ವಿಶ್ವಸಂಸ್ಥೆ: ಗಾಜಾದಲ್ಲಿ ಇಸ್ರೇಲ್ ಹಮಾಸ್ ಉಗ್ರರ ಜೊತೆಗೆ ನಡೆಸುತ್ತಿರುವ ಭೀಕರ ಕದನಕ್ಕೆ ತಡೆಹಾಕಿ ಕದನ ವಿರಾಮಕ್ಕೆ (Gaza Ceasefire) ಕರೆ ನೀಡುವ ವಿಶ್ವಸಂಸ್ಥೆಯ ಪ್ರಯತ್ನವನ್ನು ಅಮೆರಿಕ ವಿಟೋ ಮೂಲಕ ಭಂಗಗೊಳಿಸಿದೆ.
ಯುಎನ್ ಸೆಕ್ರೆಟರಿ- ಜನರಲ್ ಆಂಟೋನಿಯೊ ಗುಟೆರೆಸ್ ಅವರು ಯುಎನ್ ಚಾರ್ಟರ್‌ನ ಅಪರೂಪವಾಗಿ ಬಳಸಲಾಗುವ ಆರ್ಟಿಕಲ್ 99 ಅನ್ನು ಬಳಸಿ ತುರ್ತು ಭದ್ರತಾ ಮಂಡಳಿಯ ಸಭೆಯನ್ನು ಕರೆಯಲು ಹಾಗೂ ತಕ್ಷಣವೇ ಕದನ ವಿರಾಮಕ್ಕೆ (Gaza Ceasefire) ನಿರ್ಣಯ ಮಂಡಿಸಿದರು. ಒತ್ತೆಯಾಳುಗಳ ಬಿಡುಗಡೆಗೆ ಒತ್ತಾಯಿಸಿದರು. “ಹಮಾಸ್ ನಡೆಸಿದ ಕ್ರೌರ್ಯವು ಪ್ಯಾಲೇಸ್ಟಿನಿಯನ್ ಜನರಿಗೆ ಸಾಮೂಹಿಕ ಶಿಕ್ಷೆ ನೀಡುವುದನ್ನು ಎಂದಿಗೂ ಸಮರ್ಥಿಸುವುದಿಲ್ಲ” ಎಂದು ಹೇಳಿದರು.
ಆದರೆ ಇಸ್ರೇಲ್‌ಗೆ ಬಿಲಿಯನ್‌ಗಟ್ಟಲೆ ಡಾಲರ್‌ಗಳ ಮಿಲಿಟರಿ ಸಹಾಯವನ್ನು ಪೂರೈಸುವ ಯುಎಸ್, ಈ ನಿರ್ಣಯವನ್ನು ವೀಟೋ ಮಾಡಿತು. “ಈ ನಿರ್ಣಯ ವಾಸ್ತವದಿಂದ ದೂರವಾದುದು. ಸಂಘರ್ಷದ ಸ್ಥಳದಲ್ಲಿರುವ ವಿಚಾರವನ್ನು ಇದು ಇತ್ಯರ್ಥಪಡಿಸುವುದಿಲ್ಲ” ಎಂದು ಅಮೆರಿಕದ ವಿಶ್ವಸಂಸ್ಥೆ ಪ್ರತಿನಿಧಿ ರಾಬರ್ಟ್ ವುಡ್ ಹೇಳಿದರು.
ಗಾಜಾದಲ್ಲಿ ನಾಗರಿಕತೆ ಕುಸಿಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. “ಜನ ಬೆಚ್ಚಗಿರಲು ಉರುವಲುಗಳಿಗಾಗಿ ದೂರವಾಣಿ ಕಂಬಗಳನ್ನು ಸಹ ಕತ್ತರಿಸಲು ಪ್ರಾರಂಭಿಸಿದ್ದಾರೆ. ಅಡುಗೆಗೂ ಏನೂ ಲಭ್ಯವಿಲ್ಲ” ಎಂದು ಡಬ್ಲ್ಯುಎಚ್‌ಒ ಗಮನಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸದ್ಯ ನಡೆಯುತ್ತಿರುವ ಹತ್ಯೆಯಲ್ಲಿ ಭಾಗಿದಾರ ಎಂದು ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆ ಹೇಳಿದೆ.
ಎರಡು ತಿಂಗಳಿನಿಂದ ಹಮಾಸ್‌ನ ಮೇಲೆ ಇಸ್ರೇಲಿ ಸೇನಾಪಡೆಗಳು ಮಾರಣಾಂತಿಕ ದಾಳಿ ನಡೆಸುತ್ತಿವೆ. ಹಮಾಸ್ ಅನ್ನು ನಾಶಮಾಡಲು ಇಸ್ರೆಲ್ ಶಪಥ ಮಾಡಿದೆ. ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯದ ಇತ್ತೀಚಿನ ಎಣಿಕೆಯ ಪ್ರಕಾರ, ಇಸ್ರೇಲ್ ದಾಳಿಯಿಂದ ಪ್ಯಾಲೆಸ್ಟಿನ್ 17,487 ಜನರನ್ನು ಕಳೆದುಕೊಂಡಿದೆ. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಮಾಸ್ ಉಗ್ರರು ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಕೊಂದು, 250 ಮಂದಿಯನ್ನು ಒತ್ತೆಯಾಳುಗಳಾಗಿ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ‘ಹುಡುಕು, ಕೊಲ್ಲು’; ಹಮಾಸ್ ಉಗ್ರರ ದಮನಕ್ಕೆ ಇಸ್ರೇಲ್ ಮಾಸ್ಟರ್ ಪ್ಲಾನ್ ಹೇಗಿದೆ?