ನ್ಯೂಯಾರ್ಕ್: ಹೊಟೇಲ್ ಲಾಬಿಯಲ್ಲಿ (Hotel Lobby) ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಸೇಲ್ಸ್‌ಮ್ಯಾನ್ ಹುದ್ದೆಯಿಂದ ವಜಾಗೊಳಿಸಿದ ಚೀನಾದ (china) ಕಂಪ್ಯೂಟರ್ ದೈತ್ಯ, ಅಮೆರಿಕನ್ (America) ಅಂಗಸಂಸ್ಥೆಯಾದ ಲೆನೊವೊ ಕಂಪನಿ (Lenovo Company) ವಿರುದ್ಧ 1.5 ಮಿಲಿಯನ್ ಡಾಲರ್ ಪರಿಹಾರಕ್ಕೆ ಒತ್ತಾಯಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ಲೆನೊವೊ ಕಂಪ್ಯೂಟರ್ ಮಾರಾಟಗಾರರೊಬ್ಬರು ಟೈಮ್ಸ್ ಸ್ಕ್ವೇರ್ ಹೊಟೇಲ್ ಲಾಬಿಯಲ್ಲಿ ಮೂತ್ರ ಮಾಡಿದ್ದಾನೆ ಎಂಬ ದೂರಿನ ಮೇರೆಗೆ ಕಂಪೆನಿ ಆತನನ್ನು ಕೆಲಸದಿಂದ ವಜಾಗೊಳಿಸಿದೆ. ನ್ಯೂಯಾರ್ಕ್ ಸ್ಟೇಟ್ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಸಲ್ಲಿಸಿದ ಮೊಕದ್ದಮೆಯ ಪ್ರಕಾರ 66 ವರ್ಷದ ರಿಚರ್ಡ್ ಬೆಕರ್ ಎಂಬವರು ಕನಿಷ್ಠ 1.5 ಮಿಲಿಯನ್ ಡಾಲರ್ ಪರಿಹಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಕಂಪನಿಯು ನ್ಯೂಯಾರ್ಕ್ ನಗರದ ಮಾನವ ಹಕ್ಕುಗಳ ಕಾನೂನುಗಳನ್ನು ಉಲ್ಲಂಘಿಸಿ ಅಂಗವೈಕಲ್ಯದ ಆಧಾರದ ಮೇಲೆ ತಾರತಮ್ಯವನ್ನು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಮೊಕದ್ದಮೆಯ ಪ್ರಕಾರ, ಬೆಕರ್ ಫೆಬ್ರವರಿಯಲ್ಲಿ ಕೆಲಸದ ನಡುವೆ ಭೋಜನದ ಬಳಿಕ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನ ಬಳಿಯ ತನ್ನ ಹೊಟೇಲ್ ಗೆ ಹಿಂದಿರುಗುತ್ತಿದ್ದಾಗ ಅವರು ಅನಿವಾರ್ಯ ಕಾರಣದಿಂದ ಮುಖ್ಯ ಲಾಬಿಯಿಂದ ಪ್ರತ್ಯೇಕ ಮಹಡಿಯಲ್ಲಿರುವ ವೆಸ್ಟಿಬುಲ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ.
ಸಹೋದ್ಯೋಗಿಯೊಬ್ಬರು ಬೆಕರ್ ಮೂತ್ರ ವಿಸರ್ಜಿಸುತ್ತಿರುವುದನ್ನು ಗಮನಿಸಿ ಸ್ಪಷ್ಟವಾದ ದ್ವೇಷ ಮತ್ತು ದುರುದ್ದೇಶದ ಕಾರಣದಿಂದ ಅವರ ವಿರುದ್ಧ ಕಂಪನಿಗೆ ದೂರು ನೀಡಿದ್ದಾರೆ. ಅವರ ನಡವಳಿಕೆಯು ಯಾರಿಗೂ ಯಾವುದೇ ಹಾನಿಯನ್ನುಂಟು ಮಾಡದಿದ್ದರೂ ಸಹ ತಕ್ಷಣವೇ ಹೆಚ್ ಆರ್‌ಗೆ ದೂರು ನೀಡಿ ಕೆಲಸದಿಂದ ವಜಾಗೊಳ್ಳಲು ಕಾರಣವಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: IBM: ಐಬಿಎಂನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ; ಚೀನಾದ ಕಚೇರಿ ಬೆಂಗಳೂರಿಗೆ ಸ್ಥಳಾಂತರ
ಬೆಕರ್ ಅವರು 2016ರಿಂದ ದೀರ್ಘಕಾಲದ ಮೂತ್ರಕೋಶದ ತೊಂದರೆಯನ್ನು ಎದುರಿಸುತ್ತಿದ್ದಾರೆ. ಮೂತ್ರಶಾಸ್ತ್ರಜ್ಞರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೆನೊವೊ ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರು ಅವರ ಸ್ಥಿತಿಯ ಬಗ್ಗೆ ತಿಳಿದಿದ್ದರು ಎಂದು ನ್ಯಾಯಾಲಯದಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಯಾವುದೇ ಸಹಾನುಭೂತಿ, ಕಾನೂನಿನ ಅನುಸರಣೆಯನ್ನು ಮಾಡದೆ ಘಟನೆಯ ಕೆಲವು ದಿನಗಳ ಬಳಿಕ ಕೆಲಸದಿಂದ ವಜಾಗೊಳಿಸಲಾಯಿತು. ಬಳಿಕ ತಾನು ನಿರುದ್ಯೋಗಿಯಾಗಿರುವುದಾಗಿ ಆತ ತಿಳಿಸಿದ್ದಾನೆ. ಈ ಬಗ್ಗೆ ಕಂಪೆನಿ ಮಾತ್ರ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.