ಇಟಲಿ ಪ್ರಧಾನಮಂತ್ರಿ ಮಾರಿಯೊ ಡ್ರಾಘಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಇಟಲಿ ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾರಿಗೆ ಸಲ್ಲಿಸಿದ್ದಾರೆ. ಮಾರಿಯೊ ಡ್ರಾಘಿ ಕಳೆದವಾರವೇ ತಾವು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆಗ ಅಧ್ಯಕ್ಷರು ಒಪ್ಪಿರಲಿಲ್ಲ. ಆದರೆ ಈಗ ಸರ್ಕಾರದ ಪ್ರಮುಖ ಮೈತ್ರಿ ಪಕ್ಷಗಳೆಲ್ಲ ತಿರುಗಿಬಿದ್ದಿವೆ. ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಹಿಂಪಡೆಯುವ ಜತೆ, ವಿಶ್ವಾಸ ಮತ ಯಾಚನೆಯನ್ನೂ ಬಹಿಷ್ಕರಿಸಿವೆ. ಇದರಿಂದ ಸೂಕ್ತ ಸಂಖ್ಯಾಬಲ ಕಳೆದುಕೊಂಡ ಪ್ರಧಾನಿ ಡ್ರಾಘಿ ರಾಜೀನಾಮೆ ಕೊಟ್ಟಿದ್ದಾರೆ. ಹಾಗಿದ್ದಾಗ್ಯೂ, ಮುಂದಿನ ಪ್ರಧಾನಿ ಆಯ್ಕೆಯವರೆಗೆ ಅವರು ಹಂಗಾಮಿ ಪ್ರಧಾನಮಂತ್ರಿಯಾಗಿ ಮುಂದುವರಿಯಲಿದ್ದಾರೆ.
74ವರ್ಷದ ಮಾರಿಯೊ ಡ್ರಾಘಿ ಪ್ರಧಾನಿಯಾಗಿ 18ತಿಂಗಳು ಅಧಿಕಾರ ನಡೆಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಗೌರವ ಸಂಪಾದಿಸಿದ್ದಾರೆ. ಇದೀಗ ಇಟಲಿಯಲ್ಲಿ ಪ್ರಧಾನ ಸರ್ಕಾರವೇ ಅಸ್ಥಿರಗೊಂಡಿದ್ದು, ಮುಂಚಿತವಾಗಿಯೇ ಚುನಾವಣೆ ನಡೆಯಲಿರುವ ಸಾಧ್ಯತೆ ಇದೆ. ಇದು ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಅವರೇನಾದರೂ ಸಂಸತ್ತನ್ನು ವಿಸರ್ಜಿಸುವ ಆದೇಶ ಕೊಟ್ಟರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲೇ ಇಟಲಿಯಲ್ಲಿ ಚುನಾವಣೆ ನಡೆಯಬಹುದು ಎಂದು ಹೇಳಲಾಗಿದೆ.
ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಮುಖ್ಯಸ್ಥರಾಗಿದ್ದ ಡ್ರಾಘಿ 2021ರಲ್ಲಿ ಇಟಲಿಯ ಪ್ರಧಾನಮಂತ್ರಿಯಾದರು. ಇಟಲಿಯಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದ ಕಾಲ ಅದು. ಆರ್ಥಿಕತೆಯೂ ಕುಸಿದಿತ್ತು. ಆಗಲೇ ರಾಷ್ಟ್ರೀಯ ಒಕ್ಕೂಟದ ಮೈತ್ರಿಯಿಂದ ಚದುರಿದ್ದ ಪಕ್ಷಗಳನ್ನೆಲ್ಲ ಮತ್ತೆ ಒಗ್ಗೂಡಿಸಲು ಪ್ರಯತ್ನಿಸಿದ್ದರು. ಇಂಥ ಹೊತ್ತಲ್ಲಿ ಒಗ್ಗಟ್ಟು ಮುಖ್ಯ. ಎಲ್ಲರೂ ಒಟ್ಟಾಗಿ ಕೆಲಸ ಮುಂದುವರಿಸೋಣ ಎಂದು ಕರೆ ನೀಡಿದ್ದರು.
ಆಗಿದ್ದೇನು?
ಇಟಲಿಯಲ್ಲಿ 2020ರಿಂದ ಕೊರೊನಾ ಮಿತಿಮೀರಿತ್ತು. ಸಾಲುಸಾಲು ಸಾವುಗಳು, ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯದಿಂದ ಜನರು ಪರದಾಡಿದ್ದರು. ಕೊರೊನಾ ನಿರ್ವಹಣೆಯಲ್ಲಿ ಇಟಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಸರ್ಕಾರದ ಒಕ್ಕೂಟದಲ್ಲಿದ್ದ ಮಿತ್ರ ಪಕ್ಷಗಳು ಪ್ರತಿಭಟಿಸಿದವರು. ಇದೇ ಉದ್ವಿಗ್ನತೆ ಹೆಚ್ಚಾಗಿ ಅಲ್ಲಿನ ರಾಷ್ಟ್ರೀಯ ಏಕತೆ ಒಕ್ಕೂಟದ ಪಕ್ಷಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯಲು ಮುಂದಾದವು. ಅದೇ ವಿವಾದದಲ್ಲಿ ಅಂದಿನ ಪ್ರಧಾನಿ ಗೈಸೆಪೆ ಕಾಂಟೆ ರಾಜೀನಾಮೆ ಕೊಟ್ಟರು. ಇನ್ನೇನು ಈ ಸರ್ಕಾರ ಪತನವಾಗುತ್ತದೆ ಎಂಬ ಹೊತ್ತಲ್ಲಿ ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿ ಮಾರಿಯೊ ಡ್ರಾಘಿ ಪ್ರಧಾನಿಯಾಗಿದ್ದರು. ಆದರೆ ಅಸ್ಥಿರತೆ ಬೂದಿ ಮುಚ್ಚಿದ ಕೆಂಡದಂತೆ ಇದ್ದಿದ್ದು, ಈಗ ಮತ್ತೆ ಭುಗಿಲೆದ್ದಿದೆ.
ಇದನ್ನೂ ಓದಿ: ನಿಸರ್ಗದ ಸಂಗೀತವನ್ನೇ ಬಳಸಿಕೊಂಡು ಪ್ರಚಾರ ನಡೆಸುತ್ತಿರುವ ಇಟಲಿ ರೆಸಾರ್ಟ್