ಟೆಲ್ ಅವಿವ್(ಇಸ್ರೇಲ್): ಲೆಬನಾನ್ ಗಡಿಯಲ್ಲಿ ಹೆಜ್ಬುಲ್ಲಾ ಉಗ್ರ ಸಂಘಟನೆಯೊಂದಿಗೆ (Hezbollah) ಸಂಘರ್ಷಕ್ಕೆ ಇಳಿದಿರುವ ಇಸ್ರೇಲ್(Israel strike), ಭಾನುವಾರ ಲೆಬನಾನ್ ಕಡೆ ಪೂರ್ವಭಾವಿ ದಾಳಿ ನಡೆಸಲು ತೀರ್ಮಾನಿಸಿದೆ. ಹೀಗಾಗಿ ಮುಂದಿನ 48 ಗಂಟೆಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ಮೂರು ದಿನಗಳ ಹಿಂದಷ್ಟೇ ಹೆಜ್ಬುಲ್ಲಾ ಉಗ್ರ ಸಂಘಟನೆ ಇಸ್ರೇಲ್ ತನ್ನ ವಶಕ್ಕೆ ಪಡೆದುಕೊಂಡಿರುವ ಗೋಲನ್ ಹೈಟ್ಸ್ ಮೇಲೆ 50ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾಯಿಸಿತ್ತು.
ಯುದ್ಧದಲ್ಲೇ ಮುಳುಗಿರುವ ಇಸ್ರೇಲ್ಗೆ ಮತ್ತಷ್ಟು ಭಿಕ್ಕಟ್ಟಿನ ಸ್ಥಿತಿ ಇದೀಗ ನಿರ್ಮಾಣ ಆಗಿದೆ. ಒಂದೆಡೆ ಗಾಜಾ, ಇನ್ನೊಂದು ಕಡೆ ರಫಾದಲ್ಲಿ ಹಮಾಸ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ಲೆಬನಾನ್ ಗಡಿಯಲ್ಲಿ ಹೆಜ್ಬೊಲ್ಲಾದೊಂದಿಗೆ ಸಂಘರ್ಷಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
“ಇಸ್ರೇಲ್ ನಾಗರಿಕರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲೆಬನಾನ್‌ನ್ ವಿರುದ್ಧ ಸಮರಕ್ಕೆ ಇಳಿಯಲಿದ್ದೇವೆ, ಬೈರುತ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ನಮ್ಮ ನಾಗರಿಕರನ್ನು ರಕ್ಷಿಸುವ ಸಲುವಾಗಿ ಎಲ್ಲ ರೀತಿಯ ಕಾರ್ಯ ವಿಧಾನವನ್ನು ಕಾರ್ಯಗತ ಮಾಡಲು ನಿರ್ಧರಿಸಿದ್ದೇವೆ” ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
2 ದಿನಗಳ ಹಿಂದೆ ಲೆಬನಾನಿನ ಶಿಯಾ ಇಸ್ಲಾಮಿಸ್ಟ್ ಪೊಲಿಟಿಕಲ್ ಪಾರ್ಟಿ ಮತ್ತು ಉಗ್ರರ ಗುಂಪು ಹೆಜ್ಬುಲ್ಲಾ, ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿತ್ತು. ದಾಳಿಯ ಬಗ್ಗೆ ಮೊದಲೇ ಅರಿತಿದ್ದ ಇಸ್ರೇಲ್, ಹೆಜ್ಬೊಲ್ಲಾಗೆ ದಿಟ್ಟ ಉತ್ತರ ನೀಡಿತ್ತು ಎನ್ನಲಾಗಿದ್ದು, ರಾಕೆಟ್‌ಗಳನ್ನು ಮಧ್ಯದಲ್ಲಿಯೇ ತಡೆದು ಅದನ್ನು ನಾಶ ಮಾಡಿದೆ ಎಂದು ವರದಿಯಾಗಿತ್ತು. ಇದೀಗ ಇಸ್ರೇಲ್ ನೇರವಾಗಿ ಲೆಬನಾನಿನ ಮೇಲೆ ದಾಳಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಲೆಬನಾನ್ನ ಡೀರ್ ಸಿರಿಯಾನ್ನ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ 17 ವರ್ಷದ ಬಾಲಕ ಸಾವನ್ನಪ್ಪಿ 6 ಜನರು ಗಾಯಗೊಂಡಿದ್ದರು. ಇದಾದ ಬಳಿಕ ಹೆಜ್ಬೊಲ್ಲಾ, ಇಸ್ರೇಲ್ ಮೇಲೆ ರಾಕೆಟ್ ಉಡಾಯಿಸಿತ್ತು. ಕಳೆದ ಒಂದು ವಾರದ ಹಿಂದೆ ಇಸ್ರೇಲ್, ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh)ಅವರನ್ನು ಹತ್ಯೆಗೈದಿತ್ತು. ಇದರಿಂದ ಇರಾನ್, ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನಾಡಿತ್ತು.
ಜುಲೈ 28 ರಂದು Hezbollah, ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ ನಡೆಸಿತ್ತು. ದಾಳಿ ವೇಳೆ 12 ಮಕ್ಕಳು ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್ಗೆ ಪಾಠ ಕಲಿಸಿದಂತೆ ಹೆಜ್ಬೊಲ್ಲಾಗೂ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು. ಹೆಜ್ಬೊಲ್ಲಾ ರಾಕೆಟ್ ದಾಳಿಯ ಎರಡು ದಿನಗಳ ನಂತರ ಜುಲೈ 30 ರಂದು ಇಸ್ರೇಲ್, ಹೆಜ್ಬೊಲ್ಲಾದ ಉನ್ನತ ಕಮಾಂಡರ್ ಫೌದ್ ಶುಕರ್ ಅವರನ್ನು ಹತ್ಯೆಗೈದಿತ್ತು. ಇಸ್ರೇಲ್‌ನ 12 ಮಕ್ಕಳ ಸಾವಿಗೆ ಶುಕರ್ ಕಾರಣ ಎಂದು ಇಸ್ರೇಲ್ ಆರೋಪಿಸಿತ್ತು.