ಟೆಲ್ ಅವಿವ್: ಗಾಜಾದ (Gaza strip) ಅತಿದೊಡ್ಡ ನಿರಾಶ್ರಿತರ ಶಿಬಿರವಾದ ಜಬಾಲಿಯಾ ನಿರಾಶ್ರಿತರ ಶಿಬಿರದ (Jabalia refugee camp) ಮೇಲೆ ಇಸ್ರೇಲ್ ಸೈನ್ಯ (Israel defence force) ಬುಧವಾರ ಭೀಕರ ವಾಯುದಾಳಿ (Israel Palestine War) ನಡೆಸಿದೆ. ದಾಳಿಯಲ್ಲಿ ಪ್ರಮುಖ ಹಮಾಸ್ ಕಮಾಂಡರ್ ಇಬ್ರಾಹಿಂ ಬ್ಯಾರಿ (Hamas Leader Ibrahim Bari) ಎಂಬಾತನನ್ನು ಕೊಲ್ಲಲಾಗಿದೆ. ಇಸ್ರೇಲ್ ಮೇಲೆ ನಡೆದ ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಈತ ಪ್ರಮುಖವಾಗಿ ಭಾಗಿಯಾಗಿದ್ದ ಎನ್ನಲಾಗಿದೆ.
ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಡಜನ್‌ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಬ್ಯಾರಿಯನ್ನು ತೊಡೆದುಹಾಕಲು ನಿರಾಶ್ರಿತರ ಶಿಬಿರವನ್ನು ಧ್ವಂಸ ಮಾಡಿರುವುದಾಗಿ ಇಸ್ರೇಲ್‌ನ ರಕ್ಷಣಾ ಪಡೆಗಳು (IDF) ತಿಳಿಸಿವೆ.
ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಸ್ವಯಂಸೇವಕರು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆ ದೇಹಗಳು ಮತ್ತು ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಕನಿಷ್ಠ 47 ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
“ಸ್ವಲ್ಪ ಸಮಯದ ಹಿಂದೆ IDF ಯುದ್ಧವಿಮಾನಗಳು ಹಮಾಸ್ ಭಯೋತ್ಪಾದಕ ಸಂಘಟನೆಯ ಜಬಾಲಿಯಾ ಬ್ರಿಗೇಡ್‌ನ ಕಮಾಂಡರ್ ಇಬ್ರಾಹಿಂ ಬ್ಯಾರಿಯನ್ನು ಹತ್ಯೆ ಮಾಡಿತು. ಆತ ಅಕ್ಟೋಬರ್ 7ರಂದು ಮಾರಕ ಭಯೋತ್ಪಾದಕ ದಾಳಿಯನ್ನು ನಿರ್ದೇಶಿಸಿದವರಲ್ಲಿ ಒಬ್ಬನಾಗಿದ್ದ” ಎಂದು ಇಸ್ರೇಲಿ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. “ದಾಳಿಯ ವೇಳೆ ಈ ಕಟ್ಟಡಗಳ ಕೆಳಗಿದ್ದ ಹಮಾಸ್‌ನ ಭೂಗತ ಮಿಲಿಟರಿ ಮೂಲಸೌಕರ್ಯ ಕುಸಿದು ಅನೇಕ ಹಮಾಸ್ ಭಯೋತ್ಪಾದಕರನ್ನು ಬಲಿ ತೆಗೆದುಕೊಂಡಿತು” ಎಂದು ಸೈನ್ಯ ಹೇಳಿದೆ.
ಹಮಾಸ್ ಭಯೋತ್ಪಾದಕ ಗುಂಪಿನ ಮಿಲಿಟರಿ ವಿಭಾಗವಾಗಿರುವ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್, ಗಾಜಾವನ್ನು ʼಇಸ್ರೇಲಿ ಪಡೆಗಳ ಸ್ಮಶಾನʼವಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಹಮಾಸ್ ನಡೆಸುತ್ತಿರುವ ಗಜಾನ್ ಆರೋಗ್ಯ ಸಚಿವಾಲಯವು, ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸತ್ತು 150 ಮಂದಿ ಗಾಯಗೊಂಡಿದ್ದಾರೆ ಎಂದಿದೆ. ಇದು ಇಸ್ರೇಲಿನ ಘೋರ ಹತ್ಯಾಕಾಂಡ. ಇನ್ನೂ ಹೆಚ್ಚಿನ ಮಂದಿ ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದಿದೆ.
ಈಜಿಪ್ಟ್ ದೇಶ ಈ ದಾಳಿಗಾಗಿ ಇಸ್ರೇಲ್ ಅನ್ನು ಖಂಡಿಸಿದೆ. ಗಾಯಗೊಂಡ ಪ್ಯಾಲೆಸ್ತೀನಿಯನ್ನರಿಗೆ ಚಿಕಿತ್ಸೆ ನೀಡಲು ರಾಫಾ ಕ್ರಾಸಿಂಗ್ ಅನ್ನು ತೆರೆಯುವುದಾಗಿ ಹೇಳಿದೆ. ಹಮಾಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಪ್ರಾರಂಭವಾದಾಗಿನಿಂದ ನಾಗರಿಕರಿಗೆ ಅದು ಗಡಿಯನ್ನು ತೆರೆದಿರಲಿಲ್ಲ. “ಇಂತಹ ದಾಳಿಯು ರಾಜಿಸಂಧಾನದ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ” ಎಂದು ಕತಾರ್ ಎಚ್ಚರಿಸಿದೆ.
ಇದನ್ನೂ ಓದಿ: Israel Palestine War: ಇಸ್ರೇಲ್ ಮೇಲೆ ದಾಳಿಗೆ ಆದೇಶಿಸಿದ್ದ ಹಮಾಸ್ ಉಗ್ರನ ಹತ್ಯೆ