ಕ್ಯಾಲಿಫೋರ್ನಿಯಾ: ಯುನೈಟೆಡ್ ಏರ್ಲೈನ್ಸ್ನ ವಿಮಾನ (United Airlines flight)ದಲ್ಲಿ ಪ್ರಯಾಣಿಕರೊಬ್ಬರ ಲ್ಯಾಪ್ಟಾಪ್ನ ಬ್ಯಾಟರಿ ಪ್ಯಾಕ್ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಬೆಂಕಿಯಿಂದಾಗಿ ವಿಮಾನದೊಳಗೆ ದಟ್ಟವಾದ ಹೊಗೆ ಆವರಿಸಿ, ನಾಲ್ವರ ಉಸಿರಾಟಕ್ಕೆ ತೀವ್ರ ತೊಂದರೆಯಾಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೊಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವಿಮಾನ ಟೇಕ್ ಆಫ್ ಆಗಿತ್ತು. ಆದರೆ ಕೆಲವೇ ಹೊತ್ತಲ್ಲಿ ವಿಮಾನದ ಮೊದಲ ದರ್ಜೆ ಸೀಟ್ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ನಿಂದ ಹೊಗೆ ಬರಲು ಪ್ರಾರಂಭವಾಯಿತು. ಅದನ್ನವರು ಕೆಳಕ್ಕೆ ಎಸೆದರು. ಏನು ಹೊಗೆ ಎಂದು ಪರಿಶೀಲಿಸಿದರೆ, ಅದು ಬ್ಯಾಗ್ನೊಳಗೆ ಇದ್ದ ಲ್ಯಾಪ್ಟಾಪ್ ಚಾರ್ಜರ್ ಪ್ಯಾಕ್ನಿಂದ ಬರುತ್ತಿತ್ತು. ಕೂಡಲೇ ವಿಮಾನದ ಪರಿಚಾರಕರು ಬೆಂಕಿ ನಂದಿಸಲು ಓಡಿ ಬಂದರು. ಆದರೆ ಆ ಹೊಗೆಯಿಂದ ನಾಲ್ವರ ಉಸಿರಾಟಕ್ಕೆ ತೀವ್ರ ತೊಂದರೆಯಾಯಿತು ಎಂದು ಪ್ರಯಾಣಿಕ ಕ್ಯಾರೊಲಿನ್ ಲಿಪಿನ್ಸ್ಕಿ ಎಂಬುವರು ತಿಳಿಸಿದ್ದಾರೆ.
ಇದನ್ನೂ ಓದಿ: Turkey Earthquake: ಭೂಕಂಪದಲ್ಲಿ ಮೃತರ ಸಂಖ್ಯೆ 11 ಸಾವಿರಕ್ಕೇರಿಕೆ, ಪರಿಹಾರಕ್ಕೆ ಭಾರತದಿಂದ 5 ವಿಮಾನ ರವಾನೆ
ಬ್ಯಾಗ್ನಲ್ಲಿದ್ದ ಲ್ಯಾಪ್ಟಾಪ್ ಬ್ಯಾಟರಿ ಪ್ಯಾಕ್ಗೆ ಬೆಂಕಿ ಕಾಣಿಸಿಕೊಂಡು, ಇಡೀ ವಿಮಾನದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿ, ಆತಂಕ ಉಂಟಾದ ಬೆನ್ನಲ್ಲೇ ವಿಮಾನವನ್ನು ವಾಪಸ್ ಸ್ಯಾನ್ ಡಿಯೊಗೋ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಲ್ಯಾಂಡ್ ಮಾಡಿಸಲಾಗಿದೆ. ದೊಡ್ಡಮಟ್ಟದ ಅನಾಹುತವನ್ನು ತಪ್ಪಿಸಲಾಗಿದೆ.