Site icon Vistara News

Israel- Palestine War: ಮೆತ್ತಗಾದ ಹಮಾಸ್‌ನಿಂದ 50 ಒತ್ತೆಯಾಳು ಬಿಡುಗಡೆಗೆ ಒಪ್ಪಿಗೆ, 4 ದಿನ ಕದನ ವಿರಾಮ

Gaza Hopital Attack

ಟೆಲ್‌ ಅವಿವ್‌: ಆರು ವಾರಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ (Israel- Palestine War) ನಡುವಿನ ಯುದ್ಧಕ್ಕೆ ಮೊದಲ ಬಾರಿಗೆ ಅಲ್ಪ ವಿರಾಮ ದೊರೆತಿದೆ. ನಾಲ್ಕು ದಿನಗಳ ಕದನ ವಿರಾಮವನ್ನು (ceasefire) ಇಸ್ರೇಲ್‌ ಅನುಮೋದಿಸಿದೆ.

ಇಸ್ರೇಲ್‌ ಮೊದಲ ಕದನವಿರಾಮ ಘೋಷಿಸಿದ್ದು, ಅದಕ್ಕೆ ಪ್ರತಿಯಾಗಿ 50 ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಮುಕ್ತಗೊಳಿಸಲಿದೆ. ಆದರೆ ಇದು ಯುದ್ಧದ ಅಂತ್ಯವಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಯುದ್ಧ ಕ್ಯಾಬಿನೆಟ್ ಕದನ ವಿರಾಮದ ಒಪ್ಪಂದದ ಮೇಲೆ ಮತ ಹಾಕುವ ಮೊದಲು ಹೇಳಿದರು. ಹಮಾಸ್ ನಿರ್ಮೂಲನೆಯಾಗುವವರೆಗೆ ಮತ್ತು ಒತ್ತೆಯಾಳುಗಳೆಲ್ಲರನ್ನು ಬಿಡುಗಡೆ ಮಾಡುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ನೆತನ್ಯಾಹು ಹೇಳಿದರು.

ಕತಾರ್‌ನ ಅಧಿಕಾರಿಗಳು ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದಾರೆ. ಹೆಚ್ಚು ಒತ್ತೆಯಾಳುಗಳ ಬಿಡುಗಡೆ ಮತ್ತು ಕಡಿಮೆ ರಿಯಾಯಿತಿಗಳನ್ನು ಒಳಗೊಂಡಂತೆ ಒಪ್ಪಂದ ರೂಪಿಸಲು ಯುಎಸ್ ಅಧ್ಯಕ್ಷ ಜೋ ಬೈಡೆನ್ ಸಹಾಯ ಮಾಡಿದ್ದಾರೆ ಎಂದು ನೆತನ್ಯಾಹು ಹೇಳಿದರು.

ಇದು ಈಗ ನಡೆಯುತ್ತಿರುವ ಕದನದಲ್ಲಿ ಮೊದಲ ವಿರಾಮವಾಗಿರುತ್ತದೆ. ಈ ನಿಲುಗಡೆಯಿಂದಾಗಿ ಮಾನವೀಯ ನೆರವು ಕೂಡ ಗಾಜಾಕ್ಕೆ ಪ್ರವೇಶ ಪಡೆಯುತ್ತದೆ. ನಾಲ್ಕು ದಿನಗಳ ನಿಲುಗಡೆಗೆ ಪ್ರತಿಯಾಗಿ 50 ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಮುಕ್ತಗೊಳಿಸಲಿದೆ. ಕದನ ವಿರಾಮ ಯಾವಾಗ ಜಾರಿಗೆ ಬರಲಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಗುರುವಾರದಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬಹುದು.

ಬಿಡುಗಡೆಯಾದ ಪ್ರತಿ 10 ಒತ್ತೆಯಾಳುಗಳಿಗೆ ಹೆಚ್ಚುವರಿ ಒಂದು ದಿನದ ವಿರಾಮವನ್ನು ವಿಸ್ತರಿಸುವುದಾಗಿ ಇಸ್ರೇಲಿ ಸರ್ಕಾರ ಹೇಳಿದೆ. ಗಾಜಾದ ಅಧಿಕಾರಿಗಳ ಪ್ರಕಾರ ಆರು ವಾರಗಳಿಂದ ಇಸ್ರೇಲ್‌ ನಡೆಸಿದ ದಾಳಿಯಿಂದಾಗಿ 30 ಲಕ್ಷ ಜನ ನಿರಾಶ್ರಿತರಾಗಿದ್ದಾರೆ.

ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ನಡೆಸಿದ ಮಾರಕ ದಾಳಿಗಳಲ್ಲಿ ಹಮಾಸ್‌ ಉಗ್ರ ಸಂಘಟನೆ ಇಸ್ರೇಲನ್ನು ಕೆಣಕಿತ್ತು. 250ಕ್ಕೂ ಅಧಿಕ ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಒಯ್ದಿತ್ತು. ಪ್ರತಿಯಾಗಿ ಗಾಜಾದಲ್ಲಿ ಹಮಾಸ್‌ ಇರುವ ಕೇಂದ್ರಗಳ ಮೇಲೆ ಬಾಂಬ್‌ ದಾಳಿಗಳನ್ನು ಇಸ್ರೇಲ್‌ ನಡೆಸಿದೆ. 11,000ಕ್ಕೂ ಅಧಿಕ ಮಂದಿ ಈ ದಾಳಿಗಳಲ್ಲಿ ಸತ್ತುಹೋಗಿದ್ದಾರೆ. ಹಮಾಸ್‌ನ ಹಲವು ಉಗ್ರ ನಾಯಕರನ್ನು ಕೊಂದಿರುವುದಾಗಿ ಇಸ್ರೇಲ್‌ ಸೈನ್ಯ ಹೇಳಿಕೊಂಡಿದೆ. ಗಾಜಾದ ಹಲವು ಆಸ್ಪತ್ರೆಗಳ ಮೇಲೆ ರಾಕೆಟ್‌ ದಾಳಿ ನಡೆದಿದ್ದು, ಅಲ್ಲಿ ಹಮಾಸ್‌ ಉಗ್ರರರು ಬಳಸುವ ಸುರಂಗಗಳು ಪತ್ತೆಯಾಗಿವೆ.

ಇದನ್ನೂ ಓದಿ: Israel- Palestine War: ಇದೇ ನೋಡಿ ಹಮಾಸ್‌ ಉಗ್ರರ ಸುರಂಗ; ಗಾಜಾದ ಆಸ್ಪತ್ರೆಯಡಿಯೇ ಪತ್ತೆ!

Exit mobile version