ಬ್ರಿಟನ್ನ ರಾಜ ಕಿಂಗ್ ಚಾರ್ಲ್ಸ್ 111 ಮತ್ತು ರಾಣಿ ಕ್ಯಾಮಿಲ್ಲಾ ಅವರ ಪಟ್ಟಾಭಿಷೇಕ (King Charles Coronation)ಇಂದು ಭರ್ಜರಿಯಾಗಿ ನಡೆಯಿತು. ಕಿಂಗ್ ಚಾರ್ಲ್ಸ್ 111 ಬ್ರಿಟನ್ನ ರಾಜನಾಗಿ, ಕ್ಯಾಮಿಲ್ಲಾ ಅವರು ರಾಣಿಯಾಗಿ ಅಧಿಕೃತವಾಗಿ ಇಂದು ಘೋಷಿಸಲ್ಪಟ್ಟರು. ಈ ಅದ್ಧೂರಿ ಕಾರ್ಯಕ್ರಮ ಲಂಡನ್ನ ವೆಸ್ಟ್ಮಿನಿಸ್ಟರ್ ಅಬ್ಬೆ ಅರಮನೆಯಲ್ಲಿ ಜರುಗುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ಅಲ್ಲಿನ ಜನರಷ್ಟೇ ಅಲ್ಲದೆ, ಭಾರತ ಸೇರಿ ವಿವಿಧ ದೇಶಗಳ ಪ್ರಮುಖರೂ ಸಾಕ್ಷಿಯಾದರು. ಬ್ರಿಟನ್ನ ನೂತನ ರಾಜನಾದ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾರಿಗೆ ಕಿರೀಟ ಧಾರಣೆ ಮಾಡಲಾಯಿತು. ಚಾರ್ಲ್ಸ್ ಅವರು ಬ್ರಿಟನ್ನ 40ನೇ ರಾಜ ಎನ್ನಿಸಿಕೊಂಡಿದ್ದಾರೆ. ಇನ್ನು ತಮ್ಮ ತಂದೆಗೆ ಕಿರೀಟ ಧಾರಣೆಯಾಗಿ, ಅವರು ಬ್ರಿಟನ್ನ ರಾಜನೆಂದು ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ಪುತ್ರ ಪ್ರಿನ್ಸ್ ವಿಲಿಯಮ್ ಅವರು ಕಿಂಗ್ ಚಾರ್ಲ್ಸ್ 111ರಿಗೆ ಪ್ರೀತಿಯಿಂದ ಚುಂಬಿಸಿದರು.
ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 1ಗಂಟೆಯಿಂದ ಬ್ರಿಟನ್ನಲ್ಲಿ ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕ ಕಾರ್ಯಕ್ರಮಗಳು ಪ್ರಾರಂಭಗೊಂಡವರು. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಅರಮನೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸತೊಡಗಿದರು. ಭಾರತದಿಂದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ನಟಿ ಸೋನಮ್ ಕಪೂರ್, ಲೇಖಕಿ ಮಂಜು ಲಾಲ್ಹಿ ಸೇರಿ ಒಟ್ಟು 11 ಅತಿಥಿಗಳು, ಯುಎಸ್ ಅಧ್ಯಕ್ಷ ಜೋ ಬೈಡೆನ್ ಪತ್ನಿ ಜಿಲ್ ಬೈಡೆನ್, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪತ್ನಿ ಒಲೆನಾ ಝೆಲೆನ್ಸ್ಕಾ, ಬಹಾಮಾಸ್ ಪ್ರಧಾನಮಂತ್ರಿ ಫಿಲಿಪ್ ಡೇವಿಸ್ ದಂಪತಿ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಪತ್ನಿ ಸೋಫಿ ಟ್ರುಡೊ ಮತ್ತಿತರರು ಸರಿಯಾದ ಸಮಯಕ್ಕೆ ಲಂಡನ್ ಅರಮನೆ ತಲುಪಿ, ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹಾಗೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಮುಂಚೂಣಿಯಲ್ಲಿ ಇದ್ದರು.
ಕಿಂಗ್ ಚಾರ್ಲ್ಸ್ 111 ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಅವರು ಬಕಿಂಗ್ಹ್ಯಾಮ್ ಅರಮನೆಯಿಂದ ಹೊರಟು ವೆಸ್ಟ್ಮಿನಿಸ್ಟರ್ ಅಬ್ಬೆ ಅರಮನೆಗೆ ತಲುಪುತ್ತಿದ್ದಂತೆ ಮೊದಲು ಸಾಂಪ್ರದಾಯಿಕವಾಗಿ ಜನರಿಗೆ ರಾಜನ ಮತ್ತು ರಾಜಮನೆತನದ ಪರಿಚಯ ಮಾಡಿಕೊಡಲಾಯಿತು. ಪಟ್ಟಾಭಿಷೇಕದ ಸಂಗೀತ ನುಡಿಸಲಾಯಿತು. ಅಂದಹಾಗೆ ಇಲ್ಲಿ, ರಾಜ ಮೊದಲೇ ಆಯ್ಕೆ ಮಾಡಿದ 12 ರಾಗ/ಹಾಡುಗಳನ್ನೇ ನುಡಿಸಲಾಗುತ್ತದೆ. ಕಿಂಗ್ ಚಾರ್ಲ್ಸ್ 111 ಬ್ರಿಟನ್ನ ರಾಜನಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ, ಪ್ರಧಾನಿ ರಿಷಿ ಸುನಕ್ ಅವರು ಭಾಷಣ ಮಾಡಿದರು. ನಂತರ ಕಿಂಗ್ಚಾರ್ಲ್ಸ್ ಅವರನ್ನು ಸಿಂಹಾಸನದಲ್ಲಿ ಕೂರಿಸಿ, ಅವರ ಕೈಯಿಗೆ ರತ್ನಖಚಿತವಾದ ಖಡ್ಗವನ್ನು ನೀಡಲಾಯಿತು. ಅಷ್ಟೇ ಅಲ್ಲ, ಉಂಗುರ, ಬ್ರೇಸ್ಲೆಟ್ಗಳನ್ನೂ ರಾಜನಿಗೆ ತೊಡಿಸಲಾಯಿತು.
ಕಿರೀಟ ಧಾರಣೆ
ಇಷ್ಟೆಲ್ಲ ಆದ ಮೇಲೆ ಬಹುಮುಖ್ಯ ಘಟ್ಟವಾದ ಕಿರೀಟ ಧಾರಣೆ ನಡೆಯಿತು. ಮೊದಲು ರಾಜ ಕಿಂಗ್ ಚಾರ್ಲ್ಸ್ 111ರಿಗೆ ಕಿರೀಟ ತೊಡಿಸಿದ ನಂತರ ರಾಣಿ ಕ್ಯಾಮಿಲ್ಲಾರಿಗೂ ಕಿರೀಟ ಹಾಕಲಾಯಿತು. ಈ ಕಿರೀಟಗಳು ಚಿನ್ನದಿಂದಲೇ ನಿರ್ಮಾಣವಾಗಿದ್ದು, ಇದಕ್ಕೆ ಸೇಂಟ್ ಎಡ್ವರ್ಡ್ ಕಿರೀಟ ಎನ್ನಲಾಗುತ್ತದೆ. ಆ ಬಳಿಕ ಅಧ್ಯಾತ್ಮಿಕವಾಗಿ ನಡೆಸಬೇಕಾದ ಕೆಲವು ಕಾರ್ಯಕ್ರಮಗಳನ್ನು ರಾಜ-ರಾಣಿ ಇಬ್ಬರೂ ಸೇರಿ ಮಾಡಿದರು. ನಂತರ ಪಟ್ಟಾಭಿಷೇಕ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
70 ವರ್ಷಗಳ ಸುದೀರ್ಘ ಅವಧಿಗೆ ರಾಣಿಯಾಗಿದ್ದ ಕ್ವೀನ್ ಎಲಿಜಬೆತ್ II ನಿಧನದ ಬೆನ್ನಲ್ಲೇ ಅವರ ಉತ್ತರಾಧಿಕಾರಿಯಾಗಿ ಕಿಂಗ್ ಚಾರ್ಲ್ಸ್ III (73) ಅವರನ್ನು ಆಯ್ಕೆ ಮಾಡಲಾಗಿತ್ತು. ಪ್ರಿನ್ಸ್ ಚಾರ್ಲ್ಸ್ ಅವರು ರಾಣಿ ಎಲಿಜಬೆತ್ ಅವರ ಹಿರಿಯ ಮಗನಾಗಿದ್ದರಿಂದ ಅವರನ್ನೇ ಉತ್ತರಾಧಿಕಾರಿಯನ್ನಾಗಿ ಮಾಡಲಾಯಿತು. ಆ ಮೂಲಕ ಚಾರ್ಲ್ಸ್ ಅವರು ಈ ಹುದ್ದೆಗೇರಿದ ಹಿರಿಯ ರಾಜ ಎನಿಸಿದ್ದಾರೆ.