Site icon Vistara News

Israel Attack: ರಹಸ್ಯ ತಾಣದಲ್ಲಿದ್ದ ಹಿಜ್ಬುಲ್ಲಾ ಕಮಾಂಡರ್‌ನನ್ನು ಒಂದು ಫೋನ್ ಕಾಲ್‌ ಮೂಲಕ ಕೊಂದು ಮುಗಿಸಿದ ಇಸ್ರೇಲ್!

Israel Attack

ಹಿರಿಯ ಹಿಜ್ಬುಲ್ಲಾ ಕಮಾಂಡರ್ (Hezbollah commander) ಫುದ್ ಶುಕ್ರ್ (Fuad Shukr)ನನ್ನು ಜುಲೈ 30ರಂದು ಇಸ್ರೇಲ್‌ ಕೊಂದು ಹಾಕಿದೆ. ಒಂದೇ ಒಂದು ಫೋನ್ ಕರೆ ಮಾಡುವ ಮೂಲಕ ಇಸ್ರೇಲ್ (Israel Attack) ಈತನ ಕತೆ ಮುಗಿಸಿದೆ. ಬೈರುತ್ ವಸತಿ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಫುದ್ ಶುಕ್ರ್‌ಗೆ ಸಂಜೆ 7 ಗಂಟೆ ಸುಮಾರಿಗೆ ಅಪರಿಚಿತ ಪೋನ್ ಕರೆಯೊಂದು ಬಂದಿತ್ತು. ಈ ಕರೆಯನ್ನು ಆಲಿಸುತ್ತ ಏಳನೇ ಮಹಡಿಗೆ ಹೋಗಿದ್ದ ಫುದ್ ಶುಕ್ರ್ ಹತನಾಗಿದ್ದಾನೆ.

ಕರೆ ಮಾಡಿದ ಅಪರಿಚಿತ ಶುಕ್ರ್‌ನನ್ನು ಏಳನೇ ಮಹಡಿಗೆ ಕರೆದಿದ್ದ. ಅತ್ಯಂತ ಗೌಪ್ಯ ಜೀವನ ನಡೆಸುತ್ತಿದ್ದ ಏನೋ ಮಹತ್ವದ ಸೂಚನೆ ಇದೆಯೆಂದು ಶುಕ್ರ್ ಕೂಡಲೇ ಕಟ್ಟಡದ ಏಳನೇ ಮಹಡಿಗೆ ಧಾವಿಸಿದ್ದ. ಅಲ್ಲಿ ಆತ ತೆರಳುತ್ತಿದ್ದಂತೆ ವೈಮಾನಿಕ ದಾಳಿ ನಡೆಯಿತು. ಶುಕ್ರ್, ಅತನ ಪತ್ನಿ, ಇತರ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಈ ವೇಳೆ ಸಾವಿಗೀಡಾಗಿದ್ದಾರೆ.

ಉಗ್ರಗಾಮಿ ನಾಯಕನಾಗಿದ್ದ ಆತ ದಕ್ಷಿಣ ಬೈರುತ್ ನೆರೆಹೊರೆಯ ದಹಿಯೆಹ್‌ನಲ್ಲೇ ಕೆಲಸ ಮಾಡುತ್ತಿದ್ದ. ಬೇರೆ ಕಡೆ ತಿರುಗಾಡುವುದನ್ನು ತಪ್ಪಿಸಲು ಆತ ಅಲ್ಲಿಯೇ ವಾಸಿಸುತ್ತಿದ್ದ. ಅವನ ಜೀವನವು ಎಷ್ಟು ರಹಸ್ಯವಾಗಿತ್ತೆಂದರೆ ಅವನನ್ನು ‘ಪ್ರೇತ’ ಎಂದು ಕರೆಯಲಾಗುತ್ತಿತ್ತು! ವೈಮಾನಿಕ ದಾಳಿ ನಡೆಸಿದವರಲ್ಲಿ ಕೆಲವರು ಅವನನ್ನು ಕೊಲ್ಲುವ ಮೊದಲು ಅವನ ಚಹರೆಯನ್ನು ಗುರುತುಪಡಿಸಿಕೊಂಡಿದ್ದರು.

ಶುಕ್ರ್ ಸಾವಿನ ಬಳಿಕ ಇರಾನ್ ಮತ್ತು ಹಿಜ್ಬುಲ್ಲಾ ಫೋನ್ ಕರೆಯನ್ನು ತನಿಖೆ ಮಾಡುತ್ತಿವೆ. ಫೋನ್ ಕರೆಯೇ ಅವನನ್ನು ಏಳನೇ ಮಹಡಿಗೆ ಕರೆದೊಯ್ದಿತು. ಇದರಿಂದಾಗಿ ಇಸ್ರೇಲ್ ಗೆ ಅವನನ್ನು ಹೊಡೆಯಲು ಸುಲಭವಾಯಿತು ಎಂದು ತಿಳಿದು ಬಂದಿದೆ. ಹಿಜ್ಬುಲ್ಲಾದ ಆಂತರಿಕ ಸಂವಹನ ಜಾಲವನ್ನು ನುಸುಳಿದ ವ್ಯಕ್ತಿಯಿಂದ ಕರೆ ಬಂದಿರಬಹುದು ಎನ್ನಲಾಗಿದೆ. ಇಸ್ರೇಲ್ ಉನ್ನತ ತಂತ್ರಜ್ಞಾನ ಮತ್ತು ಹ್ಯಾಕಿಂಗ್ ಕೌಶಲಗಳನ್ನು ಹೊಂದಿದ್ದು, ಅದರ ಕೌಂಟರ್‌ ಸರ್ವೇಲೆನ್ಸ್ ವ್ಯವಸ್ಥೆಯನ್ನು ಮೀರಿಸಿದೆ ಎಂಬುದು ಹಿಜ್ಬುಲ್ಲಾದ ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ. ಶುಕ್ರ್ ಸಾವಿಗಿಂತ ಕೆಲವು ಗಂಟೆಗಳ ಮೊದಲು ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರೊಂದಿಗೆ ಮಾತನಾಡಿದ್ದರು. ಇದನ್ನು ನಸ್ರಲ್ಲಾ ಅವರೇ ಹೇಳಿದ್ದಾರೆ.

ಫುದ್ ಶುಕ್ರ್ ಯಾರು?

30 ವರ್ಷಗಳ ಹಿಂದೆ ಹಿಜ್ಬುಲ್ಲಾಗೆ ಸೇರಿದ ಶುಕ್ರ್, 1983ರಲ್ಲಿ ಬೈರುತ್‌ನ ಮೆರೈನ್ ಬ್ಯಾರಕ್‌ಗಳ ಮೇಲೆ 241 ಅಮೇರಿಕನ್ ಸೈನಿಕರನ್ನು ಕೊಂದ ದಾಳಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆತನ ತಲೆಗೆ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಲಾಗಿತ್ತು.

1985ರ ಜೂನ್ 14ರಂದು ಇಸ್ರೇಲ್ ಜೈಲಿನಲ್ಲಿರುವ 700 ಕೈದಿಗಳನ್ನು ಬಿಡುಗಡೆ ಮಾಡಲು ವಿಮಾನವನ್ನು ಅಪಹರಿಸುವ ಯೋಜನೆ ರೂಪಿಸಿದ್ದ. ಅಪಹರಣಕಾರರ ಗುಂಪು ಅಥೆನ್ಸ್‌ನಿಂದ ಟೇಕ್ ಆಫ್ ಆದ ಅನಂತರ ಟಿಡಬ್ಲ್ಯೂಎ ಫ್ಲೈಟ್ 847 ಅನ್ನು ವಶಕ್ಕೆ ಪಡೆದುಕೊಂಡಿತ್ತು. ವಿಮಾನವು ಬೈರುತ್ ಮತ್ತು ಅಲ್ಜಿಯರ್ಸ್ ನಡುವೆ ಮೂರು ದಿನಗಳ ಕಾಲ ಹಾರಾಟ ನಡೆಸಿದ್ದು, ಬಳಿಕ ಆತ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: PM Narendra Modi: ರಾಜತಾಂತ್ರಿಕ ಮಾತುಕತೆಯೇ ಸಂಘರ್ಷಕ್ಕೆ ಪರಿಹಾರ..ದೂರವಾಣಿ ಮೂಲಕ ಮೋದಿ- ನೆತನ್ಯಾಹು ಸಂಭಾಷಣೆ

ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ಮಜ್ದಲ್ ಶಾಮ್ಸ್‌ನಲ್ಲಿ ಫುಟ್‌ಬಾಲ್ ಆಡುತ್ತಿದ್ದ 12 ಮಕ್ಕಳನ್ನು ಕೊಂದ ಕ್ಷಿಪಣಿ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ಆರೋಪಿಸಿ ಇಸ್ರೇಲ್ ಶುಕ್ರ್ ನ ಹತ್ಯೆ ಯೋಜನೆ ರೂಪಿಸಿತ್ತು. ಆದರೆ ಈ ದಾಳಿಯ ಹೊಣೆಗಾರಿಕೆಯನ್ನು ಹಿಜ್ಬುಲ್ಲಾ ನಿರಾಕರಿಸಿದೆ.

Exit mobile version