Site icon Vistara News

Israel Palestine War: ಗಾಜಾದ ಅಡಿಯಲ್ಲಿದೆ ಭೂಗತ ನಗರ! ಭಯಾನಕ ಸುರಂಗಗಳೇ ಈಗ ಇಸ್ರೇಲ್‌ ಸೈನ್ಯಕ್ಕೆ ತಲೆನೋವು!

gaza tunnels

ಜೆರುಸಲೇಂ/ಲಂಡನ್: ಹಮಾಸ್‌ ಉಗ್ರರು (hamas terrorists) ಒತ್ತೆಯಾಳುಗಳನ್ನು ಇಟ್ಟುಕೊಂಡಿರುವ ಗಾಜಾದಲ್ಲಿ (gaza strip) ದಾಳಿ ನಡೆಸಿ ವಶಪಡಿಸಿಕೊಳ್ಳಲು ಇಸ್ರೇಲಿ ಪಡೆಗಳಿಗೆ ತೀವ್ರ ಆತಂಕ ಒಡ್ಡಿರುವ ಸಂಗತಿ ಎಂದರೆ ನೆಲದಡಿಯ ಸುರಂಗಗಳು. ಇವು ಇಡೀ ಗಾಜಾ ಪಟ್ಟಿಯಲ್ಲಿ ಹಬ್ಬಿವೆ. ಇವು ನೂರಾರು ಕಿಲೋಮೀಟರ್ ಉದ್ದಗಲವಿದ್ದು, ಸುಮಾರು 80 ಮೀಟರ್ ಆಳದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಹಮಾಸ್ ಉಗ್ರರು ಈ ಸುರಂಗ ಜಾಲಗಳ ಮೂಲಕ ಕಾರ್ಯಾಚರಿಸುತ್ತಿದ್ದಾರೆ. ಇದನ್ನು ಒಬ್ಬ ವಿಮೋಚನೆಗೊಂಡ ಒತ್ತೆಯಾಳು ʼಜೇಡರ ಬಲೆʼಗೆ ಹೋಲಿಸಿದ್ದಾರೆ. ಅರುವತ್ತರ ದಶಕದ ವಿಯೆಟ್ನಾಮಿನಲ್ಲಿದ್ದ ʼವಿಯೆಟ್ ಕಾಂಗ್ ಸುರಂಗಜಾಲʼಕ್ಕಿಂತ 10 ಪಟ್ಟು ದೊಡ್ಡದಾಗಿದೆ ಎಂದು ಇನ್ನೊಬ್ಬ ಪರಿಣಿತರು ಹೇಳಿದ್ದಾರೆ.

ಪ್ಯಾಲೇಸ್ತೀನಿಯನ್ ಇಸ್ಲಾಮಿಸ್ಟ್ ಗುಂಪು ಹಮಾಸ್‌, ಗಾಜಾದ ಮರಳು ನೆಲದ 360 ಚದರ ಕಿಮೀ ವಿಸ್ತೀರ್ಣದಲ್ಲಿ ವಿವಿಧ ರೀತಿಯ ಸುರಂಗಗಳನ್ನು ಹೊಂದಿದೆ. ಇವು ದಾಳಿ, ಕಳ್ಳಸಾಗಣೆ, ಆಯುಧ- ಆಹಾರ ಸಂಗ್ರಹ ಮತ್ತು ಕಾರ್ಯಾಚರಣೆಯ ಬಿಲಗಳಾಗಿವೆ. ಇವುಗಳಲ್ಲಿ ಒತ್ತೆಯಾಳುಗಳನ್ನು ಉಗ್ರರು ಇಟ್ಟುಕೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಇಸ್ರೇಲ್‌ನ ವಿಶೇಷ ಪಡೆಗಳು ಹಮಾಸ್ ಉಗ್ರಗಾಮಿಗಳೊಂದಿಗೆ ಹೋರಾಡುವಾಗ ಅಭೂತಪೂರ್ವ ಸವಾಲನ್ನು ಎದುರಿಸಬೇಕಾಗಿದೆ.

ಇಸ್ಲಾಮಿಕ್ ಸ್ಟೇಟ್‌ ಉಗ್ರರಿಂದ ಮೊಸುಲ್ ನಗರವನ್ನು ಹಿಂಪಡೆಯಲು ನಡೆದ ಒಂಬತ್ತು ತಿಂಗಳ ಅವಧಿಯ ಯುದ್ಧವು, ಇಸ್ರೇಲಿಗರ ಈ ಯುದ್ಧಕ್ಕಿಂತ ಸುಲಭವಾಗಿತ್ತು ಎಂದು ಸಾಬೀತುಪಡಿಸಬಹುದು ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಯಾಕೆಂದರೆ ಗಾಜಾ ಸುರಂಗದಲ್ಲಿ ಬಹಳಷ್ಟು ಐಇಡಿಗಳು (ಸುಧಾರಿತ ಸ್ಫೋಟಕ ಸಾಧನಗಳು), ಬಂಕರ್‌ಗಳು, ಬೂಬಿ ಟ್ರಾಪ್‌ಗಳು ಇವೆಯಂತೆ.

ಇಸ್ರೇಲ್ ಸುರಂಗಗಳ ಪತ್ತೆಗಾಗಿ ತುಂಬಾ ಹೂಡಿಕೆ ಮಾಡಿದೆ. ಆದರೆ ಇಸ್ರೇಲ್‌ನ ಸೆನ್ಸರ್‌ಗಳಿಗೆ ಇನ್ನೂ ಸಿಗದ ಸುರಂಗಗಳು ಎಷ್ಟೋ ಇವೆ. 2021ರಲ್ಲಿ ಕೊನೆಯ ಸುತ್ತಿನ ಯುದ್ಧದ ನಂತರ, ಗಾಜಾದ ಹಮಾಸ್ ನಾಯಕ ಯೆಹ್ಯಾ ಅಲ್-ಸಿನ್ವಾರ್ ಹೇಳಿದ್ದು ಹೀಗೆ: ʼʼಅವರು 100 ಕಿಲೋಮೀಟರ್ ಹಮಾಸ್ ಸುರಂಗಗಳನ್ನು ನಾಶಪಡಿಸಿದ್ದೇವೆ ಎಂದಿದ್ದಾರೆ. ಆದರೆ ಗಾಜಾ ಪಟ್ಟಿಯಲ್ಲಿ ನಾವು ಹೊಂದಿರುವ ಸುರಂಗಗಳು 500 ಕಿಮೀ ಮೀರಿದೆ. ಅವರು ಕೇವಲ 20% ಸುರಂಗಗಳನ್ನು ನಾಶಪಡಿಸಿರಬಹುದು.”

ಇಸ್ರೇಲಿ ಸೈನ್ಯದ ಆಕ್ರಮಣದ ಸಂದರ್ಭದಲ್ಲಿ ಹೆಚ್ಚಿನ ಉಗ್ರರು ಭೂಗತ ಸುರಂಗದಲ್ಲಿ ಅಡಗಿಕೊಳ್ಳಬಹುದೆಂದು ಭಾವಿಸಲಾಗಿದೆ. ಇವು ನೂರಾರು ಕಿಲೋಮೀಟರ್‌ ಇರಬಹುದು ಎಂಬ ಅಂದಾಜನ್ನು ಭದ್ರತಾ ವಿಶ್ಲೇಷಕರು ಒಪ್ಪಿಕೊಂಡಿದ್ದಾರೆ. ಆದರೂ ನಿರ್ಬಂಧಿತ ಕರಾವಳಿ ಪಟ್ಟಿಯು ಕೇವಲ 40 km ಉದ್ದವಾಗಿದೆ.

ಇಸ್ರೇಲ್ ಗಾಜಾದ ವಾಯು ಪ್ರದೇಶ ಮತ್ತು ಸಮುದ್ರ ಪ್ರವೇಶದ ಸಂಪೂರ್ಣ ನಿಯಂತ್ರಣ ಹೊಂದಿದೆ. ಅದರ 72 ಕಿಮೀ ಭೂ ಗಡಿಯನ್ನು ನಿಯಂತ್ರಿಸಿದೆ. 13 ಕಿಮೀ ಈಜಿಪ್ಟ್‌ನೊಂದಿಗೆ ಹಂಚಿಕೊಂಡಿದೆ. ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಜನರನ್ನು ತರಲು ಹಮಾಸ್‌ಗೆ ಸುರಂಗಗಳೇ ಮಾರ್ಗ. ಇತ್ತೀಚೆಗೆ ಹಮಾಸ್‌ನಿಂದ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳು, 85 ವರ್ಷದ ಯೊಚೆವೆಡ್ ಲಿಫ್‌ಶಿಟ್ಜ್ ಹೇಳುವ ಪ್ರಕಾರ, ʼʼಅದು ಜೇಡರ ಬಲೆಯಂತಿದೆ. ಅನೇಕ ಸುರಂಗಗಳಿವೆ. ನಾವು ನೆಲದಡಿಯಲ್ಲಿ ಕಿಲೋಮೀಟರ್‌ಗಟ್ಟಲೆ ನಡೆದಿದ್ದೇವೆ.”

ಇಸ್ರೇಲ್‌ನ ಅಗಾಧ ವೈಮಾನಿಕ ಮತ್ತು ಶಸ್ತ್ರಸಜ್ಜಿತ ಮಿಲಿಟರಿ ಬಲವನ್ನು ಧೃತಿಗೆಡಿಸುವ ಅಂಶ ಎಂದರೆ ಇಸ್ರೇಲ್‌ನ ಸೈನಿಕರನ್ನು ಇಕ್ಕಟ್ಟಾದ ಭೂಗತ ಸ್ಥಳಗಳಲ್ಲಿ ನಡೆಯುವಂತೆ ಮಾಡುವ ಈ ಸುರಂಗಗಳು. ಇಸ್ರೇಲಿ ಮಿಲಿಟರಿ ವಕ್ತಾರರು ಹೇಳುವಂತೆ, “ಕಿಲೋಮೀಟರ್‌ಗಳ ಬಗ್ಗೆ ಗೊತ್ತಿಲ್ಲ. ಆದರೆ ಅವುಗಳನ್ನು ಶಾಲೆಗಳು ಮತ್ತು ವಸತಿ ಪ್ರದೇಶಗಳ ಅಡಿಯಲ್ಲಿ ನಿರ್ಮಿಸಲಾಗಿದೆ.”

ಭೂಗತ ನಗರ

ಇಸ್ರೇಲಿ ಭದ್ರತಾ ಮೂಲಗಳು ಹೇಳುವಂತೆ ಇಸ್ರೇಲ್‌ನ ಭಾರೀ ವೈಮಾನಿಕ ಬಾಂಬ್ ದಾಳಿಗಳು ಸುರಂಗದ ಮೂಲಸೌಕರ್ಯಕ್ಕೆ ಸ್ವಲ್ಪ ಹಾನಿಯನ್ನುಂಟುಮಾಡಿದೆ. ನೌಕಾ ಕಮಾಂಡೋಗಳು ಈ ವಾರ ಗಾಜಾ ಬಳಿಯ ಕರಾವಳಿ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸಮುದ್ರದ ದಾಳಿಯನ್ನು ಪ್ರಾರಂಭಿಸಿದ್ದಾರೆ.

“ನಾವು ಹಲವು ದಿನಗಳಿಂದ ಭಾರಿ ದಾಳಿ ನಡೆಸುತ್ತಿದ್ದೇವೆ. ಆದರೆ ಹಮಾಸ್ ಸಾಮರ್ಥ್ಯ, ಪ್ರತಿದಾಳಿಗಳು ಮತ್ತು ಆಕ್ರಮಣಶೀಲತೆ ಬಹುಮಟ್ಟಿಗೆ ಅಖಂಡವಾಗಿದೆ” ಎಂದು ಮಾಜಿ ಬ್ರಿಗೇಡಿಯರ್ ಜನರಲ್ ಅಮೀರ್ ಅವಿವಿ ಹೇಳಿದ್ದಾರೆ. ಅವರು ಗಾಜಾ ವಿಭಾಗದ ಉಪ ಕಮಾಂಡರ್ ಆಗಿದ್ದು, ಸುರಂಗಗಳನ್ನು ನಿಭಾಯಿಸುವ ಕಾರ್ಯ ಹೊಂದಿದ್ದರು. “ಗಾಜಾದಾದ್ಯಂತ 40-50 ಮೀಟರ್ ಆಳದಲ್ಲಿ ಒಂದಿಡೀ ನಗರವಿದೆ. ಬಂಕರ್‌ಗಳು, ಪ್ರಧಾನ ಕಛೇರಿಗಳು, ಸೋರ್‌ಗಳಿವೆ. ಸಾವಿರಕ್ಕೂ ಹೆಚ್ಚು ರಾಕೆಟ್ ಉಡಾವಣಾ ಸ್ಥಾನಗಳಿಗೆ ಸಂಪರ್ಕ ಹೊಂದಿವೆ.”

ಕೆಲವು ಕಡೆ 80 ಮೀಟರ್‌ಗಳಷ್ಟು ಆಳದಲ್ಲಿ ಸುರಂಗಗಳಿವೆ ಎಂದು ಅಂದಾಜಿಸಲಾಗಿದೆ. ಕೆಲವು ಮೈಲುಗಳಷ್ಟು ಉದ್ದವಾಗಿದ್ದು, ಸುಭದ್ರ ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿವೆ. ಉಗ್ರರು ಅವರು ಅದನ್ನು ಸಜ್ಜುಗೊಳಿಸಲು ಬಹಳಷ್ಟು ವರ್ಷಗಳು ಮತ್ತು ಬಹಳಷ್ಟು ಹಣ ವಿನಿಯೋಗಿಸಿದ್ದಾರೆ. ಅವರ ಆಹಾರ ಪೂರೈಕೆ ಸರಪಳಿ ಅಖಂಡವಾಗಿದೆ. ಕೆಲವು ಈಜಿಪ್ಟ್ ಮಿಲಿಟರಿ ಅಧಿಕಾರಿಗಳು ಇದಕ್ಕೆ ಸಹಾಯ ಒದಗಿಸಿದ್ದಾರೆ. ಈಜಿಪ್ಟ್ ಸೈನ್ಯಕ್ಕೆ ಈ ಬಗ್ಗೆ ಅರಿವು ಇದೆಯೇ ಎಂಬುದು ಅಸ್ಪಷ್ಟವಾಗಿದೆ.

1987ರಲ್ಲಿ ಗಾಜಾದಲ್ಲಿ ಹಮಾಸ್ ಸೃಷ್ಟಿಯಾದ ಬಳಿಕ 1990ರ ದಶಕದ ಮಧ್ಯಭಾಗದಲ್ಲಿ ಇಸ್ರೇಲ್, ಯಾಸರ್ ಅರಾಫತ್ ಅವರ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ಗೆ ಗಾಜಾದಲ್ಲಿ ಸ್ವಲ್ಪ ಮಟ್ಟಿಗೆ ಸ್ವಯಂ-ಆಡಳಿತವನ್ನು ನೀಡಿದಾಗ ಸುರಂಗಗಳನ್ನು ಅಗೆಯಲು ಪ್ರಾರಂಭಿಸಲಾಯಿತು. ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್‌ಗಿಂತ ಗಾಜಾದಲ್ಲಿ ಹಮಾಸ್ ಬಲವಾಗಿರಲು ಸುರಂಗ ಜಾಲವು ಒಂದು ಪ್ರಮುಖ ಕಾರಣ. 2005ರಲ್ಲಿ ಇಸ್ರೇಲ್ ತನ್ನ ಸೈನಿಕರು ಮತ್ತು ವಸಾಹತುಗಾರರನ್ನು ಗಾಜಾದಿಂದ ಹೊರಕ್ಕೆ ತಂದಾಗ ಮತ್ತು 2006ರ ಚುನಾವಣೆಯಲ್ಲಿ ಹಮಾಸ್ ಅಧಿಕಾರ ಪಡೆದಾಗ ಸುರಂಗ ಮಾರ್ಗ ಸುಲಭವಾಯಿತು.

ಇದನ್ನೂ ಓದಿ: Israel Palestine War: ಇಟ್ಟ ಗುರಿ ತಪ್ಪದ ಇಸ್ರೇಲ್;‌ ಹಮಾಸ್‌ನ 3 ಪ್ರಮುಖ ಉಗ್ರರ ಮಟಾಷ್!

Exit mobile version