Site icon Vistara News

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

kimberly cheatle

Kimberly Cheatle: Secret Service director Kimberly Cheatle resigns under fire over Trump shooting

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election) ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump Assassination Bid) ಮೇಲಿನ ಗುಂಡಿನ ದಾಳಿ(Shootout) ಯತ್ನವನ್ನು ತಡೆಯುವ ಕಾರ್ಯಾಚರಣೆಯಲ್ಲಿ ತನ್ನ ಸಂಸ್ಥೆ ವಿಫಲವಾದ ಕಾರಣದಿಂದ ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್(US Secret Service Director ) ಕಿಂಬರ್ಲಿ ಚೀಟಲ್ (Kimberly Cheatle) ಅವರು ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಚಾರ ಸಭೆಯಲ್ಲಿ 20 ವರ್ಷದ ಬಂದೂಕುಧಾರಿ ಮಾಜಿ ರಿಪಬ್ಲಿಕನ್ ಅಧ್ಯಕ್ಷ ಮತ್ತು ಪ್ರಸ್ತುತ ಶ್ವೇತಭವನದ ಅಭ್ಯರ್ಥಿಯನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಚೀಟಲ್ ರಾಜೀನಾಮೆ ನೀಡಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಇದೀಗ ಚೀಟಲ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

“ಭದ್ರತಾ ಲೋಪದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಜತೆಗೆ ನನ್ನ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ” ಎಂದು ಮೇಲ್‌ನಲ್ಲಿ ಬರೆಯುವ ಮೂಲಕ ಚೀಟಲ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಜುಲೈ 13 ಶನಿವಾರದಂದು ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಸಂಜೆ ನಡೆದ ರ್ಯಾಲಿಯಲ್ಲಿ ಟ್ರಂಪ್‌ ಮಾತನಾಡುತ್ತಿದ್ದ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಬಲ ಕಿವಿಗೆ ಗುಂಡು ತಗುಲಿತ್ತು. ದಾಳಿಯಿಂದ ಟ್ರಂಪ್‌ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಕೂಡ ಟ್ರಂಪ್ ಮೇಲಿನ ದಾಳಿಯನ್ನು ಖಂಡಿಸಿದ್ದರು. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ‘ನನ್ನ ಸ್ನೇಹಿತ ಡೊನಾಲ್ಡ್‌ ಟ್ರಂಪ್‌ ಮೇಲೆ ನಡೆದಿರುವ ದಾಳಿ ನಿಜಕ್ಕೂ ಆಘಾತಕಾರಿ ವಿಚಾರ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶ ಇಲ್ಲ. ಅವರು ಶೀಘ್ರವೇ ಚೇತರಿಸಿಕೊಳ್ಳಲಿ. ಇನ್ನು ಘಟನೆಯಲ್ಲಿ ಗಾಯಗೊಂಡವರು ಕೂಡ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

ಎದುರಾಳಿಗಳಿಗೆ ಎಚ್ಚರಿಕೆ


ನವೆಂಬರ್‌ನಲ್ಲಿ ನಡೆಯುವ ಚುನಾವಣೆಯ ನಂತರ ತಾವು ಶ್ವೇತಭವನಕ್ಕೆ ಮರಳುವ ಮೊದಲು ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು 78 ವರ್ಷದ ಟ್ರಂಪ್ ವಿರೋಧಿಗಳಿಗೆ ಕಠಿಣ ಎಚ್ಚರಿಕೆಯನ್ನೂ ನೀಡಿದ್ದಾರೆ.

ತಮ್ಮ ಸುದೀರ್ಘ ಭಾಷಣದಲ್ಲಿ ಟ್ರಂಪ್ ಹಣದುಬ್ಬರ, ಅಕ್ರಮ ವಲಸೆ ಮತ್ತು ಹಲವು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಿಗೆ ಜೋ ಬೈಡನ್ ಆಡಳಿತವನ್ನು ದೂಷಿಸಿದರು. “ನಾವು ನಮ್ಮ ಸೈನ್ಯವನ್ನು ಇನ್ನಷ್ಟು ಬಲಪಡಿಸುತ್ತೇವೆ ಮತ್ತು ಯಾವುದೇ ಶತ್ರು ನಮ್ಮ ತಾಯ್ನಾಡಿನ ಮೇಲೆ ದಾಳಿ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ” ಎಂದು ಘೋಷಿಸಿದರು. ಅದಾಗ್ಯೂ ಟ್ರಂಪ್ ಪ್ರಸ್ತಾಪಿಸಿದ ಐರನ್ ಡೋಮ್ ವ್ಯವಸ್ಥೆಯ ಉದ್ದೇಶವು ಅಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಇದನ್ನು ಅಲ್ಪ-ಶ್ರೇಣಿಯ ರಾಕೆಟ್‌ಗಳನ್ನು ತಡೆಹಿಡಿಯಲು ವಿನ್ಯಾಸಗೊಳಿಸಲಾಗುತ್ತದೆ. ಆದರೆ ಅಮೆರಿಕ ಗಡಿಗಳಲ್ಲಿ ಅಂತಹ ಯಾವುದೇ ಬೆದರಿಕೆಗಳಿಲ್ಲ ಎಂದಿದ್ದಾರೆ.

Exit mobile version