Site icon Vistara News

Israel Palestine War: ʼʼನಾವು ಯುದ್ಧ ಆರಂಭಿಸಿಲ್ಲ, ಆದರೆ ಮುಗಿಸುತ್ತೇವೆ…ʼʼ ಇಸ್ರೇಲ್‌ ಪ್ರಧಾನಿ ಶಪಥ

benjamin netanyahu

ಟೆಲ್ ಅವೀವ್: ʼʼಈ ಯುದ್ಧವನ್ನು (Israel Palestine War) ನಾವು ಆರಂಭಿಸಿಲ್ಲ, ಆದರೆ ಖಂಡಿತವಾಗಿಯೂ ನಾವೇ ಇದನ್ನು ಮುಗಿಸುತ್ತೇವೆʼʼ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli PM Benjamin Netanyahu) ಅವರು ಹಮಾಸ್‌ ಉಗ್ರಗಾಮಿ (Hamas Terrorists) ಸಂಘಟನೆಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಬೆಳಗ್ಗೆ ನಡೆದ ಹಮಾಸ್ ಉಗ್ರರ (Hamas attack) ದಾಳಿಯಲ್ಲಿ 700ಕ್ಕೂ ಹೆಚ್ಚು ಇಸ್ರೇಲಿ ಪ್ರಜೆಗಳು ಸತ್ತಿದ್ದಾರೆ ಹಾಗೂ 2,300 ಮಂದಿ ಗಾಯಗೊಂಡಿದ್ದಾರೆ. ಹಮಾಸ್ ವಿರುದ್ಧದ ಪ್ರತೀಕಾರದ ಭಾಗವಾಗಿ ಇಸ್ರೇಲ್ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ. 1973ರ ಯೋಮ್ ಕಿಪ್ಪೂರ್ ಯುದ್ಧದ ವೇಳೆ ಇಸ್ರೇಲ್ 4,00,000 ಸೈನಿಕರನ್ನು ಒಟ್ಟುಗೂಡಿಸಿತ್ತು. ಅದರ ನಂತರ ಇದೇ ಅತಿ ದೊಡ್ಡ ಸೈನ್ಯ ಸಜ್ಜುಗೊಳಿಸುವಿಕೆಯಾಗಿದೆ.

“ಇಸ್ರೇಲ್ ಈಗ ಯುದ್ಧ ಸನ್ನಿವೇಶದಲ್ಲಿದೆ. ನಾವು ಈ ಯುದ್ಧವನ್ನು ಬಯಸಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಘೋರ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟಿದೆ. ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಅದನ್ನು ಮುಗಿಸಲಿದೆ” ಎಂದು ನೆತನ್ಯಾಹು ಹೇಳಿದರು.

“ನಮ್ಮ ಮೇಲೆ ದಾಳಿ ಮಾಡುವ ಮೂಲಕ, ಹಮಾಸ್‌ ಐತಿಹಾಸಿಕ ತಪ್ಪು ಮಾಡಿದೆ. ಇದನ್ನು ಹಮಾಸ್ ಇಷ್ಟರಲ್ಲಿಯೇ ಅರ್ಥ ಮಾಡಿಕೊಳ್ಳಲಿದೆ. ನಾವು ಅವರಿಗೆ ಮತ್ತು ಇಸ್ರೇಲ್‌ನ ಇತರ ಶತ್ರುಗಳಿಗೆ ದಶಕಗಳವರೆಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದಂಥ ಬೆಲೆಯನ್ನು ನಿಖರವಾಗಿ ನೀಡುತ್ತೇವೆ” ಎಂದು ನೆತನ್ಯಾಹು ಹೇಳಿದರು.

“ಮುಗ್ಧ ಇಸ್ರೇಲಿಗಳ ವಿರುದ್ಧ ಹಮಾಸ್ ನಡೆಸಿದ ಘೋರ ದಾಳಿಗಳು ಮನಸ್ಸನ್ನು ಮುದುಡಿಸುತ್ತಿದೆ. ಕುಟುಂಬಗಳನ್ನು ಹತ್ಯೆ ಮಾಡಲಾಗಿದೆ; ಹೊರಾಂಗಣ ಪಾರ್ಟಿಗಳಲ್ಲಿ ನೂರಾರು ಯುವಜನರನ್ನು ಕೊಲ್ಲಲಾಗಿದೆ; ನೂರಾರು ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಅಪಹರಿಸಲಾಗಿದೆ; ಅನಾಗರಿಕರಾದ ಹಮಾಸ್ ಭಯೋತ್ಪಾದಕರು ಮಕ್ಕಳನ್ನು ಸಹ ಬಂಧಿಸಿ ಸುಟ್ಟುಹಾಕಿದ್ದಾರೆ” ಎಂದ ನೆತನ್ಯಾಹು, ಹಮಾಸ್ ಅನ್ನು ʼಐಸಿಸ್ʼ ಎಂದು ಬ್ರಾಂಡ್ ಮಾಡಿದರು. ಅವರು ಹಮಾಸ್ ವಿರುದ್ಧ “ನಾಗರಿಕತೆಯ ಶಕ್ತಿಗಳು” ಒಂದಾಗಬೇಕು ಮತ್ತು ಅದನ್ನು ಸೋಲಿಸಬೇಕು ಎಂದು ಕರೆ ನೀಡಿದರು.

“ಹಮಾಸ್ ಇನ್ನೊಂದು ಐಸಿಸ್ ಆಗಿದೆ. ಐಸಿಸ್ ಅನ್ನು ಸೋಲಿಸಲು ನಾಗರಿಕತೆಯ ಶಕ್ತಿಗಳು ಒಗ್ಗೂಡಿದಂತೆಯೇ, ನಾಗರಿಕ ಶಕ್ತಿಗಳು ಹಮಾಸ್ ಅನ್ನು ಸೋಲಿಸುವಲ್ಲಿ ಇಸ್ರೇಲ್ ಅನ್ನು ಬೆಂಬಲಿಸಬೇಕು” ಎಂದು ನೆತನ್ಯಾಹು ಕರೆ ನೀಡಿದರು. ಬೆಂಬಲ ನೀಡುತ್ತಿರುವ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು. “ನಾನು ಅಧ್ಯಕ್ಷ ಬೈಡೆನ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇಸ್ರೇಲ್‌ನ ಭದ್ರತೆಗಾಗಿ ನೆರವು ನೀಡುತ್ತಿರುವುದಕ್ಕಾಗಿ ಇಲ್ಲಿನ ಎಲ್ಲಾ ನಾಗರಿಕರ ಪರವಾಗಿ ಅವರಿಗೆ ಹಾಗೂ ಅನೇಕ ವಿಶ್ವ ನಾಯಕರಿಗೆ ಮತ್ತೊಮ್ಮೆ ಧನ್ಯವಾದ ಹೇಳಬಯಸುತ್ತೇನೆ” ಎಂದರು.

“ಹಮಾಸ್ ವಿರುದ್ಧ ಇಸ್ರೇಲ್‌ ಹೋರಾಡುತ್ತಿದೆ. ಇದು ಕೇವಲ ತನ್ನ ಸ್ವಂತ ಜನರಿಗಾಗಿ ಮಾಡುತ್ತಿರುವ ಹೋರಾಟವಲ್ಲ. ಇದು ಅನಾಗರಿಕತೆಯ ವಿರುದ್ಧ ನಿಂತಿರುವ ಪ್ರತಿಯೊಂದು ದೇಶದ ಪರವಾದ ಹೋರಾಟ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ. ಮತ್ತು ಇಸ್ರೇಲ್ ಗೆದ್ದಾಗ, ಇಡೀ ನಾಗರಿಕ ಜಗತ್ತು ಗೆಲ್ಲುತ್ತದೆ” ಎಂದು ನೆತನ್ಯಾಹು ಹೇಳಿದರು. ಇಸ್ರೇಲಿ ಸೇನೆಯು ಹಮಾಸ್ ವಿರುದ್ಧ ಹಿಂದೆಂದೂ ಇಲ್ಲದಷ್ಟು ಬಲದೊಂದಿಗೆ ದಾಳಿ ನಡೆಸಲಿದೆ ಎಂದು ತಿಳಿಸಿದರು.

ಇದರ ನಡುವೆ, ಗಾಜಾದಲ್ಲಿ ಇಸ್ರೇಲ್‌ ನಡೆಸುವ ಕ್ಷಿಪಣಿ ದಾಳಿಗಳಿಗೆ ಪ್ರತಿಯಾಗಿ ಇಸ್ರೇಲ್‌ನ ನಾಗರಿಕ ಒತ್ತೆಯಾಳುಗಳನ್ನು ಯಾವುದೇ ಎಚ್ಚರಿಕೆ ನೀಡದೆ ಕೊಲ್ಲಲಾಗುವುದು ಮತ್ತು ಹತ್ಯೆಗಳನ್ನು ಪ್ರಸಾರ ಮಾಡಲಾಗುವುದು ಎಂದು ಹಮಾಸ್ ಎಚ್ಚರಿಕೆ ನೀಡಿದೆ. ಇಸ್ರೇಲಿನ ಕೆಲವು ಸೇನಾ ಅಧಿಕಾರಿಗಳು ಸೇರಿದಂತೆ 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಮಾಸ್‌ ಹಿಡಿದಿಟ್ಟುಕೊಂಡಿದೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ನಲ್ಲಿರುವ ಭಟ್ಕಳದ ಕನ್ನಡಿಗರು ಹೇಗಿದ್ದಾರೆ?

Exit mobile version