Site icon Vistara News

Israel Palestine War: ಹಮಾಸ್‌ ಉಗ್ರರಿಂದ ಇಬ್ಬರು ಅಮೆರಿಕನ್‌ ಒತ್ತೆಯಾಳುಗಳ ಬಿಡುಗಡೆ

us hostages

ಟೆಲ್‌ ಅವಿವ್‌: ಹಮಾಸ್‌ ಉಗ್ರರಿಂದ (Hamas terrorists) ಗಾಜಾ ಪಟ್ಟಿಯಲ್ಲಿ (Gaza strip) ಒತ್ತೆಯಾಳಾಗಿದ್ದ (Hamas hostages) ಇಬ್ಬರು ಅಮೆರಿಕನ್ನರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಜುಡಿತ್ ತೈ ರಾನನ್ ಮತ್ತು ಅವರ ಹದಿಹರೆಯದ ಮಗಳು ನಟಾಲಿ ಶೋಷನಾ ರಾನನ್ ಅವರನ್ನು ಇಸ್ರೇಲಿ ರಾಯಭಾರಿ ಗಾಜಾ ಗಡಿಯಲ್ಲಿ ಭೇಟಿಯಾಗಿದ್ದು, ಮಧ್ಯ ಇಸ್ರೇಲ್‌ನಲ್ಲಿರುವ (Israel Palestine War) ಮಿಲಿಟರಿ ನೆಲೆಗೆ ಕರೆದೊಯ್ದಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡೆನ್ (US President Joe Biden), ಒತ್ತೆಯಾಳುಗಳ ಬಿಡುಗಡೆಯನ್ನು ದೃಢಪಡಿಸಿದ್ದಾರೆ. ಅವರ ಚೇತರಿಕೆಯ ಪ್ರಕ್ರಿಯೆಯಲ್ಲಿ ಸರ್ಕಾರ ಇಬ್ಬರನ್ನೂ ಸಂಪೂರ್ಣವಾಗಿ ಬೆಂಬಲಿಸಲಿ ಎಂದಿದ್ದಾರೆ. “ಇಸ್ರೇಲ್ ವಿರುದ್ಧದ ಭೀಕರ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಹಮಾಸ್ ಒತ್ತೆಯಾಳಾಗಿದ್ದ ಇಬ್ಬರು ಅಮೆರಿಕನ್ನರನ್ನು ನಾವು ಬಿಡುಗಡೆ ಮಾಡಿದ್ದೇವೆ. ನಮ್ಮ ನಾಗರಿಕರು ಕಳೆದ 14 ದಿನಗಳಲ್ಲಿ ಭೀಕರ ಅಗ್ನಿಪರೀಕ್ಷೆ ಅನುಭವಿಸಿದ್ದಾರೆ. ಭಯದಿಂದ ಜರ್ಜರಿತವಾಗಿರುವ ತಮ್ಮ ಕುಟುಂಬದೊಂದಿಗೆ ಅವರು ಶೀಘ್ರದಲ್ಲೇ ಮತ್ತೆ ಸೇರುತ್ತಾರೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಇವರು ಮತ್ತು ಕುಟುಂಬವು ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಸಂಪೂರ್ಣ ಬೆಂಬಲ ಹೊಂದಿದೆ” ಎಂದು ಬೈಡೆನ್‌ ಹೇಳಿದ್ದಾರೆ.

ಹಮಾಸ್‌ ಉಗ್ರರು ಸೆರೆಹಿಡಿದಿರುವ 200ಕ್ಕೂ ಹೆಚ್ಚು ಒತ್ತೆಯಾಳುಗಳಲ್ಲಿ ರಾನನ್ ಜೋಡಿ ಬಿಡುಗಡೆಯಾದ ಮೊದಲಿಗರು. ಹಮಾಸ್ ತನ್ನ ʻನಾಗರಿಕ ಒತ್ತೆಯಾಳುʼಗಳನ್ನು ಮುಕ್ತಗೊಳಿಸಲು ಕತಾರ್ ಮತ್ತು ಈಜಿಪ್ಟ್‌ನೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ.

ಇಬ್ಬರು ಅಮೆರಿಕನ್ನರು ಸುರಕ್ಷಿತವಾಗಿ ಇಸ್ರೇಲಿ ಅಧಿಕಾರಿಗಳ ಕೈ ಸೇರಿದ್ದಾರೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ತಿಳಿಸಿದರು. “ಅವರು ಅಗತ್ಯವಿರುವ ಯಾವುದೇ ಬೆಂಬಲ ಸಹಾಯವನ್ನು ಸ್ವೀಕರಿಸಲಿದ್ದಾರೆ. ಅವರ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ. ಅವರ ಕುಟುಂಬಗಳು ಅನುಭವಿಸುತ್ತಿರುವ ಸಮಾಧಾನವನ್ನು ನಾವು ಹಂಚಿಕೊಳ್ಳುತ್ತೇವೆ. ಆದರೆ ಈ ಸಂಘರ್ಷದಲ್ಲಿ ಇನ್ನೂ ಹತ್ತು ಅಮೆರಿಕನ್ನರು ಲೆಕ್ಕಕ್ಕೆ ಸಿಗದೆ ಉಳಿದಿದ್ದಾರೆ” ಎಂದು ಬ್ಲಿಂಕೆನ್ ಹೇಳಿದ್ದಾರೆ.

“ಅವರಲ್ಲಿ ಕೆಲವರು ಹಮಾಸ್ ಒತ್ತೆಯಾಳುಗಳಾಗಿದ್ದಾರೆ. ಜೊತೆಗೆ ಗಾಜಾದಲ್ಲಿ ಅಂದಾಜು 200 ಇತರ ಒತ್ತೆಯಾಳುಗಳಿದ್ದಾರೆ. ಅವರಲ್ಲಿ ಅನೇಕ ರಾಷ್ಟ್ರಗಳ ಪುರುಷರು, ಮಹಿಳೆಯರು, ಯುವಕರು, ಯುವತಿಯರು ಮತ್ತು ವೃದ್ಧರು ಸೇರಿದ್ದಾರೆ. ಅವರಲ್ಲಿ ಪ್ರತಿಯೊಬ್ಬರನ್ನೂ ಬಿಡುಗಡೆ ಮಾಡಬೇಕು. ಪ್ರತಿ ಒತ್ತೆಯಾಳಿನ ಬಿಡುಗಡೆಗೂ ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಅಧ್ಯಕ್ಷರು ಹೇಳಿದ್ದಾರೆ” ಎಂದು ಬ್ಲಿಂಕೆನ್ ಹೇಳಿದ್ದಾರೆ.

ಗಾಜಾ ಪಟ್ಟಿಯ ಮೇಲೆ ಆಕ್ರಮಣಕ್ಕೆ ಇಸ್ರೇಲ್‌ ತಯಾರಿ ನಡೆಸಿಕೊಂಡಿದೆ. ಆದರೆ ಹಮಾಸ್ ಕರೆದೊಯ್ದಿರುವ ನಾಗರಿಕ ಒತ್ತೆಯಾಳುಗಳಿಗೆ ಬೆದರಿಕೆಯು ಪ್ರಮುಖ ಸವಾಲಾಗಿ ಉಳಿದಿದೆ. ಹೆಚ್ಚಿನ ಒತ್ತೆಯಾಳುಗಳು ಹೊರಬರುವವರೆಗೆ ಇಸ್ರೇಲ್ ಗಾಜಾದ ಮೇಲಿನ ಸಂಭಾವ್ಯ ಭೂ ಆಕ್ರಮಣವನ್ನು ವಿಳಂಬಗೊಳಿಸಬೇಕೆ ಎಂದು ಶುಕ್ರವಾರ ವರದಿಗಾರರು ಕೇಳಿದಾಗ, ಬೈಡೆನ್ “ಹೌದು” ಎಂದಿದ್ದಾರೆ.

Exit mobile version