ಲಂಡನ್: ಬ್ರಿಟನ್‌ನ ಪ್ರಿನ್ಸ್ ಚಾರ್ಲ್ಸ್- 3 ಅವರ ರಾಜ ಕಿರೀಟಧಾರಣೆ (King Charles coronation) ಸಮಾರಂಭದ ಸಂದರ್ಭ ಬೆದರಿದ ಮೆರವಣಿಗೆಯಲ್ಲಿ ಸವಾರನನ್ನು ಹೊತ್ತ ಕುದುರೆಯೊಂದು ಯದ್ವಾತದ್ವಾ ವರ್ತಿಸಿ ಜನರ ಮೇಲೆ ನುಗ್ಗಿದ ಘಟನೆ ನಡೆದಿದೆ.
ಪ್ರಿನ್ಸ್ ಚಾರ್ಲ್ಸ್ ಅವರ ಪಟ್ಟಾಭಿಷೇಕ ಕಾರ್ಯಕ್ರಮದ ವೇಳೆ ನಡೆದ ಪರೇಡ್‌ನಲ್ಲಿ ಈ ಘಟನೆ ನಡೆದಿದೆ. ವೆಸ್ಟ್‌ಮಿನಿಸ್ಟರ್ ಅಬೇ ಅರಮನೆಯಿಂದ ಬಕಿಂಗ್‌ಹ್ಯಾಂ ಪ್ಯಾಲೇಸ್‌ಗೆ ಪ್ರಿನ್ಸ್ ತೆರಳುತ್ತಿದ್ದಾಗ ಕುದುರೆ ಬೆದರಿ ಸಾಲು ತಪ್ಪಿಸಿ ಓಡಿತು. ರಸ್ತೆ ಪಕ್ಕದಲ್ಲಿ ನಿಂತಿದ್ದ ಜನರ ಮೇಲೆ ನುಗ್ಗಿತಾದರೂ, ಯಾರಿಗೂ ಗಾಯವಾಗಲಿಲ್ಲ.
ಪ್ರಿನ್ಸ್ ಚಾರ್ಲ್ಸ್- 3 ಅವರು ಶನಿವಾರ ಯುನೈಟೆಡ್ ಕಿಂಗ್‌ಡಂನ ರಾಜನಾಗಿ ಪಟ್ಟಾಭಿಷಿಕ್ತಗೊಂಡರು. 1953ರ ಬಳಿಕ ಇಲ್ಲಿ ನಡೆಯುತ್ತಿರುವ ಪಟ್ಟಾಭಿಷೇಕ ಕಾರ್ಯಕ್ರಮ ಇದಾಗಿದೆ. ಕ್ಯಾಂಟರ್‌ಬರಿಯ ಆರ್ಚ್ ಬಿಷಪ್ ಅವರು ಪ್ರಿನ್ಸ್ ಧರಿಸಿ ಸೇಂಟ್ ಎಡ್ವರ್ಡ್ಸ್ ಅವರ ಕಿರೀಟದ ಮೇಲೆ ಗಟ್ಟಿ ಚಿನ್ನವನ್ನು ಇರಿಸುವ ಮೂಲಕ ಕಿರೀಟಧಾರಣೆ ನೆರವೇರಿಸಿದರು. ಇದು ರಾಜಮನೆತನದ ಘನತೆಯ ದ್ಯೋತಕವಾಗಿದೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾರ್ಲ್ಸ್ ಪಟ್ಟಾಭಿಷೇಕಕ್ಕೆ ಶುಭ ಹಾರೈಸಿದ್ದಾರೆ. ʼʼಕಿಂಗ್ ಚಾರ್ಲ್ಸ್ ಹಾಗೂ ಕ್ವೀನ್ ಕ್ಯಾಮಿಲಿಯಾ ಅವರಿಗೆ ಹೃದಯಪೂರ್ವಕ ಶುಭಹಾರೈಕೆಗಳು. ಭಾರತ ಹಾಗೂ ಬ್ರಿಟನ್‌ನ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ಗಾಢವಾಗಲಿದೆ ಎಂಬುದು ನನ್ನ ನಂಬಿಕೆʼʼ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತದಿಂದ ಅಧಿಕೃತವಾಗಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪಟ್ಟಾಭಿಷೇಕದಲ್ಲಿ ಭಾಗವಹಿಸುತ್ತಿದ್ದಾರೆ.