Site icon Vistara News

Israel Palestine War: ಇಸ್ರೇಲ್‌ ದಾಳಿಯಲ್ಲಿ ಅಲ್ ಜಜೀರಾ ಇಂಜಿನಿಯರ್‌ ಕುಟುಂಬದ 19 ಸದಸ್ಯರ ಸಾವು

israel bombing

ಟೆಲ್‌ ಅವಿವ್‌: ಗಾಜಾದ ನಿರಾಶ್ರಿತರ ಶಿಬಿರದ (Gaza refugee camp) ಮೇಲೆ ಇಸ್ರೇಲ್‌ (Israel Palestine War) ಮಂಗಳವಾರ ನಡೆಸಿದ ಬಾಂಬ್‌ ದಾಳಿಯಲ್ಲಿ ಅಲ್ ಜಜೀರಾ (Al Jazeera) ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುವ ಬ್ರಾಡ್‌ಕಾಸ್ಟ್ ಇಂಜಿನಿಯರ್ ಒಬ್ಬರ ಕುಟುಂಬದ 19 ಸದಸ್ಯರು ಮೃತಪಟ್ಟಿದ್ದಾರೆ.

ಹಮಾಸ್ ಕಾರ್ಯಕರ್ತರನ್ನು (Hamas terrorists) ಗುರಿಯಾಗಿಸಿಕೊಂಡು ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಇಸ್ರೇಲ್‌ನಿಂದ ಗಾಜಾದ ಅತಿದೊಡ್ಡ ನಿರಾಶ್ರಿತರ ಶಿಬಿರ ಜಬಾಲಿಯಾದ ಮೇಲೆ ಬಾಂಬ್ ದಾಳಿ ನಡೆದಿತ್ತು. ಇದರಲ್ಲಿ ಅಲ್‌ ಜಜೀರಾದ ಪರವಾಗಿ ಗಾಜಾ ಬ್ಯೂರೋದಲ್ಲಿ ಕೆಲಸ ಮಾಡುವ ಮೊಹಮದ್ ಅಬು ಅಲ್-ಕುಮ್ಸಾನ್ ಅವರ ಕುಟುಂಬ ಸದಸ್ಯರು ಸತ್ತಿದ್ದಾರೆ. ತನ್ನ ತಂದೆ, ಸಹೋದರ, ಇಬ್ಬರು ಸಹೋದರಿಯರು ಮತ್ತು ಎಂಟು ಸೋದರಳಿಯರು ಮತ್ತು ಸೊಸೆಯಂದಿರನ್ನು ಅವರು ಕಳೆದುಕೊಂಡಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ

ಕೆಲವು ದಿನಗಳ ಹಿಂದೆ, ಮತ್ತೊಬ್ಬ ಅಲ್ ಜಜೀರಾ ವರದಿಗಾರ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ತನ್ನ ಹೆಂಡತಿ, ಮಗ, ಮಗಳು ಮತ್ತು ಮೊಮ್ಮಗನನ್ನು ಕಳೆದುಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

ಹಮಾಸ್ ಅನ್ನು ಹತ್ತಿಕ್ಕಲು ಪ್ರತಿಜ್ಞೆ ಮಾಡಿರುವ ಇಸ್ರೇಲ್, ಜಬಾಲಿಯಾ ಶಿಬಿರದ ಮೇಲಿನ ದಾಳಿಯಲ್ಲಿ ಕನಿಷ್ಠ 47 ಜನರನ್ನು ಕೊಂದಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಹಮಾಸ್‌ ದಾಳಿಯಲ್ಲಿ ಭಾಗಿಯಾಗಿದ್ದ ಉನ್ನತ ಹಮಾಸ್ ಕಮಾಂಡರ್ ಇಬ್ರಾಹಿಂ ಬ್ಯಾರಿ ಕೂಡ ಸತ್ತಿದ್ದಾನೆ ಎಂದು ಇಸ್ರೇಲ್‌ ಆರ್ಮಿ ಹೇಳಿದೆ.

ತನ್ನ ಯುದ್ಧವಿಮಾನಗಳು ಸುರಂಗ ಸಂಕೀರ್ಣಕ್ಕೆ ಅಪ್ಪಳಿಸಿ ಕಮಾಂಡರ್ ಇಬ್ರಾಹಿಂ ಬ್ಯಾರಿ ಸೇರಿದಂತೆ ಹಲವಾರು ಹಮಾಸ್ ಕಾರ್ಯಕರ್ತರನ್ನು ಕೊಂದಿದೆ ಎಂದು ಇಸ್ರೇಲ್‌ ಹೇಳಿದೆ. ಆದರೆ ಶಿಬಿರದಲ್ಲಿ ತನ್ನ ಯಾವುದೇ ನಾಯಕರ ಉಪಸ್ಥಿತಿಯನ್ನು ಹಮಾಸ್ ನಿರಾಕರಿಸಿದೆ. ಇಸ್ರೇಲ್‌ ಮೇಲಿನ ಹಮಾಸ್ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಬ್ಯಾರಿ ಪ್ರಮುಖ ಪಾತ್ರ ವಹಿಸಿದ್ದಾನೆ. ಅದರಲ್ಲಿ 1,400 ಜನ ನಾಗರಿಕರು ಕೊಲ್ಲಲ್ಪಟ್ಟಿದ್ದರು.

ಇಸ್ರೇಲ್ ಗಾಜಾದಲ್ಲಿ ತನ್ನ ನೆಲದ ದಾಳಿಯನ್ನು ವಿಸ್ತರಿಸಿದೆ. ಹಮಾಸ್ ವಿರುದ್ಧದ ತನ್ನ ಯುದ್ಧದಲ್ಲಿ ಯಾವುದೇ ಕದನ ವಿರಾಮವಿಲ್ಲ ಎಂದು ಸಾರಿದೆ. ಇಸ್ರೇಲ್‌ನಿಂದ ಅಪಹರಿಸಲಾದ ಕನಿಷ್ಠ 230 ಒತ್ತೆಯಾಳುಗಳನ್ನು ಇನ್ನೂ ಹಮಾಸ್ ವಶದಲ್ಲಿ ಇಟ್ಟುಕೊಳ್ಳಲಾಗಿದೆ.

Exit mobile version