Site icon Vistara News

Israel Palestine War: ಗಾಜಾ ಪ್ರಜೆಗಳ ರಕ್ಷಣೆ ಹೊಣೆ ನಮ್ಮದಲ್ಲ; ಸುರಂಗಗಳಿರುವುದು ನಮಗಾಗಿ: ಹಮಾಸ್‌

Israel Palestine War

ಟೆಲ್‌ ಅವಿವ್‌: ಗಾಜಾದ ನಾಗರಿಕರನ್ನು ರಕ್ಷಿಸುವುದು ವಿಶ್ವಸಂಸ್ಥೆ (UN) ಮತ್ತು ಇಸ್ರೇಲ್‌ನ ಜವಾಬ್ದಾರಿಯಾಗಿದೆ. ಗಾಜಾದಲ್ಲಿನ ಭೂಗತ ಸುರಂಗಗಳು ಪ್ಯಾಲೆಸ್ತೀನ್‌ ಹೋರಾಟಗಾರರನ್ನು (Palestine fighters) ರಕ್ಷಿಸುವ ಉದ್ದೇಶಕ್ಕಾಗಿ ಇವೆ ಎಂದು ಹಮಾಸ್ (Hamas terrorists) ನಾಯಕ ಮೌಸಾ ಅಬು ಮರ್ಜೌಕ್ ರಷ್ಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ.

ಕೊಲ್ಲಲ್ಪಡದಂತೆ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಸುರಂಗಗಳನ್ನು ನಿರ್ಮಿಸಿದ್ದೇವೆ. ಸುರಂಗದಲ್ಲಿದ್ದುಕೊಂಡು ಹೋರಾಡುವುದನ್ನು ಬಿಟ್ಟು ಇಸ್ಲಾಮಿಸ್ಟ್ ಗುಂಪಿಗೆ ಬೇರೆ ದಾರಿಯಿಲ್ಲ. ಇಸ್ರೇಲ್‌ನ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ನಮಗೆ ಅದು ಅಗತ್ಯವಾಗಿದೆ. ಗಾಜಾದ ಜನರ ಹೊಣೆ ನಮ್ಮದಲ್ಲ ಎಂದಿದ್ದಾನೆ.

ಏತನ್ಮಧ್ಯೆ, ಇಸ್ರೇಲಿ ಆಡಳಿತವು ʼಎರಡನೇ ಹಂತ’ ಎಂದು ಕರೆದಿರುವ ಯುದ್ಧವು ಉಲ್ಬಣಗೊಂಡಿದೆ. ಗಾಜಾ ಪಟ್ಟಿಯ ಪ್ರಮುಖ ನಗರವಾದ ಗಾಜಾಗೆ ಇಸ್ರೇಲಿ ಪಡೆಗಳು ನುಗ್ಗಿದ್ದು, ಹಮಾಸ್‌ ಉಗ್ರರು ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದ್ದಾರೆ. ಗಾಜಾ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಯುದ್ಧ ಪ್ರಾರಂಭವಾದಾಗಿನಿಂದ 8,300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ 3,457 ಅಪ್ರಾಪ್ತ ವಯಸ್ಕರು.

ಪ್ಯಾಲೇಸ್ತೀನಿಯನ್ ನಿರಾಶ್ರಿತರ ರಕ್ಷಣೆ ಮಾಡಬೇಕು. ತಕ್ಷಣದ ಮಾನವೀಯ ಕದನ ವಿರಾಮವು ಲಕ್ಷಾಂತರ ಜನರ ಜೀವನ ಮತ್ತು ಸಾವಿನ ವಿಷಯವಾಗಿದೆ. ಪ್ಯಾಲೆಸ್ತೀನಿಯನ್ನರು ಮತ್ತು ಇಸ್ರೇಲಿಗಳ ವರ್ತಮಾನ ಮತ್ತು ಭವಿಷ್ಯವು ಅದರ ಮೇಲೆ ಅವಲಂಬಿತವಾಗಿದೆ ಎಂದು ವಿಶ್ವಸಂಸ್ಥೆ ತಾಕೀತು ಮಾಡಿದೆ. ಇಸ್ರೇಲ್‌ನ ಗುಪ್ತಚರ ಸೇವೆ ಮೊಸ್ಸಾದ್‌ನ ಮುಖ್ಯಸ್ಥ ಡೇವಿಡ್ ಬರ್ನಿಯಾ, ಕತಾರ್‌ಗೆ ಭೇಟಿ ನೀಡಿ ಸಂಧಾನಕಾರರನ್ನು ಭೇಟಿಯಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಯತ್ನಗಳ ಕುರಿತು ಚರ್ಚಿಸಿದ್ದಾರೆ.

ಅಕ್ಟೋಬರ್ 7ರ ಹಮಾಸ್ ದಾಳಿಯ ಬಗ್ಗೆ ಸಾರ್ವಜನಿಕ ಕೋಲಾಹಲದ ನಡುವೆ, ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಾಜೀನಾಮೆ ನೀಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. “ನಾನು ರಾಜೀನಾಮೆ ನೀಡಲು ಉದ್ದೇಶಿಸಿರುವ ಏಕೈಕ ವಿಷಯವೆಂದರೆ ಹಮಾಸ್. ನಾವು ಅವರನ್ನು ಇತಿಹಾಸದ ಕಸದ ಬುಟ್ಟಿಗೆ ತಳ್ಳಲಿದ್ದೇವೆ. ಅದು ನನ್ನ ಗುರಿ. ಅದು ನನ್ನ ಜವಾಬ್ದಾರಿ” ಎಂದಿದ್ದಾರೆ.

ಇಸ್ರೇಲ್ ತನ್ನ ಆಕ್ರಮಣವನ್ನು ಹೆಚ್ಚಿಸುತ್ತಿದ್ದಂತೆ ಗಾಜಾಕ್ಕೆ ಸಹಾಯ ಸಾಗಣೆಗಳು ಸ್ವಲ್ಪಮಟ್ಟಿಗೆ ತೆರೆದುಕೊಳ್ಳಲು ಸಿದ್ಧವಾಗಿವೆ ಎಂದು ಇಸ್ರೇಲಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಾಳೆ ಅಥವಾ ಬುಧವಾರದಿಂದ ದಿನಕ್ಕೆ 100 ಟ್ರಕ್‌ಗಳ ಸಹಾಯವನ್ನು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಕಾರ್ಯತಂತ್ರದ ವ್ಯವಹಾರಗಳ ಸಚಿವ ರಾನ್ ಡರ್ಮರ್ ಹೇಳಿದರು.

ರಷ್ಯಾದ ಉತ್ತರ ಕಾಕಸಸ್‌ ಪ್ರದೇಶದಿಂದ ದೂರವಿರುವಂತೆ ಇಸ್ರೇಲ್ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಇಲ್ಲಿ ನಿನ್ನೆ ಇಸ್ರೇಲ್‌ನ ಟೆಲ್ ಅವೀವ್‌ನಿಂದ ಬಂದ ವಿಮಾನದ ಮೇಲೆ ನೂರಾರು ಆಕ್ರೋಶಿತ ಜನರ ದಾಳಿ ನಡೆದಿತ್ತು. ವಿಮಾನದಲ್ಲಿ ಬಂದಿರಬಹುದಾದ ಇಸ್ರೇಲಿ ಪ್ರಯಾಣಿಕರನ್ನು ಹುಡುಕಿಕೊಂಡು ನೂರಾರು ಮಂದಿ ದಾಳಿಯಿಟ್ಟಿದ್ದರು. ಯೆಹೂದಿ ವಿರೋಧಿ ಘೋಷಣೆಗಳನ್ನು ಕೂಗಿ, ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಇಲ್ಲಿನ ಮಖಚ್ಕಲಾ ಪ್ರದೇಶ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದೆ.

ಇದನ್ನೂ ಓದಿ: Israel Palestine War: ಹಮಾಸ್‌ ಉಗ್ರರಿಂದ ಬೆತ್ತಲೆ ಮೆರವಣಿಗೆಗೆ ಒಳಗಾದ ಜರ್ಮನ್‌ ಒತ್ತೆಯಾಳು ಯುವತಿ ಶವವಾಗಿ ಪತ್ತೆ

Exit mobile version