ನವ ದೆಹಲಿ: ಕೆನಡಾದಲ್ಲಿ ಖಲಿಸ್ತಾನಿ ಹೋರಾಟಗಾರರ ದುಷ್ಕೃತ್ಯ ಮುಂದುವರಿದಿದೆ. ಅಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದು (pro-Khalistan graffiti), ಅದರ ಮೇಲೆ ಭಾರತ ವಿರೋಧಿ ಗೀಚುಬರಹಗಳನ್ನು ಬರೆಯಲಾಗಿದೆ. ಒಂಟಾರಿಯೋ ಪ್ರಾಂತ್ಯದ ಹ್ಯಾಮಿಲ್ಟನ್ ನಗರದ ಸಿಟಿ ಹಾಲ್ ಸಮೀಪ ಇರುವ ಗಾಂಧಿ ಪ್ರತಿಮೆ ಈಗ ಖಲಿಸ್ತಾನಿಗಳ ಕೈಯಿಗೆ ಸಿಕ್ಕು ನಲುಗಿದೆ.
2012ರಿಂದಲೂ ಇಲ್ಲಿದ್ದ ಈ ಗಾಂಧಿ ಪ್ರತಿಮೆಯನ್ನು ಭಾರತ ಸರ್ಕಾರವೇ ಯುಕೆ ಸರ್ಕಾರಕ್ಕೆ ಗಿಫ್ಟ್ ನೀಡಿತ್ತು. ಆರು ಅಡಿ ಉದ್ದದ ಕಂಚಿನ ಪ್ರತಿಮೆಯೀಗ ವಿರೂಪಗೊಂಡಿದೆ. ಅದರ ಮೇಲೆ ಭಾರತ ವಿರೋಧಿ ಬರಹಗಳು, ಗಾಂಧಿ ವಿರೋಧಿ ಹೇಳಿಕೆಗಳನ್ನು ಗೀಚಲಾಗಿದೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿಯನ್ನು ಅವಹೇಳನ ಮಾಡಿ ಕೂಡ ಬರಹಗಳನ್ನು ಗೀಚಲಾಗಿದೆ. ಗಾಂಧಿ ಪ್ರತಿಮೆ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್ಗೆ ಖಲಿಸ್ತಾನಿ ಬಾವುಟವನ್ನೂ ಸಿಲುಕಿಸಿ ಇಡಲಾಗಿದೆ.
ಇಂದು ಬೆಳಗ್ಗೆ ಗಾಂಧಿ ಪ್ರತಿಮೆ ವಿರೂಪಗೊಂಡಿದ್ದು ಕಂಡ ಕೆಲವೇ ಹೊತ್ತಲ್ಲಿ, ನಗರಾಡಳಿತದ ಸಿಬ್ಬಂದಿ ಅಲ್ಲಿಗೆ ಬಂದು ಗೀಚು ಬರಹಗಳನ್ನೆಲ್ಲ ಅಳಿಸಿದ್ದಾರೆ. ಆ ಪ್ರತಿಮೆಯನ್ನು ಯಥಾಸ್ಥಿತಿಗೆ ತಂದಿದ್ದಾರೆ. ಹ್ಯಾಮಿಲ್ಟನ್ ಪೊಲೀಸರಿಗೆ ಈ ಬಗ್ಗೆ ದೂರು ಕೂಡ ನೀಡಲಾಗಿದೆ. ಪೊಲೀಸ್ ಸಿಬ್ಬಂದಿ ತನಿಖೆ ಪ್ರಾರಂಭ ಮಾಡಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನಿಗಳ ದುಷ್ಕೃತ್ಯ ಹೊಸದಲ್ಲ. ಅಲ್ಲಿನ ಹಲವು ಹಿಂದೂ ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳು ಪದೇಪದೆ ದಾಳಿ ಮಾಡುತ್ತಾರೆ. ದೇಗುಲದ ಗೋಡೆಯ ಮೇಲೆಲ್ಲ ದೇಶವಿರೋಧಿ ಬರಹಗಳನ್ನು ಗೀಚುತ್ತಾರೆ. ಇತ್ತೀಚೆಗೆ, ಅಂದರೆ ಫೆಬ್ರವರಿಯಲ್ಲಿ ಗ್ರೇಟರ್ ಟೊರಂಟೋ ಏರಿಯಾದಲ್ಲಿರುವ ಶ್ರೀ ರಾಮಮಂದಿರವನ್ನು ಖಲಿಸ್ತಾನಿಗಳು ಧ್ವಂಸ ಮಾಡಿದ್ದರು. ಕಳೆದ ಎಂಟು ತಿಂಗಳಲ್ಲಿ ಇದು ನಾಲ್ಕನೇ ಪ್ರಕರಣವಾಗಿತ್ತು.