Site icon Vistara News

Japan earthquake: ಜಪಾನ್‌ ಭೂಕಂಪದಲ್ಲಿ ಸತ್ತವರ ಸಂಖ್ಯೆ 73ಕ್ಕೆ ಏರಿಕೆ, ಅವಶೇಷಗಳಡಿ ಹುಡುಕಾಟ

japan earthquake

ಟೋಕಿಯೋ: ಹೊಸ ವರ್ಷದ ದಿನ ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳಿಂದ (Japan earthquake:) ಸಾವನ್ನಪ್ಪಿದವರ ಸಂಖ್ಯೆ ಗುರುವಾರ 73ಕ್ಕೆ ಏರಿದೆ. ಕುಸಿದ ಕಟ್ಟಡಗಳ ಅಡಿಯಲ್ಲಿ ಬದುಕುಳಿದಿರಬಹುದಾದವರಿಗಾಗಿ ಹುಡುಕಾಟ ನಾಲ್ಕನೇ ದಿನವೂ ಮುಂದುವರೆದಿದೆ.

ರಿಕ್ಟರ್‌ 7.5ರ ತೀವ್ರತೆಯ ಪ್ರಬಲವಾದ ಭೂಕಂಪಗಳು ಇಶಿಕಾವಾದ ಕೇಂದ್ರ ಪ್ರಾಂತ್ಯ ನೋಟೋ ಪೆನಿನ್ಸುಲಾವನ್ನು ಘಾತಿಸಿದ್ದವು. ಕಟ್ಟಡಗಳು ಕುಸಿದಿದ್ದವು. ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಸುನಾಮಿ ಅಲೆಗಳು ಸಣ್ಣ ಪ್ರಮಾಣದಲ್ಲಿ ಬಂದು ಹೋಗಿತ್ತು.

ನೋಟೊ ಪರ್ಯಾಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 33,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಸ್ಥಳಾಂತರಿಸಿದ್ದಾರೆ. ಸುಮಾರು 1,00,000 ಮನೆಗಳಿಗೆ ನೀರು ಸರಬರಾಜು ಕತ್ತರಿಸಿಹೋಗಿದೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಕನಿಷ್ಠ 25 ಮಂದಿಯ ಸ್ಥಿತಿ ಗಂಭೀರವಾಗಿದೆ.

ಗುರುವಾರ, ಶೀತಲಗೊಂಡ ತಾಪಮಾನ ಮತ್ತು ಭಾರೀ ಮಳೆಯ ನಡುವೆ ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ಮುಕ್ತಗೊಳಿಸಲು ಸಾವಿರಾರು ತುರ್ತುರಕ್ಷಕರು ಹೋರಾಡುತ್ತಿದ್ದಾರೆ. ಇಶಿಕಾವಾದಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಮುನ್ಸೂಚನೆಗಳು ಎಚ್ಚರಿಕೆ ನೀಡಿದ್ದು, ಭೂಕುಸಿತಗಳು ಮತ್ತು ಅರ್ಧ ಕುಸಿದ ಮನೆಗಳಿಗೆ ಹೆಚ್ಚಿನ ಹಾನಿಯ ಕಳವಳಕ್ಕೆ ಕಾರಣವಾಗಿದೆ.

ಭೂಕಂಪನದ ಮೂರು ದಿನಗಳ ನಂತರವೂ ಸಂಪೂರ್ಣ ಪ್ರಮಾಣದ ಹಾನಿ ಮತ್ತು ಸಾವುನೋವುಗಳು ಎಷ್ಟು ಎಂಬುದು ಅಸ್ಪಷ್ಟವಾಗಿಯೇ ಉಳಿದಿದೆ. ಇದು ಜಪಾನ್‌ನಲ್ಲಿ 2016ರಿಂದೀಚೆಗಿನ ಮಾರಣಾಂತಿಕ ಕಂಪನವಾಗಿದೆ. ಕತ್ತರಿಸಿಹೋದ ರಸ್ತೆಗಳು ಮತ್ತು ಅತ್ಯಂತ ದುರ್ಗಮವಾದ ಪ್ರದೇಶಗಳಿಂದಾಗಿ ಪರಿಹಾರ ಕಾರ್ಯಾಚರಣೆ ಕಷ್ಟವಾಗಿದೆ.

ಕುಸಿದ ಕಟ್ಟಡಗಳ ಅಡಿಯಲ್ಲಿ ಇನ್ನೂ ಅನೇಕ ಜನರು ರಕ್ಷಣೆಗಾಗಿ ಕಾಯುತ್ತಿದ್ದಾರೆ. 40 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ಇದು ಸಮಯದ ವಿರುದ್ಧದ ಓಟ. ಸಹಾಯವನ್ನು ತಲುಪಿಸಲು ಸರ್ಕಾರವು ಸಮುದ್ರ ಮಾರ್ಗವನ್ನು ತೆರೆದಿದೆ. ಕೆಲವು ದೊಡ್ಡ ಟ್ರಕ್‌ಗಳು ದೂರದ ಪ್ರದೇಶಗಳನ್ನು ತಲುಪಿವೆ ಎಂದು ಜಪಾನ್‌ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಹೇಳಿದರು.

ಜಪಾನ್ ಪ್ರತಿ ವರ್ಷ ನೂರಾರು ಭೂಕಂಪಗಳನ್ನು ಅನುಭವಿಸುತ್ತದೆ. ಬಹುಪಾಲು ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. 2011ರಲ್ಲಿ ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ 9.0 ತೀವ್ರತೆಯ ಸಮುದ್ರದೊಳಗಿನ ಭೂಕಂಪದಿಂದ ದ್ವೀಪ ರಾಷ್ಟ್ರ ತತ್ತರಿಸಿತ್ತು. ಇದರಿಂದ ಉಂಟಾದ ಸುನಾಮಿಯಿಂದ ಸುಮಾರು 18,500 ಜನ ಸತ್ತಿದ್ದರು.

ಇದನ್ನೂ ಓದಿ: Japan Earthquake: ಭೂಕಂಪ ಪೀಡಿತ ಜಪಾನ್‌ನಿಂದ ಸುರಕ್ಷಿತವಾಗಿ ಮರಳಿದ ಜೂ. ಎನ್‌ಟಿಆರ್‌

Exit mobile version