Site icon Vistara News

Israel Palestine War: ಇಸ್ರೇಲ್‌ಗೆ ಹೆದರಿ ಮತ್ತಿಬ್ಬರು ಒತ್ತೆಯಾಳುಗಳನ್ನು ಬಿಟ್ಟ ಹಮಾಸ್!‌

Israeli hostages

Israel Palestine War: Hamas releases 2 Israeli hostages

ಜೆರುಸಲೇಂ: ಗಾಜಾ ಗಡಿಯಲ್ಲಿ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿ ಪೂರ್ಣ ಪ್ರಮಾಣದ ದಾಳಿ ನಡೆಸಲು ಇಸ್ರೇಲ್‌ ಸಜ್ಜಾಗಿರುವ (Israel Palestine War) ಬೆನ್ನಲ್ಲೇ ಮತ್ತಿಬ್ಬರು ಒತ್ತೆಯಾಳುಗಳನ್ನು ಹಮಾಸ್‌ ಉಗ್ರರು ಬಿಡುಗಡೆ ಮಾಡಿದ್ದಾರೆ. ಇಸ್ರೇಲ್‌ನ ಇಬ್ಬರು ಹಿರಿಯ ಮಹಿಳೆಯರನ್ನು (Israeli Hostages) ಗಾಜಾ ಹಾಗೂ ಈಜಿಪ್ಟ್‌ ನಡುವಿನ ರಫಾ ಗಡಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಹಮಾಸ್‌ ಉಗ್ರರು ಇದುವರೆಗೆ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದಂತಾಗಿದೆ.

“ಕತಾರ್‌ ಹಾಗೂ ಈಜಿಪ್ಟ್‌ ಮಧ್ಯಸ್ಥಿಕೆ ಮತ್ತು ಮಾನವೀಯತೆಯ ನೆಲೆಯಲ್ಲಿ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ” ಎಂದು ಹಮಾಸ್‌ ಉಗ್ರ ಸಂಘಟನೆ ತಿಳಿಸಿದೆ. ಆದರೆ, ಇದಕ್ಕೂ ಮೊದಲು, ಇಸ್ರೇಲ್‌ ಬಾಂಬ್‌ ದಾಳಿಯನ್ನು ನಿಲ್ಲಿಸಿದರೆ ನಾವು ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹಮಾಸ್‌ ತಿಳಿಸಿತ್ತು. ಆದಾಗ್ಯೂ, ಇಸ್ರೇಲ್‌ ಪ್ರತಿದಾಳಿ ಮುಂದುವರಿಸಿದ ಕಾರಣ ಹಾಗೂ ಸಂಪೂರ್ಣ ದಾಳಿಗೆ ಸಿದ್ಧವಾಗಿರುವ ಕಾರಣ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ ಇಬ್ಬರು ಅಮೆರಿಕನ್ನರನ್ನು ಹಮಾಸ್‌ ಉಗ್ರರು ಬಿಡುಗಡೆ ಮಾಡಿದ್ದರು. ಜುಡಿತ್ ತೈ ರಾನನ್ ಮತ್ತು ಅವರ ಹದಿಹರೆಯದ ಮಗಳು ನಟಾಲಿ ಶೋಷನಾ ರಾನನ್ ಅವರನ್ನು ಇಸ್ರೇಲಿ ರಾಯಭಾರಿ ಗಾಜಾ ಗಡಿಯಲ್ಲಿ ಭೇಟಿಯಾಗಿದ್ದರು. ಇಬ್ಬರು ಅಮೆರಿಕನ್ನರು ಸುರಕ್ಷಿತವಾಗಿ ಇಸ್ರೇಲಿ ಅಧಿಕಾರಿಗಳ ಕೈ ಸೇರಿದ್ದಾರೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ತಿಳಿಸಿದ್ದರು.

“ಅವರು ಅಗತ್ಯವಿರುವ ಯಾವುದೇ ಬೆಂಬಲ ಸಹಾಯವನ್ನು ಸ್ವೀಕರಿಸಲಿದ್ದಾರೆ. ಅವರ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ. ಅವರ ಕುಟುಂಬಗಳು ಅನುಭವಿಸುತ್ತಿರುವ ಸಮಾಧಾನವನ್ನು ನಾವು ಹಂಚಿಕೊಳ್ಳುತ್ತೇವೆ. ಆದರೆ ಈ ಸಂಘರ್ಷದಲ್ಲಿ ಇನ್ನೂ ಹತ್ತು ಅಮೆರಿಕನ್ನರು ಲೆಕ್ಕಕ್ಕೆ ಸಿಗದೆ ಉಳಿದಿದ್ದಾರೆ” ಎಂದು ಬ್ಲಿಂಕೆನ್ ಹೇಳಿದ್ದರು.

ಇದನ್ನೂ ಓದಿ: Israel Palestine War: ಇಸ್ರೇಲ್‌ ದಾಳಿಗೆ ಗಾಜಾ ಮಸೀದಿಗಳು ಉಡೀಸ್, ಉಗ್ರರು ಮಟಾಷ್!

ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ನಡೆಸಿದ ದಾಳಿಗೆ ಇಸ್ರೇಲ್‌ ಗಾಜಾ ನಗರದ ಮೇಲೆ ಪ್ರತಿದಾಳಿ ನಡೆಸುತ್ತಿದೆ. ಇಸ್ರೇಲ್‌ ದಾಳಿಗೆ ಇದುವರೆಗೆ 5 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್‌ ತಿಳಿಸಿದೆ. ಇನ್ನು, ಇಸ್ರೇಲ್‌ ಸೇರಿ ಹಲವು ದೇಶಗಳ 222 ಜನರನ್ನು ಹಮಾಸ್‌ ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ.

Exit mobile version