Site icon Vistara News

Israel Palestine War: ಗಾಜಾ ಎರಡು ತುಂಡು; ಗೆಲ್ಲುವವರೆಗೂ ವಿರಾಮವಿಲ್ಲ: ಇಸ್ರೇಲ್‌

Israel Attack On Gaza

ಟೆಲ್ ಅವೀವ್: ಗಾಜಾದ ಮೇಲೆ ಇಸ್ರೇಲ್‌ ದಾಳಿ (Israel palestine war) ಭಾರಿ ಸ್ವರೂಪದಲ್ಲಿ ಮುಂದುವರಿದಿದ್ದು, ಗಾಜಾ ಪಟ್ಟಿಯನ್ನು (Gaza strip) ಈಗ ಎರಡು ಭಾಗಗಳಾಗಿ ಕತ್ತರಿಸಲಾಗಿದೆ. ಈಗ ದಕ್ಷಿಣ ಗಾಜಾ ಮತ್ತು ಉತ್ತರ ಗಾಜಾ ಅಸ್ತಿತ್ವದಲ್ಲಿವೆ ಎಂದು ಇಸ್ರೇಲ್‌ನ ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.

ಇಸ್ರೇಲ್‌ನ ಗಾಜಾ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಅಮೇರಿಕನ್ ಪಡೆಗಳ ಮೇಲೆ ಇರಾನ್ ಬೆಂಬಲಿತ ಗುಂಪುಗಳ ದಾಳಿಯನ್ನು ತಡೆಯುವ ಮತ್ತು ಗಾಜಾದಲ್ಲಿ ತೊಂದರೆಗೀಡಾದ ನಾಗರಿಕರಿಗೆ ನೆರವು ನೀಡುವ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಕ್ರಮಿತ ವೆಸ್ಟ್ ಬ್ಯಾಂಕ್, ಇರಾಕ್ ಮತ್ತು ಸೈಪ್ರಸ್‌ಗೆ ಭಾನುವಾರ ಭೇಟಿ ನೀಡಿದರು.

ನಿನ್ನೆ ಅಮೆರಿಕದ ಉನ್ನತ ರಾಜತಾಂತ್ರಿಕರು ಪ್ಯಾಲೆಸ್ತೀನ್‌ಗೆ ಭೇಟಿ ನೀಡಿದ್ದು, ಅಲ್ಲಿನ ನಿವಾಸಿಗಳಿಗೆ ಮಾನವೀಯ ನೆರವಿನ ಕುರಿತು ಒತ್ತಿ ಹೇಳಿದ್ದಾರೆ. ಇಸ್ರೇಲಿ ಪಡೆಗಳು ಗಾಜಾ ನಗರವನ್ನು ಸುತ್ತುವರೆದಿವೆ. ಬ್ಲಿಂಕೆನ್ ಅವರು ಪ್ಯಾಲೇಸ್ತೀನ್‌ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರನ್ನು ಭೇಟಿಯಾಗಿದ್ದು, ಅವರು ಗಾಜಾದಲ್ಲಿ ನಡೆಯುತ್ತಿರುವ “ಜನಾಂಗೀಯ ಹತ್ಯೆ”ಯನ್ನು ಖಂಡಿಸಿದರು. ಅಲ್ಲಿ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯವು ಕನಿಷ್ಠ 9,770 ಜನರು, ಹೆಚ್ಚಾಗಿ ನಾಗರಿಕರು, ನಾಲ್ಕು ವಾರಗಳ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಎಂದಿದ್ದಾರೆ.

ಗಾಜಾದಲ್ಲಿ ದೂರಸಂಪರ್ಕವನ್ನು ಮೂರನೇ ಬಾರಿಗೆ ಕಡಿತಗೊಳಿಸುವುದರೊಂದಿಗೆ, ವಾಷಿಂಗ್ಟನ್ ಕದನ ವಿರಾಮದ ಕರೆಗಳನ್ನು ತಿರಸ್ಕರಿಸಿದೆ. ಮತ್ತು ಅಕ್ಟೋಬರ್ 7ರಂದು ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಳಿಯನ್ನು ನಡೆಸಿದ ಹಮಾಸ್ ಅನ್ನು ಹತ್ತಿಕ್ಕುವ ಇಸ್ರೇಲ್‌ನ ಗುರಿಯನ್ನು ಬೆಂಬಲಿಸಿದೆ. 1,400ಕ್ಕೂ ಹೆಚ್ಚು ಜನರನ್ನು ಕೊಂದು, 240ಕ್ಕೂ ಹೆಚ್ಚು ಜನರನ್ನು ಹಮಾಸ್‌ ಉಗ್ರರು ವಶಪಡಿಸಿಕೊಂಡಿದ್ದಾರೆ.

ಗಾಜಾದಲ್ಲಿ ಸಾವಿನ ಸಂಖ್ಯೆಯ ಬಗ್ಗೆ ಜಾಗತಿಕ ಕಳವಳ ಹೆಚ್ಚಿದೆ. ಆದರೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮತ್ತೊಮ್ಮೆ “ಒತ್ತೆಯಾಳುಗಳನ್ನು ಹಿಂದಿರುಗಿಸುವವರೆಗೆ ಕದನ ವಿರಾಮ ಇರುವುದಿಲ್ಲ” ಎಂದು ಶಪಥ ಮಾಡಿದ್ದಾರೆ. “ಅವರು ಕದನವಿರಾಮ ಎಂಬ ಪದವನ್ನು ತಮ್ಮ ನಿಘಂಟಿನಿಂದ ತೆಗೆದುಹಾಕಲಿ. ನಾವು ಇದನ್ನು ನಮ್ಮ ಶತ್ರುಗಳಿಗೆ ಮತ್ತು ನಮ್ಮ ಸ್ನೇಹಿತರಿಗೆ ಹೇಳುತ್ತಿದ್ದೇವೆ” ಎಂದು ಪ್ರಧಾನ ಮಂತ್ರಿ ವಾಯುಪಡೆಯ ನೆಲೆಯಲ್ಲಿ ಸೈನಿಕರನ್ನು ಭೇಟಿಯಾದ ನಂತರ ಹೇಳಿದರು. “ನಾವು ಗೆಲ್ಲುವವರೆಗೂ ಮುಂದುವರಿಯುತ್ತೇವೆ. ನಮಗೆ ಪರ್ಯಾಯ ಮಾರ್ಗವಿಲ್ಲ” ಎಂದಿದ್ದಾರೆ ನೆತನ್ಯಾಹು.

ಸೈನ್ಯವು ಬಿಡುಗಡೆ ಮಾಡಿದ ದೃಶ್ಯಾವಳಿಗಳಲ್ಲಿ ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ಬುಲ್ಡೋಜರ್‌ಗಳು ಮರಳುಗಾಡಿನಲ್ಲಿ ಮುಂದುವರಿಯುತ್ತಿದ್ದು, ಸೈನಿಕರು ಭಾನುವಾರ ಮನೆ-ಮನೆ ಯುದ್ಧದಲ್ಲಿ ತೊಡಗಿದ್ದರು. “ಈ ದಾಳಿಯು ಭೂಕಂಪದಂತಿದೆ” ಎಂದು ಗಾಜಾ ನಗರದ ನಿವಾಸಿ ಅಲಾ ಅಬು ಹಸೆರಾ ಎಂಬವರು ಸಂಪೂರ್ಣ ಬ್ಲಾಕ್‌ಗಳು ಅವಶೇಷಗಳಾಗಿ ಕುಸಿದಿರುವ ಪ್ರದೇಶದಲ್ಲಿ ಹೇಳಿದರು.

ಇಸ್ರೇಲ್ ಸೈನ್ಯ ಗಾಜಾದಲ್ಲಿ ಕರಪತ್ರಗಳನ್ನು ವಿತರಿಸಿದ್ದು, ಉತ್ತರ ಗಾಜಾದಲ್ಲಿರುವ ಪ್ಯಾಲೇಸ್ಟಿನಿಯನ್ ನಾಗರಿಕರನ್ನು ದಕ್ಷಿಣಕ್ಕೆ ಹೋಗುವಂತೆ ಒತ್ತಾಯಿಸಿ ಪಠ್ಯ ಸಂದೇಶಗಳನ್ನು ಕಳುಹಿಸಿದೆ. ಯುಎಸ್ ಅಧಿಕಾರಿಯೊಬ್ಬರು ಶನಿವಾರ ಕನಿಷ್ಠ 3,50,000 ನಾಗರಿಕರು ಈಗ ಯುದ್ಧ ವಲಯದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.

“ಅಂತಾರಾಷ್ಟ್ರೀಯ ಕಾನೂನಿನ ತತ್ವಗಳನ್ನು ಪರಿಗಣಿಸದ ಇಸ್ರೇಲ್‌ನ ಕೈಯಲ್ಲಿ ಗಾಜಾದಲ್ಲಿ ನಮ್ಮ ಪ್ಯಾಲೆಸ್ತೀನ್ ಜನರು ನರಮೇಧ ಮತ್ತು ವಿನಾಶವನ್ನು ಅನುಭವಿಸಿದ್ದಾರೆ” ಎಂದು ಪ್ಯಾಲೆಸ್ತೀನ್‌ ಅಧ್ಯಕ್ಷ ಅಬ್ಬಾಸ್‌ ಹೇಳಿದ್ದಾರೆ.

ಇದನ್ನೂ ಓದಿ: Israel Palestine War: ಗಾಜಾ ಮೇಲೆ ಇಸ್ರೇಲ್ ಅಣ್ವಸ್ತ್ರ ದಾಳಿ?

Exit mobile version