ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದಲ್ಲಿ ಸಾಧನೆ ಮಾಡಬೇಕು ಎಂದೇ ಬಯಸುತ್ತಾರೆ. ಅದರಲ್ಲೂ ಕೆಲವರಿಗೆ ತಾವೇನಾದರೂ ಮಾಡಿ, ಗಿನ್ನೀಸ್ ವಿಶ್ವದಾಖಲೆ (Guinness World Record) ನಿರ್ಮಿಸಬೇಕು ಎಂಬ ಆಸೆ ಇರುತ್ತದೆ. ಯಾರೂ ಮಾಡದ ಸಾಹಸವನ್ನು ಮಾಡಿ, ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಬೇಕು ಎಂಬ ಕನಸು-ಪ್ರಯತ್ನ ಮಾಡುತ್ತಾರೆ. ಇದೀಗ ನೈಜೀರಿಯಾದ ವ್ಯಕ್ತಿಯೊಬ್ಬ ಅಂಥದ್ದೇ ಒಂದು ಸಾಹಸಕ್ಕೆ ಕೈ ಹಾಕಿ ಸಂಕಷ್ಟಕ್ಕೀಡಾಗಿದ್ದಾನೆ. ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ (Man Goes Blind Temporarily).
ತೆಂಬು ಎಬೆರೆ ಎಂಬುವರಿಗೆ ತಾನು ಹೇಗಾದರೂ ಸರಿ ಗಿನ್ನೀಸ್ ವಿಶ್ವ ದಾಖಲೆ ಪುಸ್ತಕ ಸೇರಬೇಕು ಎಂಬ ಆಸೆ ಉಂಟಾಯಿತು. ಅದಕ್ಕಾಗಿ ಅವರು ಏಳು ದಿನಗಳ ಕಾಲ ನಿರಂತರವಾಗಿ ಅತ್ತಿದ್ದಾರೆ. ಅಳುವನ್ನು ಬರಿಸಿಕೊಂಡು, ಏನೇನೋ ಪ್ರಯತ್ನಪಟ್ಟು ಅತ್ತಿದ್ದಾರೆ. ಒಂದೇ ಸಮನೆ ಕಣ್ಣಲ್ಲಿ ನೀರು ಸುರಿಸಿದ್ದಾರೆ. ಇದಾದ ಬಳಿಕ ಅವರಿಗೆ ವಿಪರೀತ ತಲೆ ನೋವು ಶುರುವಾಗಿದೆ. ಕಣ್ಣು-ಮುಖವೆಲ್ಲ ಊದಿಕೊಂಡಿತ್ತು. ಹೀಗಾದ ಮೇಲೆ ಅವರಿಗೆ 45 ನಿಮಿಷಗಳ ಕಾಲ ದೃಷ್ಟಿ ಕುಂದಿತ್ತು. ಸಂಪೂರ್ಣವಾಗಿ ಅವರು ಕುರುಡಾಗಿದ್ದರು. ತನಗಾದ ಕೆಟ್ಟ ಅನುಭವವನ್ನು ಅವರು ಹೇಳಿಕೊಂಡಿದ್ದಾರೆ. ನನಗೆ ದೃಷ್ಟಿ ಹೋಯಿತು. ಹೀಗಾಗಿ ನಾನು ಅಳುವುದನ್ನು ನಿಲ್ಲಿಸಬೇಕಿತ್ತು. ಬೇರೆ ದಾರಿ ಇರಲಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಷ್ಟುದ್ದ ಮೂಗು ಭಾರವಾಗಲ್ವಾ? – ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಸೇರಿದ ಮೂಗು ಇದು!
ತೆಂಬು ಎಬೆರೆ ಮಾತ್ರವಲ್ಲ, ನೈಜೀರೀಯಾದಲ್ಲಿ ಅನೇಕರು ಹೀಗೆ ವಿಶ್ವ ದಾಖಲೆ ನಿರ್ಮಿಸಲು, ಈಗಿರುವ ದಾಖಲೆಗಳನ್ನು ಮುರಿಯಲು ಹಲವು ಪ್ರಯತ್ನ ಮಾಡುತ್ತಿದ್ದಾರೆ. Hilda Baci ಎಂಬ ಬಾಣಸಿಗ ಮಹಿಳೆ ಅಡುಗೆ ಮಾಡುವುದರಲ್ಲಿ ಗಿನ್ನೀಸ್ ದಾಖಲೆ ಮಾಡಲು ಪ್ರಯತ್ನ ಮಾಡಿದ್ದರು. ಇದಕ್ಕಾಗಿ ಅವರು 93 ತಾಸು, 11ನಿಮಿಷಗಳ ಕಾಲ ನಿರಂತರವಾಗಿ ಅಡುಗೆ ಮಾಡಿದ್ದರು. ಈ ಹಿಂದಿನ ದಾಖಲೆ ಮುರಿಯಲು ಅವರು 100 ತಾಸು ನಿರಂತರವಾಗಿ ಅಡುಗೆ ಮಾಡಬೇಕಿತ್ತು. ಆದರೆ ಏಳು ತಾಸು ಬ್ರೇಕ್ ತೆಗೆದುಕೊಂಡಿದ್ದು ಎಡವಟ್ಟಾಗಿತ್ತು. ಹೀಗಾಗಿ ಗಿನ್ನೀಸ್ ದಾಖಲೆ ಪುಸ್ತಕ ಸೇರಲು ಸಾಧ್ಯವಾಗಿರಲಿಲ್ಲ.