Site icon Vistara News

Israel Palestine War: ಹಮಾಸ್‌ ಉಗ್ರರಿಂದ ಬೆತ್ತಲೆ ಮೆರವಣಿಗೆಗೆ ಒಳಗಾದ ಜರ್ಮನ್‌ ಒತ್ತೆಯಾಳು ಯುವತಿ ಶವವಾಗಿ ಪತ್ತೆ

shani louk german girl

ಟೆಲ್‌ ಅವೀವ್‌: ಪ್ಯಾಲೆಸ್ತೀನ್‌ ಉಗ್ರರು (Hamas terrorists) ಇಸ್ರೇಲ್‌ ಮೇಲಿನ ದಾಳಿಯ ವೇಳೆ ಸೆರೆಹಿಡಿದು ಜೀಪಿನಲ್ಲಿ (hamas hostage) ಕೊಂಡೊಯ್ದ ಜರ್ಮನ್‌ ಯುವತಿ ಶಾನಿ ಲೂಕ್‌ (Shani Louk) ಎಂಬಾಕೆ ಶವವಾಗಿ ಪತ್ತೆಯಾಗಿದ್ದಾಳೆ. ಇಸ್ರೇಲ್‌ ಅಧಿಕಾರಿಗಳು ಹಾಗೂ ಆಕೆಯ ಕುಟುಂಬಸ್ಥರು ಇದನ್ನು ಖಚಿತಪಡಿಸಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಉಗ್ರರಿಂದ ಸೆರೆಹಿಡಿಯಲ್ಪಟ್ಟ ಜರ್ಮನ್ ಮಹಿಳೆ ಶಾನಿ ಲೂಕ್ ಸಾವನ್ನಪ್ಪಿದ್ದು, ಆಕೆಯ ಶವವನ್ನು ಇಸ್ರೇಲ್ ಸೈನಿಕರು ಗಾಜಾದಲ್ಲಿ ಪತ್ತೆ ಮಾಡಿದ್ದಾರೆ ಎಂದು ಅವರ ಕುಟುಂಬ ಮತ್ತು ಇಸ್ರೇಲ್ ಸರ್ಕಾರ ಇಂದು ಖಚಿತಪಡಿಸಿದೆ. “ನನ್ನ ಸಹೋದರಿಯ ಮರಣವನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ” ಎಂದು ಆಕೆಯ ಸಹೋದರಿ ಆದಿ ಲೌಕ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್‌ನ ಅನಿರೀಕ್ಷಿತ ದಾಳಿಯ ಗುರಿಗಳಲ್ಲಿ ಒಂದಾದ ಗಾಜಾ ಗಡಿಯ ಬಳಿ ಸೂಪರ್‌ನೋವಾ ಸಂಗೀತ ಉತ್ಸವದಲ್ಲಿ ಶಾನಿ ಲೂಕ್‌ (23) ಭಾಗವಹಿಸಿದ್ದಳು. ಆಕೆಯನ್ನು ಉಗ್ರರು ಅರೆಬೆತ್ತಲೆಯಾಗಿಯೇ ಜೀಪಿನಲ್ಲಿ ಕೊಂಡೊಯ್ಯುತ್ತಿರುವ, ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿತ್ತು.

ಅವಳು ನಾಪತ್ತೆಯಾದ ನಂತರ, ಶಾನಿ ಲೂಕ್‌ಳನ್ನು ಮರಳಿ ಪಡೆಯಲು ಜರ್ಮನ್ ಮತ್ತು ಇಸ್ರೇಲ್ ಸರ್ಕಾರಗಳನ್ನು ಕೋರಿ ಆಕೆಯ ತಾಯಿ ರಿಕಾರ್ಡಾ ಲೌಕ್ ಮಾಡಿದ ಮನವಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. “ನಮ್ಮ ಮಗಳು ಪ್ಯಾಲೆಸ್ಟೀನಿಯನ್ನರೊಂದಿಗೆ ಕಾರಿನಲ್ಲಿ ಪ್ರಜ್ಞಾಹೀನಳಾಗಿರುವುದನ್ನು ಮತ್ತು ಅವರು ಆಕೆಯನ್ನು ಕರೆದೊಯ್ಯುತ್ತಿರುವುದನ್ನು ಸ್ಪಷ್ಟವಾಗಿ ಕಾಣುವ ವೀಡಿಯೊವನ್ನು ನಮಗೆ ಕಳುಹಿಸಲಾಗಿದೆ” ಎಂದು ಅವರು ವೀಡಿಯೊದಲ್ಲಿ ಹೇಳಿದ್ದರು.

23 ವರ್ಷದ ಶಾನಿಯನ್ನು ಸೆರೆಹಿಡಿದ ನಂತರ ಪಿಕ್ ಅಪ್ ಟ್ರಕ್‌ನಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿತ್ತು. ಭಯೋತ್ಪಾದಕ ದಾಳಿಯ ನಂತರದ ತಕ್ಷಣ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ಶಾನಿ ಪಿಕಪ್ ಟ್ರಕ್‌ನಲ್ಲಿ ಮುಖ ಅಡಿಯಾಗಿ ಮಲಗಿದ್ದಳು. ಶಾನಿಯನ್ನು ಆಕೆಯ ವಿಶಿಷ್ಟವಾದ ಹಚ್ಚೆಗಳಿಂದ ಗುರುತಿಸಲಾಗಿತ್ತು. Xನಲ್ಲಿ ಆಕೆಯ ಸಾವಿನ ಸುದ್ದಿಯನ್ನು ಹಂಚಿಕೊಂಡ ಇಸ್ರೇಲ್, “ಸಂಗೀತೋತ್ಸವದಿಂದ ಅಪಹರಿಸಲ್ಪಟ್ಟ ಮತ್ತು ಹಮಾಸ್ ಭಯೋತ್ಪಾದಕರಿಂದ ಗಾಜಾದಲ್ಲಿ ಚಿತ್ರಹಿಂಸೆ ಮತ್ತು ಮೆರವಣಿಗೆಗೆ ಒಳಗಾದ ಶಾನಿ, ಊಹಿಸಲಾಗದ ಭಯಾನಕ ಹಿಂಸೆಯನ್ನು ಅನುಭವಿಸಿದ್ದಾರೆ. ನಮ್ಮ ಹೃದಯಗಳು ಭಗ್ನಗೊಂಡಿವೆ” ಎಂದಿದೆ.

ಶಾನಿ, ಹಮಾಸ್ ಗುಂಪು ಸ್ಥಳಕ್ಕೆ ನುಗ್ಗುವ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಸಂಗೀತೋತ್ಸವದ ತುಣುಕುಗಳನ್ನು, ತನ್ನ ಸ್ನೇಹಿತರೊಂದಿಗೆ ನೃತ್ಯ ಮತ್ತು ಹಾಡುವುದನ್ನು ಪೋಸ್ಟ್‌ ಮಾಡಿದ್ದಳು. ಜರ್ಮನ್ ಪೇಪರ್ DW ಪ್ರಕಾರ, ಶಾನಿ, ಹಮಾಸ್ ಉಗ್ರರು ನುಗ್ಗಿದಾಗ ಪಲಾಯನ ಮಾಡಲು ಪ್ರಯತ್ನಿಸಿದ್ದಳು. ಉಗ್ರರು ಆಕೆಯನ್ನು ಗಾಜಾಕ್ಕೆ ಕರೆದೊಯ್ದುದಲ್ಲದೆ, ಅಲ್ಲಿ ಅವಳನ್ನು ಥಳಿಸುವುದನ್ನೂ ವಿಡಿಯೋ ಮಾಡಿದ್ದರು.

ಇದನ್ನೂ ಓದಿ: Israel Palestine War: ಗಾಜಾ ನಗರದಲ್ಲಿ ಇಸ್ರೇಲ್‌ ಅಬ್ಬರ; ಉಗ್ರರಿಂದ ಯೋಧೆಯ ರಕ್ಷಣೆ

Exit mobile version