ಟೆಲ್ ಅವಿವ್: ಹಮಾಸ್ ಉಗ್ರರ (Hamas Terrorists) ಜೊತೆಗಿನ ಸಂಘರ್ಷದ ವೇಳೆ (Israel Palestine war) ಇಸ್ರೇಲ್‌ನ ಮೂವರು ಒತ್ತೆಯಾಳುಗಳನ್ನು (Hamas Hostages) ಇಸ್ರೇಲ್ ಮಿಲಿಟರಿ ಕೊಂದುಹಾಕಿದೆ. ಇದು ತಿಳಿಯದೆ ನಡೆದ ದೊಡ್ಡ ಪ್ರಮಾದವೆಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel PM Benjamin Netanyahu) ಹೇಳಿಕೊಂಡಿದ್ದಾರೆ.
ಗಾಜಾದಲ್ಲಿ ನಡೆದ ಯುದ್ಧದ ವೇಳೆ ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ತಮಗೆ ಅಪಾಯ ತರಬಹುದು ಎಂದು ತಪ್ಪಾಗಿ ಭಾವಿಸಿ ಇಸ್ರೇಲ್ ಸೇನೆ ಗುಂಡು ಹಾರಿಸಿ ಹತ್ಯೆ ಮಾಡಿದೆ. ಈ ಮೂವರು ಕಿಬ್ಬುತ್ಜ್ ಕ್ಫಾರ್‌ನಿಂದ ಅಪಹರಿಸಲ್ಪಟ್ಟ ಯೋತಮ್ ಹೈಮ್, ಕಿಬ್ಬುತ್ಜ್ ನಿರ್ ಆಮ್‌ನಿಂದ ಅಪಹರಿಸಲ್ಪಟ್ಟ ಸಮರ್ ತಲಲ್ಕಾ ಮತ್ತು ಅಲೋನ್ ಶಮ್ರಿಜ್ ಎಂದು ಗುರುತಿಸಲಾಗಿದೆ. ಮೂವರೂ ಅಕ್ಟೋಬರ್ 7ರಿಂದ ಹಮಾಸ್‌ನ ವಶದಲ್ಲಿದ್ದರು. ಯೋತಮ್ ಪ್ರತಿಭಾನ್ವಿತ ಸಂಗೀತಗಾರನಾಗಿದ್ದ. ಸಮೀರ್ ಸೈಕ್ಲಿಸ್ಟ್ ಆಗಿದ್ದ ಎಂದು ವರದಿ ತಿಳಿಸಿದೆ.
ಘಟನೆ ಬಗ್ಗೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಮಾಹಿತಿ ನೀಡಿದ್ದು, ತಪ್ಪಿನಿಂದ ಪ್ರಮಾದವಾಗಿದೆ. ಇದು ನಮಗೆ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ತನಿಖೆಯಲ್ಲಿ ಸಂಪೂರ್ಣ ಪಾರದರ್ಶಕತೆ ವಹಿಸುತ್ತೇವೆ, ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಐಡಿಎಫ್‌ನಿಂದ ದೊಡ್ಡ ಪ್ರಮಾದ ನಡೆದುಹೋಗಿದೆ. ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ಪ್ರಯತ್ನವನ್ನು ಮುಂದುವರಿಸುತ್ತೇವೆ. ಇಡೀ ಇಸ್ರೇಲ್ ಜನರಿಗೆ ನಾನು ತಲೆಬಾಗುತ್ತೇನೆ. ನಮ್ಮ ಮೂವರು ಪುತ್ರರ ಸಾವಿಗೆ ಸಂತಾಪ ಸೂಚಿಸುತ್ತೇನೆ. ನನ್ನ ಹೃದಯವು ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳಿಗೆ ಜೊತೆಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿ ದಾಳಿ ನಡೆಸಿದ 1,200 ಜನರನ್ನು ಕೊಂದಿದ್ದರು. 240 ಜನರನ್ನು ಒತ್ತೆಯಾಳುಗಳಾಗಿ ಕೊಂಡೊಯ್ದಿದ್ದರು. ಇಸ್ರೇಲ್ ನಂತರ ಪ್ರತಿದಾಳಿ ಪ್ರಾರಂಭಿಸಿತ್ತು. ಇದುವರೆಗೆ ಗಾಜಾದಲ್ಲಿ 19,000 ಜನರನ್ನು ಇಸ್ರೇಲ್ ಮಿಲಿಟರಿ ಹತ್ಯೆ ಮಾಡಿದೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವೆಂಬರ್ ಅಂತ್ಯದಲ್ಲಿ ಕದನ ವಿರಾಮ ನೀಡಲಾಗಿತ್ತು. ಆಗ ಹಮಾಸ್ 80ಕ್ಕೂ ಹೆಚ್ಚು ಇಸ್ರೇಲ್ ಮಹಿಳೆಯರು, ಮಕ್ಕಳು ಮತ್ತು ವಿದೇಶಿಯರನ್ನು ಬಿಡುಗಡೆ ಮಾಡಿತ್ತು. ಇತ್ತೀಚೆಗೆ ವಿಶ್ವಸಂಸ್ಥೆಯು ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಆಗ್ರಹಿಸಿ ನಿರ್ಣಯ ಮಂಡಿಸಿದೆ.
ಇದನ್ನೂ ಓದಿ: Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ