Site icon Vistara News

Israel Palestine War: ಸೈನೈಡ್‌ ಬಾಂಬ್‌ ಬಳಸಲು ಮುಂದಾಗಿದ್ದ ಹಮಾಸ್‌: ಇಸ್ರೇಲ್‌ ಅಧ್ಯಕ್ಷ

Israeli President

ಟೆಲ್‌ ಅವಿವ್:‌ ಇಸ್ರೇಲ್ ಮೇಲೆ ನಡೆಸಿದ ದಾಳಿಯ (Hamas attack) ವೇಳೆ ಸೈನೈಡ್ ಬಾಂಬ್‌ಗಳನ್ನು (cyanide bomb) ತಯಾರಿ ಮಾಡುವ ಮಾರ್ಗದರ್ಶಿಗಳನ್ನು ಹಮಾಸ್ ಭಯೋತ್ಪಾದಕರು (Hamas Terrorists) ಹೊಂದಿದ್ದುದು ಪತ್ತೆಯಾಗಿದೆ ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಹೇಳಿದ್ದಾರೆ.

ಕಿಬ್ಬುಟ್ಸ್‌ ಬೀರಿ ಎಂಬಲ್ಲಿ ಪಾರ್ಟಿಯನ್ನು ಧ್ವಂಸ ಮಾಡಿದ ಹಮಾಸ್‌ ಉಗ್ರಗಾಮಿಗಳ ಶವದ ಜತೆಗೆ ದೊರೆತ USB ಸಾಧನಗಳಲ್ಲಿ ಈ ವಿಚಾರಗಳು ಕಂಡುಬಂದಿವೆ ಎಂದು ಇಸ್ರೇಲಿ ಗುಪ್ತಚರ ಇಲಾಖೆ ತಿಳಿಸಿದೆ.

ಈ ಮಾರ್ಗದರ್ಶಿಗಳು “ಸೈನೈಡ್ ಪ್ರಸರಣ ಸಾಧನ”ದ ವಿವರವಾದ ರೇಖಾಚಿತ್ರಗಳನ್ನು ಒಳಗೊಂಡಿವೆ. 2003ರಿಂದಲೇ ರಾಸಾಯನಿಕ ಶಸ್ತ್ರಾಸ್ತ್ರಗಳಿಗಾಗಿ ಯೋಜನೆ ರೂಪಿಸುತ್ತಿರುವ ಅಲ್ ಖೈದಾ (al Qaeda) ಉಗ್ರ ಸಂಘಟನೆಯ ವಿನ್ಯಾಸವನ್ನು ಆಧರಿಸಿವೆ. ಸೈನೈಡ್‌ ಹೊಂದಿರುವ ರಾಸಾಯನಿಕ ಅಸ್ತ್ರಗಳನ್ನು (chemical weapons) ತಯಾರಿಸುವುದು ಹೇಗೆ, ಅವುಗಳನ್ನು ಕಾರ್ಯಾಚರಿಸುವುದು ಹೇಗೆ ಎಂಬುದರ ಕುರಿತು ನೀಡಲಾದ ಸೂಚನೆಗಳು ಪರಿಸ್ಥಿತಿಯ ಆಘಾತಕಾರಿ ಚಿತ್ರಣವನ್ನು ನೀಡುತ್ತಿದೆ ಎಂದು ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜೋಗ್ ಹೇಳಿದರು.

ಇಸ್ರೇಲ್ ತನ್ನ ರಾಯಭಾರ ಕಚೇರಿಗಳಿಗೆ ಕಳುಹಿಸಿರುವ ಮಾಹಿತಿಯಂತೆ, ಹಮಾಸ್ ಗುಂಪು ಇಸ್ರೇಲಿ ನಾಗರಿಕರ ವಿರುದ್ಧದ ತನ್ನ ಭಯೋತ್ಪಾದಕ ದಾಳಿಯ ಭಾಗವಾಗಿ ರಾಸಾಯನಿಕ ಅಸ್ತ್ರಗಳನ್ನು ಬಳಸಲು ಉದ್ದೇಶಿಸಿದೆ ಎಂದು ತೋರಿಸಿದೆ ಮತ್ತು ಐಸಿಸ್ ಮಾಡಲು ಪ್ರಯತ್ನಿಸಿದ ರೀತಿಯಲ್ಲಿಯೇ ದಾಳಿಗಳನ್ನು ನಡೆಸಲು ಸೂಚನೆ ನೀಡಲಾಗಿದೆ ಎಂದು ಹೇಳಿದೆ.

ಎರಡು ವಾರಗಳ ಹಿಂದೆ ನಡೆಸಿದ ದಾಳಿಯ ಬಳಿಕ, ಇಸ್ರೆಲ್‌ ಆಡಳಿತ ಹಮಾಸ್ ಉಗ್ರರ ಗುಂಪನ್ನು ಪದೇ ಪದೆ ಐಸಿಸ್‌ಗೆ ಹೋಲಿಸಿದೆ. ಐಸಿಸ್‌ ಕ್ರೂರ ಹಿಂಸಾಚಾರಕ್ಕೆ ಕುಖ್ಯಾತವಾದ ಭಯೋತ್ಪಾದಕ ಗುಂಪು ಆಗಿದ್ದು, ವಿಶ್ವದಾದ್ಯಂತ ಇಸ್ಲಾಮಿಕ್ ಕಾನೂನನ್ನು ಹೇರುವ ಪ್ರಯತ್ನ ಮಾಡಿತ್ತು.

“ಹಮಾಸ್ ನಡೆಸಿದ ದುಷ್ಕೃತ್ಯಗಳು ಐಎಸ್ಎಸ್‌ ದುಷ್ಕೃತ್ಯಗಳನ್ನು ಹೋಲುತ್ತವೆ. ಮಕ್ಕಳನ್ನು ಅವರ ಕುಟುಂಬ ಸಮೇತ ಒತ್ತೆಯಾಳುಗಳಾಗಿಸಲಾಗಿದೆ. ಯುವತಿಯರು ಮತ್ತು ಯುವಕರನ್ನು ಬೆನ್ನಿಗೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಇತರ ದೌರ್ಜನ್ಯಗಳನ್ನು ನಾನು ವಿವರಿಸುವುದಿಲ್ಲ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಾಳಿಯ ನಂತರ ಭಾಷಣದಲ್ಲಿ ಹೇಳಿದ್ದರು.

ಇಸ್ರೇಲಿ ರಕ್ಷಣಾ ಪಡೆ ಸೈನಿಕರು ಬಿಡುಗಡೆ ಮಾಡಿದ ಫೋಟೋಗಳ ಪ್ರಕಾರ, ದಾಳಿಯ ಸಮಯದಲ್ಲಿ ಹಮಾಸ್, ಐಸಿಸ್ ಧ್ವಜಗಳನ್ನು ಬೀಸಿದೆ. ಹಮಾಸ್ ಉಗ್ರರ ದೇಹಗಳ ಜತೆ ಕಂಡುಬಂದ ಇನ್ನೂ ಹಲವು ಸಾಕ್ಷಿಗಳನ್ನು ಇಸ್ರೇಲ್‌ ಗುಪ್ತಚರ ಇಲಾಖೆ ಹಂಚಿಕೊಂಡಿದ್ದು, ಅವುಗಳ ಪ್ರಕಾರ “ಸಾಧ್ಯವಾದಷ್ಟು ಜನರನ್ನು ಕೊಲ್ಲುವ, ಹಳ್ಳಿಗಳನ್ನು ಆಕ್ರಮಿಸಿ ಸುಟ್ಟುಹಾಕುವ, ಒತ್ತೆಯಾಳುಗಳನ್ನು ಅಪಹರಿಸುವʼ ಸಂಚುಗಳನ್ನು ಉಗ್ರರು ಹೊಂದಿದ್ದರು. ಕೆಲವು ಸಂಚುಗಳ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಅಪಹರಿಸಲು ಶಾಲೆಗಳನ್ನು ಟಾರ್ಗೆಟ್‌ ಮಾಡಲಾಗಿತ್ತು.

ಇದನ್ನೂ ಓದಿ: Israel Palestine War: ಇಸ್ರೇಲ್‌ ದಾಳಿಗೆ ಗಾಜಾ ಮಸೀದಿಗಳು ಉಡೀಸ್, ಉಗ್ರರು ಮಟಾಷ್!

Exit mobile version