ಸಿರಿಯಾದ ರಾಜಧಾನಿ ಡೆಮಾಸ್ಕಸ್ನಲ್ಲಿರುವ ಕಾಫರ್ ಸೌಸಾದ ವಸತಿ ಕಟ್ಟಡದ ಮೇಲೆ ಶನಿವಾರ ರಾತ್ರಿ ಇಸ್ರೇಲ್ ಹಾರಿಸಿದ ಕ್ಷಿಪಣಿ ಅಪ್ಪಳಿಸಿದ (Israeli Missile Strikes) ಪರಿಣಾಮ 15 ಮಂದಿ ಸಾವನ್ನಪ್ಪಿದ್ದಾರೆ. ಸಿರಿಯಾದಲ್ಲಿ ಕಳೆದ 15ದಿನಗಳ ಹಿಂದಷ್ಟೇ 7.8 ಮ್ಯಾಗ್ನಿಟ್ಯೂಡ್ ತೀವ್ರತೆಯ ಪ್ರಬಲ ಭೂಕಂಪ ಉಂಟಾಗಿ, ಸಾವಿರಾರು ಜನರು ಮೃತಪಟ್ಟಿದ್ದಾರೆ. ಭೂಕಂಪದ ಹಾನಿಯಿಂದ ಇನ್ನೂ ಸಿರಿಯಾ ಚೇತರಿಸಿಕೊಂಡಿಲ್ಲ. ಅದರ ಬೆನ್ನಲ್ಲೇ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಈ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಸಿರಿಯಾ ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 12.30ರ ಹೊತ್ತಿಗೆ ಡೆಮಾಸ್ಕಸ್ನಲ್ಲಿ ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿತು. ಡೆಮಾಸ್ಕಸ್ನ ಸುತ್ತಲೂ ಆಕಾಶದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗಿದೆ. ವಸತಿ ಕಟ್ಟಡವೊಂದಕ್ಕೆ ಕ್ಷಿಪಣಿ ಅಪ್ಪಳಿಸಿದೆ ಎಂದು ಸಿರಿಯಾ ವಾಯುಪಡೆ ತಕ್ಷಣವೇ ಹೇಳಿಕೆ ಬಿಡುಗಡೆ ಮಾಡಿತ್ತು. ಡೆಮಾಸ್ಕಸ್ನಲ್ಲಿರುವ ಇರಾನ್ನ ಸಾಂಸ್ಕೃತಿಕ ಕೇಂದ್ರದ ಸಮೀಪದ ಉನ್ನತ ಮಟ್ಟದ ಭದ್ರತಾ ಸಂಕೀರ್ಣದ ಹತ್ತಿರವೇ ಸ್ಫೋಟ ಉಂಟಾಗಿದೆ. ಇದೊಂದು ಜನನಿಬಿಡ ಪ್ರದೇಶವಾಗಿದೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ರಾಯಿಟರ್ಸ್ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ: Shehbaz Sharif: ಆರ್ಥಿಕವಾಗಿ ಕಂಗೆಟ್ಟ ಪಾಕ್‌ನಲ್ಲೊಬ್ಬ ಮಹಾ ದಾನಿ, ಟರ್ಕಿ, ಸಿರಿಯಾಗೆ 248 ಕೋಟಿ ರೂ. ದಾನ, ಮೆಚ್ಚಿದ ಪ್ರಧಾನಿ
ಇಸ್ರೇಲ್-ಸಿರಿಯಾ ನಡುವೆ ಯುದ್ಧ ಸನ್ನಿವೇಶ ಉಂಟಾಗಿ ಹಲವು ವರ್ಷಗಳೇ ಕಳೆದು ಹೋಗಿವೆ. ಸಿರಿಯಾದಲ್ಲಿ ಇರಾನ್ ತನ್ನ ಪ್ರಭಾವ ಹೆಚ್ಚಿಸಲು ಪ್ರಯತ್ನ ಮಾಡುತ್ತಿದೆ. ಶಸ್ತ್ರಾಸ್ತ್ರಗಳನ್ನು ಪೂರೈಸುವುದಲ್ಲದೆ, ಇರಾನ್ನ ಸೈನಿಕರನ್ನು ಅಲ್ಲಿ ನಿಯೋಜಿಸಲಾಗುತ್ತಿದೆ ಎಂದು ಇಸ್ರೇಲ್ ಹೇಳಿದ್ದು, ತನ್ನ ಗಡಿಯಲ್ಲಿ ಇರಾನ್ ಪ್ರಭಾವ ಬೀರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದೆ. ಹಾಗೇ, ನಿರಂತರವಾಗಿ ಸಿರಿಯಾ ಮೇಲೆ ರಾಕೆಟ್-ಕ್ಷಿಪಣಿ ದಾಳಿ ನಡೆಸುತ್ತಲೇ ಬರುತ್ತದೆ. ಇತ್ತೀಚೆಗೆ ಅಂದರೆ ಜನವರಿಯಲ್ಲಿ, 2022ರ ಫೆಬ್ರವರಿ, ಸೆಪ್ಟೆಂಬರ್ ತಿಂಗಳಲ್ಲೂ ಸಹ ಇಸ್ರೇಲ್ ದಾಳಿ ನಡೆಸಿತ್ತು. ಆದರೆ ಹೀಗೆ ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ದಾಳಿ ಅಪರೂಪ ಎನ್ನಲಾಗಿದೆ.