ಟೆಲ್ ಅವಿವ್: ಪಕ್ಕದ ದೇಶ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರ ನೆಲೆಗಳ ಮೇಲೆ ಇಸ್ರೇಲ್ ವಾಯುಪಡೆ (israel air force) ಶುಕ್ರವಾರ ದಾಳಿ (Israel Palestine War) ನಡೆಸಿದೆ. ಜೊತೆಗೆ ಗಾಜಾದ (Gaza strip) ಹಲವು ಉಗ್ರ ಕೇಂದ್ರಗಳು, ಸುರಂಗಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದೆ.
ಶುಕ್ರವಾರ ಉತ್ತರ ಇಸ್ರೇಲ್‌ನಲ್ಲಿ ಸೈನಿಕರ ಮೇಲೆ ಪ್ಯಾಲೆಸ್ತೀನ್ ಕಡೆಯಿಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ನಡೆದವು. ಇವುಗಳನ್ನು ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರರು (Hezbollah terrorists) ನಡೆಸಿದ್ದು, ಪ್ರತಿಕ್ರಿಯೆಯಾಗಿ ಇಸ್ರೇಲ್ ರಕ್ಷಣಾ ಪಡೆಗಳು ದಕ್ಷಿಣ ಲೆಬನಾನ್‌ನ ಹಲವಾರು ನೆಲೆಗಳ ಮೇಲೆ ದಾಳಿ ನಡೆಸಿದವು. ಇಸ್ರೇಲಿ ಮಿಲಿಟರಿಯ ಪ್ರಕಾರ, ಲೆಬನಾನ್‌ನಿಂದ ಉಡಾವಣೆಯಾದ ಆಂಟಿ-ಟ್ಯಾಂಕ್-ಗೈಡೆಡ್ ಕ್ಷಿಪಣಿ ಮೆನಾರಾದ ಉತ್ತರ ಸಮುದಾಯದ ಬಳಿಯ ಸೇನಾ ಪೋಸ್ಟ್‌ಗೆ ಅಪ್ಪಳಿಸಿತು. ಹಿಜ್ಬುಲ್ಲಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ನಾಲ್ವರು ಇಸ್ರೇಲಿ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಮಧ್ಯೆ, ಇಸ್ರೇಲ್‌ನ ವಿದೇಶಾಂಗ ಸಚಿವಾಲಯದ ವಕ್ತಾರರು ದಕ್ಷಿಣ ಇಸ್ರೇಲ್‌ನಲ್ಲಿ ಅಕ್ಟೋಬರ್ 7ರಂದು ಹಮಾಸ್ ದಾಳಿಯಿಂದ ಸತ್ತವರ ಸಂಖ್ಯೆಯನ್ನು ಹಿಂದಿನ ಅಂದಾಜು 1,400ರಿಂದ ಸುಮಾರು 1,200ಕ್ಕೆ ಪರಿಷ್ಕರಿಸಲಾಗಿದೆ ಎಂದಿದ್ದಾರೆ. ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ಸತ್ತವರು ಹಾಗೂ ಸಂತ್ರಸ್ತರ ಸಂಖ್ಯೆ ಏರುತ್ತಿದ್ದು, ಹಮಾಸ್ ಉಗ್ರರು ಹಾಗೂ ಅವರಿಂದ ಒತ್ತೆಯಾಳುಗಳಾದ ಇಸ್ರೇಲ್ ನಾಗರಿಕರಿಗಾಗಿ ಹುಡುಕಾಟ ನಡೆದಿದೆ.
ಗಾಜಾದಲ್ಲಿ ಇಸ್ರೇಲಿ ಪಡೆಗಳು ಮತ್ತು ಹಮಾಸ್ ಭಯೋತ್ಪಾದಕರ ನಡುವೆ ಕ್ಷಿಪಣಿ- ರಾಕೆಟ್ ದಾಳಿ ಹಾಗೂ ಭೂಮಿಯ ಮೇಲಿನ ಹೋರಾಟ ತೀವ್ರವಾಗಿ ನಡೆದಿದೆ. ಗಾಜಾ ನಗರದಲ್ಲಿ ಗಾಯಗೊಂಡ ಪ್ಯಾಲೆಸ್ತೀನ್ ನಾಗರಿರು ಇರುವ ಕಿಕ್ಕಿರಿದ ಆಸ್ಪತ್ರೆಗಳ ಬಳಿಯೂ ಶನಿವಾರ ಹೋರಾಟ ನಡೆದಿದೆ. ಸ್ಫೋಟಗಳು ಮತ್ತು ಗುಂಡಿನ ದಾಳಿಗಳು ನಡೆದಿವೆ. ಅಲ್ ಶಿಫಾ ಆಸ್ಪತ್ರೆ ಹಾಗೂ ಅಲ್-ಬುರಾಕ್ ಶಾಲೆಯ ಬಳಿ ನಡೆದ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. ಅಲ್ಲಿ ಮನೆಗಳು ನಾಶವಾದ ಜನರು ಆಶ್ರಯ ಪಡೆದಿದ್ದರು.
ಶುಕ್ರವಾರ ಮುಂಜಾನೆ ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾ ಅಂಗಳದಲ್ಲಿ ಕ್ಷಿಪಣಿಗಳು ದಾಳಿ ಮಾಡಿದವು. ಪ್ಯಾಲೆಸ್ತೀನ್ ಉಗ್ರಗಾಮಿಗಳು ಉಡಾವಣೆ ಮಾಡಿದ ಕ್ಷಿಪಣಿಗಳು ತಪ್ಪಾಗಿ ಶಿಫಾಗೆ ಅಪ್ಪಳಿಸಿತು ಎಂದು ಇಸ್ರೇಲ್ ಮಿಲಿಟರಿ ನಂತರ ಹೇಳಿದೆ. ಆಸ್ಪತ್ರೆಗಳು ಉತ್ತರ ಗಾಜಾದಲ್ಲಿವೆ. ಅಲ್ಲಿ ಕಳೆದ ತಿಂಗಳು ದಾಳಿ ಮಾಡಿದ ಹಮಾಸ್ ಭಯೋತ್ಪಾದಕರು ಕೇಂದ್ರೀಕೃತರಾಗಿದ್ದಾರೆ. ದಕ್ಷಿಣದಿಂದ ಸ್ಥಳಾಂತರಗೊಂಡ ರೋಗಿಗಳು ಮತ್ತು ವೈದ್ಯರಿಂದ ಈ ಪ್ರದೇಶ ತುಂಬಿದೆ.
ದಕ್ಷಿಣ ಇಸ್ರೇಲ್‌ನಲ್ಲಿ ಅಕ್ಟೋಬರ್ 7ರಂದು ನಡೆದ ಹಮಾಸ್‌ನ ದಾಳಿಗೆ ಪ್ರತೀಕಾರವಾಗಿ ಐದು ವಾರಗಳಿಂದ ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಇಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ತೀನಿಯನ್ನರ ಸಂಖ್ಯೆ 11,000 ದಾಟಿದೆ. ಇಸ್ರೇಲ್ ಸಂಯಮ ತೋರುವಂತೆ ಅನೇಕ ಜಾಗತಿಕ ನಾಯಕರು ಕರೆ ನೀಡಿದ್ದಾರೆ. ಪ್ರಮುಖ ಮಿತ್ರರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಕೂಡ ಒತ್ತಡ ಹಾಕಿದೆ.
ಇದನ್ನೂ ಓದಿ: Israel Palestine War: ಗಾಜಾ ನಗರದ ‘ಹೃದಯ’ ಪ್ರವೇಶಿಸಿದ ಇಸ್ರೇಲ್; ಮಸಣದಂತಾದ ಸಿಟಿ!