ಬೀಜಿಂಗ್: ಇಸ್ರೇಲ್ ಮೇಲೆ ಉಗ್ರಗಾಮಿ ಗುಂಪು ಹಮಾಸ್ ನಡೆಸಿದ ದಾಳಿಗಳ (Hamas attack) ಕಾರಣದಿಂದ ಪ್ಯಾಲೆಸ್ತೀನ್ ಮೇಲೆ (Israel Palestine War) ಇಸ್ರೇಲ್ ವಿಧಿಸಿರುವ ʼಸಾಮೂಹಿಕ ಶಿಕ್ಷೆʼಯನ್ನು ಸಮರ್ಥಿಸಲಾಗುವುದಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ (UN chief Antonio Guterres) ಬುಧವಾರ ಹೇಳಿದ್ದಾರೆ.
ಚೀನಾದಲ್ಲಿ ನಡೆದ ಆರ್ಥಿಕ ಕಾರ್ಯಕ್ರಮವೊಂದರ ವೇದಿಕೆಯಿಂದ ಮಾತನಾಡಿದ ಗುಟೆರಸ್, ತಕ್ಷಣ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿ 1,400ಕ್ಕೂ ಹೆಚ್ಚು ಜನರನ್ನು ಕೊಂದ ಹಮಾಸ್ ಕೃತ್ಯವನ್ನು ಅವರು ʼಭಯೋತ್ಪಾದಕ ಕೃತ್ಯʼ ಎಂದು ಖಂಡಿಸಿದ್ದು, ಅದನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಆ ದಾಳಿಗಳ ಕಾರಣದಿಂದ ಪ್ಯಾಲೆಸ್ತೀನ್ ಜನರ ಮೇಲೆ ವಿಧಿಸಲಾಗುತ್ತಿರುವ ಸಾಮೂಹಿಕ ಶಿಕ್ಷೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದರು.
ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಅವರು ಮನವಿ ಮಾಡಿದರು. “ಎರಡು ತುರ್ತು ಮಾನವೀಯ ಮನವಿಗಳ”ನ್ನು ಅವರು ಮಾಡಿದರು. ಒಂದು, ಹಮಾಸ್ ಸಂಘಟನೆಯಿಂದ ಇಸ್ರೇಲಿ ಒತ್ತೆಯಾಳುಗಳ ತಕ್ಷಣದ ಮತ್ತು ಬೇಷರತ್ತಾದ ಬಿಡುಗಡೆ. ಕನಿಷ್ಠ 199 ಜನರನ್ನು ತಮ್ಮ ಆಕ್ರಮಣದ ಸಮಯದಲ್ಲಿ ಉಗ್ರಗಾಮಿಗಳು ಅಪಹರಿಸಿದ್ದಾರೆ. ಎರಡನೆಯದು, ಗಾಜಾದ ಜನರ ಮೂಲಭೂತ ಅಗತ್ಯಗಳಿಗೆ ಸ್ಪಂದಿಸಲು ಮಾನವೀಯ ನೆರವಿನ ಒದಗಣೆಗಾಗಿ ಇಸ್ರೇಲ್‌ನಿಂದ ಅನುಮತಿ. ಗಾಜಾದ ಸಂತ್ರಸ್ತರಲ್ಲಿ ಬಹುಪಾಲು ಮಹಿಳೆಯರು ಮತ್ತು ಮಕ್ಕಳಿದ್ದಾರೆ.
ನನ್ನ ಎರಡು ಮನವಿಗಳನ್ನು ಅರಿತುಕೊಳ್ಳಲು, ನಾವು ನೋಡುತ್ತಿರುವ ಮಾನವ ಸಂಕಟವನ್ನು ಕೊನೆಗೊಳಿಸಲು ಸಾಕಷ್ಟು ಸಮಯ ಮತ್ತು ಸ್ಥಳವನ್ನು ಒದಗಿಸಲು ತಕ್ಷಣದ ಮಾನವೀಯ ಕದನ ವಿರಾಮಕ್ಕೆ ನಾನು ಕರೆ ನೀಡುತ್ತೇನೆ ಎಂದು ಗುಟೆರೆಸ್ ಹೇಳಿದರು.
ಸಮರದಿಂದಾಗಿ ಹಲವು ಜೀವಗಳು ಮತ್ತು ಇಡೀ ಪ್ರದೇಶದ ಭವಿಷ್ಯ ಅಸಮತೋಲನದಲ್ಲಿದೆ. 56 ವರ್ಷಗಳ ಆಕ್ರಮಣದಿಂದಾಗಿ ಪ್ಯಾಲೆಸ್ತೀನಿಯರಿಗೆ ಆಗಿರುವ ಕುಂದುಕೊರತೆಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಆದರೆ ಈ ಕುಂದುಕೊರತೆಗಳು ಎಷ್ಟು ಗಂಭೀರವಾಗಿದ್ದರೂ ಅಕ್ಟೋಬರ್ 7ರಂದು ಹಮಾಸ್ ಮಾಡಿದ ಭಯೋತ್ಪಾದಕ ಕೃತ್ಯಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದರು.
ಮಂಗಳವಾರ ತಡರಾತ್ರಿ ಗಾಜಾದ ಆಸ್ಪತ್ರೆಯೊಂದರಲ್ಲಿ ನೂರಾರು ಜನರನ್ನು ಕೊಂದ ಮಾರಣಾಂತಿಕ ಸ್ಫೋಟದಿಂದ ತಾನು ಗಾಬರಿಗೊಂಡಿದ್ದೇನೆ. ನನ್ನ ಹೃದಯವು ಸಂತ್ರಸ್ತರ ಕುಟುಂಬಗಳೊಂದಿಗೆ ಇದೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ರಕ್ಷಿಸಬೇಕು ಎಂದವರು ಈ ಮೊದಲು ಹೇಳಿದ್ದರು.
ಆಸ್ಪತ್ರೆಯಲ್ಲಿ ನಡೆದ ಸ್ಫೋಟಕ್ಕೆ ಹಮಾಸ್ ಸಂಘಟನೆ ಇಸ್ರೇಲ್ ಅನ್ನು ದೂಷಿಸಿವೆ. ಗಾಜಾದಲ್ಲಿ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿಗಳು ನಡೆಸಿದ ರಾಕೆಟ್‌ನಿಂದ ಇದು ಸಂಭವಿಸಿದೆ ಎಂದು ಇಸ್ರೇಲ್ ಪ್ರತಿಯಾಗಿ ಹೇಳಿದೆ.
ಇದನ್ನೂ ಓದಿ: Israel Palestine War: ಗಾಜಾ ಆಸ್ಪತ್ರೆ ಮೇಲೆ ದಾಳಿ; ಇಸ್ಲಾಂ ದೇಶಗಳ ಜತೆ ಬೈಡನ್ ಸಭೆಯೇ ರದ್ದು!