿಟರಿ ನ್ಯಾಯಾಲಯದಿಂದ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳ ಇಸ್ರೇಲ್ ಮಿಲಿಟರಿ ಅಧಿಕಾರಿಗಳು ಹನಿಯೆಹ್‌ನನ್ನು ಹಿರಿಯ ಹಮಾಸ್ ನಾಯಕರಾದ ಅಬ್ದೆಲ್-ಅಜೀಜ್ ಅಲ್-ರಾಂಟಿಸ್ಸಿ, ಮಹಮೂದ್ ಜಹರ್, ಅಜೀಜ್ ದುವೈಕ್ ಮತ್ತು ಇತರ 400 ಕಾರ್ಯಕರ್ತರೊಂದಿಗೆ ಲೆಬನಾನ್‌ಗೆ ಗಡಿಪಾರು ಮಾಡಿದರು.

1997ರಲ್ಲಿ ಇಸ್ರೇಲ್ ಹಮಾಸ್ ಸಂಸ್ಥಾಪಕ ಅಹ್ಮದ್ ಯಾಸಿನ್ ಅವರನ್ನು ಬಿಡುಗಡೆ ಮಾಡಿದ ಅನಂತರ ಈತನನ್ನು ಹಮಾಸ್ ಕಚೇರಿಯ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು. 2005ರ ಡಿಸೆಂಬರ್‌ನಲ್ಲಿ ಹನಿಯೆಹ್ ಹಮಾಸ್ ಮುಖ್ಯಸ್ಥನಾಗಿ ಆಯ್ಕೆಯಾದ. 2006ರ ಶಾಸಕಾಂಗ ಚುನಾವಣೆಯಲ್ಲಿ ಹಮಾಸ್‌ನ ಗೆಲುವಿನ ಅನಂತರ ಹನಿಯೆಹ್ ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಸರ್ಕಾರದ ಪ್ರಧಾನ ಮಂತ್ರಿಯಾದ.

ಇದನ್ನೂ ಓದಿ: Ismail Haniyeh: ಇಸ್ರೇಲ್‌ನಿಂದ ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಬರ್ಬರ ಹತ್ಯೆ

ಫತಾಹ್- ಹಮಾಸ್ ಘರ್ಷಣೆಯ ನಡುವೆಯೇ 2006ರಲ್ಲಿ ಪ್ರಧಾನಿಯಾಗಿದ್ದ ಹನಿಯೆಹ್ ವಿದೇಶದಲ್ಲಿ ತನ್ನ ಮೊದಲ ಅಧಿಕೃತ ಪ್ರವಾಸದಿಂದ ಹಿಂದಿರುಗುತ್ತಿದ್ದಾಗ ರಫಾ ಬಾರ್ಡರ್ ಕ್ರಾಸಿಂಗ್‌ನಲ್ಲಿ ಈಜಿಪ್ಟ್‌ನಿಂದ ಗಾಜಾಕ್ಕೆ ಪ್ರವೇಶವನ್ನು ನಿರಾಕರಿಸಲ್ಪಟ್ಟ. ಅನಂತರ ಈತ ಗಡಿ ದಾಟಲು ಪ್ರಯತ್ನಿಸಿದಾಗ, ಗುಂಡಿನ ಚಕಮಕಿ ನಡೆದು ಒಬ್ಬ ಅಂಗರಕ್ಷಕ ಮೃತಪಟ್ಟು, ಹನಿಯೆಹ್ ಹಿರಿಯ ಮಗ ಗಾಯಗೊಂಡಿದ್ದ.

2007ರಲ್ಲಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅಧಿಕಾರಕ್ಕೆ ಬಂದಾಗ ಹನಿಯೆಹ್‌ನನ್ನು ಹುದ್ದೆಯಿಂದ ವಜಾಗೊಳಿಸಿದರು. ಇದು ಫತಾಹ್ ಮತ್ತು ಹಮಾಸ್ ಬಣಗಳ ನಡುವಿನ ರಾಜಕೀಯ ಸಂಘರ್ಷವನ್ನು ಹೆಚ್ಚಿಸಿತ್ತು. 2016ರ ಚುನಾವಣೆಯಲ್ಲಿ ಈತ ಹಮಾಸ್‌ನ ಮುಖ್ಯ ನಾಯಕ ಖಲೀದ್ ಮಶಾಲ್‌ನ ಉತ್ತರಾಧಿಕಾರಿಯಾಗಿದ್ದ. ಈತ ಇಸ್ರೇಲ್‌ ಭಾರೀ ತಲೆ ನೋವಾಗಿದ್ದ. ಹಾಗಾಗಿ ಇಸ್ರೇಲ್‌ ತಂತ್ರಜ್ಞಾನಗಳನ್ನೆಲ್ಲ ಬಳಸಿ ಪ್ಲ್ಯಾನ್‌ ಮಾಡಿ ಈತನ ಕತೆ ಮುಗಿಸಿದೆ.

Exit mobile version