ವಾಷಿಂಗ್ಟನ್: ಇಸ್ರೇಲ್ ಸೈನ್ಯದಿಂದ ಸತತ ದಾಳಿಗೆ (Israel Palestine War) ತುತ್ತಾಗಿರುವ ಗಾಜಾ ಪಟ್ಟಿಯಲ್ಲಿ ಕೇವಲ 46 ದಿನಗಳಲ್ಲಿ 5,300ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ ಮಕ್ಕಳು (Palestine children) ಕೊಲ್ಲಲ್ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ (United Nations International Children’s Emergency Fund- UNICEF) ಹೇಳಿದೆ.
ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರು ಗಾಜಾ ಪಟ್ಟಿಯನ್ನು ʼಮಕ್ಕಳಿಗೆ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳʼ ಎಂದು ಹೆಸರಿಸಿದ್ದಾರೆ. ದಿನಕ್ಕೆ ಸರಾಸರಿ 115ಕ್ಕಿಂತ ಹೆಚ್ಚು ಮಕ್ಕಳು ಪ್ರತಿದಿನ, ವಾರಗಳವರೆಗೆ ಮೃತಪಟ್ಟಿದ್ದಾರೆ ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದ್ದಾರೆ.
“ದೊರೆತಿರುವ ಅಂಕಿಅಂಶಗಳ ಆಧಾರದ ಮೇಲೆ, ಗಾಜಾದಲ್ಲಿ ಸಾವನ್ನಪ್ಪಿದ ಶೇಕಡಾ 40ರಷ್ಟು ಮಕ್ಕಳು. ಇದು ಹಿಂದೆಂದೂ ಕಂಡು ಕೇಳರಿಯದ ಸಂಗತಿ. ಗಾಜಾ ಪಟ್ಟಿಯು ಮಕ್ಕಳಿಗೆ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ” ಎಂದು ರಸ್ಸೆಲ್ ನುಡಿದರು.
ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಹಮಾಸ್ ಆಕ್ರಮಣ ಮಾಡಿದ ಸಮಯದಲ್ಲಿ 1,200ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಸಾವನ್ನಪ್ಪಿದರು. 240ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಒಯ್ಯಲಾಯಿತು. ಇಸ್ರೇಲ್ ರಕ್ಷಣಾ ಪಡೆಗಳಿಂದ ಗಾಜಾದ ಮೇಲೆ ನಡೆದ ಪ್ರತೀಕಾರದ ದಾಳಿಯು 12,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರ ಸಾವಿಗೆ ಕಾರಣವಾಗಿದೆ.
ಇಸ್ರೇಲ್‌ನ ದಾಳಿಯ ಬಳಿಕ 1,200ಕ್ಕೂ ಹೆಚ್ಚು ಮಕ್ಕಳು ಇನ್ನೂ ಬಾಂಬ್ ಸ್ಫೋಟಗೊಂಡ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ. ಅನೇಕ ಮಕ್ಕಳು ಏನಾಗಿದ್ದಾರೆ ಎಂಬುದೇ ಗೊತ್ತಿಲ್ಲ. ಅಂಗವಿಕಲರಾಗುವಿಕೆ, ಅಪಹರಣಕ್ಕೊಳಗಾಗುವಿಕೆ, ಮಾನವೀಯ ನೆರವು ದೊರೆಯದಿರುವುದು ಸೇರಿದಂತೆ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಗಳಾಗಿವೆ. ಮಕ್ಕಳ ಸಾವುಗಳ ಸಂಖ್ಯೆಯು ಉಕ್ರೇನ್ ಸೇರಿದಂತೆ ಇದೇ ರೀತಿಯ ಇತರ ಯುದ್ಧಗಳಲ್ಲಿ ಆಗಿರುವುದಕ್ಕಿಂತ ಗಣನೀಯವಾಗಿ ಹೆಚ್ಚಿದೆ.
ಮಂಗಳವಾರ ಬೆಳಿಗ್ಗೆ ಕದನ ವಿರಾಮ ಒಪ್ಪಂದವನ್ನು ಘೋಷಿಸಲಾಗಿದೆ. ಒತ್ತೆಯಾಳಾಗಿರುವ 200 ಮಂದಿಯಲ್ಲಿ 50 ಮಂದಿಯನ್ನು ಕದನ ವಿರಾಮಕ್ಕೆ ಪ್ರತಿಯಾಗಿ ಬಿಡಿಸಿಕೊಳ್ಳಲಾಗುತ್ತಿದೆ. ಇದು ನಿರ್ಣಾಯಕ ಮಾನವೀಯ ನೆರವು ಈ ಪ್ರದೇಶವನ್ನು ಪ್ರವೇಶಿಸಲು ಅನುವು ಮಾಡಿಕೊಡಲಿದೆ. ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಬುಧವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ 7ರ ದಾಳಿಯ ಸಂದರ್ಭದಲ್ಲಿ ಅಪಹರಿಸಲಾದ ಸುಮಾರು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ ಎಂದು ಇಸ್ರೇಲ್ ಟೈಮ್ಸ್ ವರದಿ ಮಾಡಿದೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಕದನವಿರಾಮ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಒತ್ತೆಯಾಳುಗಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಲು ಸಂತೋಷಪಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Israel Palestine War: ಹಮಾಸ್ ರಾಜಕೀಯ ಮುಖ್ಯಸ್ಥನ ಮನೆ ಮೇಲೆ ಬಾಂಬ್ ದಾಳಿ!