Site icon Vistara News

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Israel-Hamas Conflict

ಗಾಜಾ: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಸಂಘರ್ಷ(Israel-Hamas Conflict) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಇಸ್ರೇಲ್‌ ಸೇನೆ(Israeli Air Force) ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಉಗ್ರರ ಕಮಾಂಡರ್‌(Hamas Commander) ಅಹ್ಮದ್ ಹಸನ್ ಸಲಾಮೆ ಅಲ್ಸೌರ್ಕಾನನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಈ ಬಗ್ಗೆ ಇಸ್ರೇಲ್ ರಕ್ಷಣಾ ಪಡೆಗಳು ಅಧಿಕೃತ ಘೋಷಣೆ ಹೊರಡಿಸಿದೆ.

ಅಹ್ಮದ್ ಅಲ್ಸೌರ್ಕಾ ಹಮಾಸ್ ನುಖ್ಬಾ ಪಡೆಗಳಲ್ಲಿ ಕಮಾಂಡರ್ ಆಗಿದ್ದ. ದಕ್ಷಿಣ ಇಸ್ರೇಲ್‌ನಲ್ಲಿ ಅಕ್ಟೋಬರ್ 7 ರಂದು ನಡೆದ ಹತ್ಯಾಕಾಂಡದಲ್ಲಿ ಅವರು ಪ್ರಮುಖ ರೂವಾರಿಯಾಗಿದ್ದ. ಈ ಹತ್ಯಾಕಾಂಡದಲ್ಲಿ 1,189 ಜನರು ಸಾವನ್ನಪ್ಪಿದ್ದರು. IDF ಮತ್ತು ಇಸ್ರೇಲ್ ಸೆಕ್ಯುರಿಟಿ ಏಜೆನ್ಸಿ (ISA)ಯ ಗುಪ್ತಚರ ಮಾಹಿತಿ ಆಧಾರದ ಮೇಲೆ ಇಸ್ರೇಲಿ ವಾಯುಪಡೆಯು ಕಾರ್ಯಾಚರಣೆಯನ್ನು ನಡೆಸಿತು. ಉತ್ತರ ಗಾಜಾದ ಬೀಟ್ ಹನೌನ್ ಪ್ರದೇಶದಲ್ಲಿ ಅಲ್ಸೌರ್ಕಾ ತನ್ನ ಪಡೆಗಳೊಂದಿಗೆ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ್ದವು. ಇನ್ನು ಈ ಕಾರ್ಯಾಚರಣೆ ವಿಡಿಯೋ ಸಿಸಿಟಿವಿಯನ್ನು ರೆಕಾರ್ಡ್‌ ಆಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ. ಘಟನೆಯಲ್ಲಿ ನಾಗರಿಕರಿಗೆ ಯಾವುದೇ ಹಾನಿಗಳಾಗದಂತೆ ಎಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ಹಮಾಸ್‌ ಉಗ್ರರು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಇಸ್ರೇಲ್‌ ಪ್ರಜೆಗಳನ್ನು ರಕ್ಷಿಸಲಾಗಿತ್ತು. ಇಸ್ರೇಲ್‌ ರಕ್ಷಣಾ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಿ ತಮ್ಮ ದೇಶಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿತ್ತು. ದುರಾದೃಷ್ಟವಶಾತ್‌ ಈ ರಕ್ಷಣಾ ಕಾರ್ಯಾಚಣೆ ವೇಳೆ ಒಬ್ಬ ಇಸ್ರೇಲ್‌ ಯೋಧ ಹುತಾತ್ಮನಾಗಿದ್ದ.

ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21ವರ್ಷ), ಆಂಡ್ರೆ ಕೊಜ್ಲೋವ್‌ (27ವರ್ಷ) ಹಾಗೂ ಶ್ಲೋಮಿ ಝಿವ್‌ (40ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

ಇದನ್ನೂ ಓದಿ: International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

Exit mobile version