ಪ್ಯಾಲೆಸ್ಟೈನ್ನ ಗಾಜಾ ನಗರದ ಮೇಲೆ ಇಸ್ರೇಲ್ ಸೈನಿಕರು ವೈಮಾನಿಕ ದಾಳಿ (Israel Air Strike) ನಡೆಸಿದ್ದಾರೆ. ಇಸ್ಲಾಮಿಕ್ ಜಿಹಾದ್ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಯ ಮೂವರು ಹಿರಿಯ ಕಮಾಂಡರ್ಗಳು ಕೊಲ್ಲಲ್ಪಟ್ಟಿದ್ದಾರೆ. ಇನ್ನುಳಿದ 9 ಮಂದಿ ನಾಗರಿಕರಾಗಿದ್ದು, ಅದರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ. ಗಾಜಾ ಪಟ್ಟಿ ಯಾವಾಗಲೂ ಸೂಕ್ಷ್ಮ ಪ್ರದೇಶವೇ ಆಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಕಾದಾಟ ಈಗಿನಿದಲ್ಲ. ಗಾಜಾ ಪಟ್ಟಿಯಲ್ಲಿ ಅಡಗಿರುವ ಹಮಾಸ್ ಉಗ್ರರು ಅಂದರೆ, ಪ್ಯಾಲೆಸ್ಟೈನ್ ಸುನ್ನಿ ಇಸ್ಲಾಂ ಮೂಲಭೂತವಾದಿಗಳನ್ನು ಸಂಪೂರ್ಣ ನಿರ್ನಾಮ ಮಾಡುವುದಾಗಿ ಇಸ್ರೇಲ್ ಈಗಾಗಲೇ ಶಪಥ ಮಾಡಿದೆ. ಹೀಗಾಗಿ ಪದೇಪದೆ ಗಾಜಾ ಪಟ್ಟಿ ಮೇಲೆ ಇಸ್ರೇಲ್ ವಿವಿಧ ಸ್ವರೂಪದ ದಾಳಿ ನಡೆಸುತ್ತಲೇ ಬರುತ್ತಿದೆ.
ಈ ಸಲ ಇಸ್ರೇಲ್, ಕಿಂಗ್ಪಿನ್ ಭಯೋತ್ಪಾದಕರನ್ನು ಟಾರ್ಗೆಟ್ ಮಾಡಿಯೇ ದಾಳಿ ನಡೆಸಿತ್ತು. ಗಾಜಾ ಪಟ್ಟಿಯ ವಿವಿಧ ಕಡೆಗಳಲ್ಲಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ದಾಳಿ ನಡೆಸಿದ್ದವು. 12 ಜನ ಮೃತಪಡುವ ಜತೆಗೆ, ಅನೇಕರು ಗಾಯಗೊಂಡಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಲ್ ಶಿಫಾ ಎಂಬ ಮೆಡಿಕಲ್ ಕಾಂಪ್ಲೆಕ್ಸ್ನ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ತಿಳಿಸಿದ್ದಾರೆ.
ಇಸ್ರೇಲ್ ಜೈಲು ಸೇರಿ, ಅಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಸ್ಲಾಮಿಕ್ ಜಿಹಾದ್ ಉಗ್ರ ಸಂಘಟನೆಯ ಹಿರಿಯ ಭಯೋತ್ಪಾದಕನೊಬ್ಬ ಇತ್ತೀಚೆಗೆ ಸತ್ತಿದ್ದ. ಅವನ ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಈ ಉಗ್ರ ಸಂಘಟನೆ ಇಸ್ರೇಲ್ ಮೇಲೆ ರಾಕೆಟ್ಗಳ ದಾಳಿ ನಡೆಸಿತ್ತು. 104 ರಾಕೆಟ್ಗಳನ್ನು ಹಾರಿಬಿಟ್ಟಿತ್ತು. ಉಗ್ರರು ಹಾರಿಸಿದ್ದ ರಾಕೆಟ್ಗಳಲ್ಲಿ ಹಲವು ಸ್ಡೆರೋಟ್ ಸಿಟಿಯಲ್ಲಿ ಸಿಕ್ಕಿಬಿದ್ದಿದ್ದವು. ಹಲವು ಮನೆಗಳು, ವಾಹನಗಳಿಗೆ ಹಾನಿ ಮಾಡಿದ್ದವು. ಐದಾರು ಜನ ಗಾಯಗೊಂಡಿದ್ದರು. ಅಂದು ಉಗ್ರರು ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ವೈಮಾನಿಕ ದಾಳಿ ಮಾಡಿದೆ.
ಇದನ್ನೂ ಓದಿ: Israeli Missile Strikes: ಸಿರಿಯಾ ವಸತಿ ಕಟ್ಟಡದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ; 15 ಮಂದಿ ಸಾವು