Site icon Vistara News

Israel Palestine War: 1,500 ಹಮಾಸ್ ಉಗ್ರರ ಹೆಣ ಕೆಡವಿದ ಇಸ್ರೇಲ್‌

Israel Palestine War

ಟೆಲ್‌ ಅವಿವ್:‌ ಗಾಜಾ ಪಟ್ಟಿಯ (Gaza strip) ಸುತ್ತಮುತ್ತ ಹಾಗೂ ಇಸ್ರೇಲ್‌ ಗಡಿಭಾಗದಲ್ಲಿ ಸುಮಾರು 1,500 ಹಮಾಸ್ ಕಾರ್ಯಕರ್ತರ (Hamas terrorists) ಶವಗಳು ಪತ್ತೆಯಾಗಿವೆ ಎಂದು ಇಸ್ರೇಲಿ ಮಿಲಿಟರಿ ಮಂಗಳವಾರ ತಿಳಿಸಿದೆ.

ಹಮಾಸ್‌ ಉಗ್ರರ ಮಾರಕ ದಾಳಿಗೆ (Hamas attack) ಇಸ್ರೇಲ್‌ ಭೀಕರ ಪ್ರತಿದಾಳಿ (Israel Palestine War) ನಡೆಸಿದ್ದು, ಗಾಜಾದಲ್ಲಿರುವ ಹಮಾಸ್‌ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿದೆ. ರಾಕೆಟ್‌ಗಳು, ಕ್ಷಿಪಣಿಗಳು ಹಾಗೂ ಡ್ರೋನ್‌ ಬಾಂಬ್‌ಗಳನ್ನು ಬಳಸಿದೆ.

ಗಾಜಾ ಪಟ್ಟಿಯ ಸುತ್ತ ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ ಎಂದು ಮಿಲಿಟರಿ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ ತಿಳಿಸಿದರು. ಇಸ್ರೇಲಿನ ಭದ್ರತಾ ಪಡೆಗಳು ಗಾಜಾದ ಗಡಿಯಲ್ಲಿ ಸಂಪೂರ್ಣ ನಿಯಂತ್ರಣವನ್ನು ಪುನಃಸ್ಥಾಪಿಸಿವೆ. ಕಳೆದ ರಾತ್ರಿಯಿಂದ ಯಾರೂ ಒಳಗೆ ಉಸುಳಿಲ್ಲ. ಆದರೆ ಉಗ್ರರ ಒಳನುಸುಳುವಿಕೆಗಳ ಸಾಧ್ಯತೆ ಇದ್ದೇ ಇದೆ. ಗಡಿಯ ಸುತ್ತಲಿನ ಇಸ್ರೇಲಿಗರ ಸಮುದಾಯಗಳ ಸ್ಥಳಾಂತರಿಸುವಿಕೆಯನ್ನು ಸೇನೆಯು ಬಹುತೇಕ ಪೂರ್ಣಗೊಳಿಸಿದೆ.

ಶನಿವಾರ ಬೆಳಗ್ಗೆ ಗಡಿಯಲ್ಲಿ ಒಳಗೆ ನುಸುಳಿ ಇಸ್ರೇಲ್‌ನೊಳಗೆ 900ಕ್ಕೂ ಹೆಚ್ಚು ಜನರನ್ನು ಕೊಂದ ಹಮಾಸ್ ಕಾರ್ಯಕರ್ತರ ಮಾರಣಾಂತಿಕ ದಾಳಿಗೆ ಇಸ್ರೇಲ್ ತತ್ತರಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಗುರಿಗಳ ಮೇಲೆ ಬೃಹತ್ ವಾಯು, ಕ್ಷಿಪಣಿ, ಬಾಂಬ್ ದಾಳಿಯನ್ನು ನಡೆಸುತ್ತಿದೆ. ಇದುವರೆಗೆ ಗಾಜಾದಲ್ಲಿ ಕನಿಷ್ಠ 687 ಜನ ಹತರಾಗಿದ್ದಾರೆ.

ಹಮಾಸ್‌ ಉಗ್ರರು ನೂರಕ್ಕೂ ಅಧಿಕ ಇಸ್ರೇಲಿಗರನ್ನು ಅಪಹರಿಸಿದ್ದು, ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಇಸ್ರೇಲ್‌ ಕ್ಷಿಪಣಿ ದಾಳಿ ನಡೆಸಿದರೆ ಒತ್ತೆಯಾಳುಗಳ ಶಿರಚ್ಛೇದನ ಮಾಡಿ ಅದನ್ನು ಪ್ರಸಾರ ಮಾಡುವುದಾಗಿ ಹಮಾಸ್‌ ಕ್ರೂರ ಬೆದರಿಕೆ ಒಡ್ಡಿದೆ.

Exit mobile version