ವಾಷ್ಟಿಂಗ್ಟನ್: ಮಹಿಳೆಯೊಬ್ಬಳನ್ನು ಕೊಂದು, ಆಕೆಯ ಹಾರ್ಟ್ನ್ನು ತೆಗೆದು ಅದನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಬಳಿಕ ಮತ್ತೆ ಇಬ್ಬರನ್ನು ಕೊಂದಿದ್ದ ಯುಎಸ್ನ ಒಬ್ಬ ವಿಕೃತ ಕೊಲೆಗಾರನಿಗೆ (US Man) ಈಗ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಯುಎಸ್ನ ಓಕ್ಲಾಹೋಮಾದ 44ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಎಂಬಾತ 2021ರಲ್ಲಿ ಈ ಮೂರು ಹತ್ಯೆಗಳನ್ನು ಮಾಡಿದ್ದ. ತಲೆಮರೆಸಿಕೊಂಡಿದ್ದ ಅವನನ್ನು ನಂತರ ಪತ್ತೆ ಮಾಡಿ ಬಂಧಿಸಿದ್ದ ಪೊಲೀಸರು ಗ್ರೇಡಿ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈಗ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಲಾರೆನ್ಸ್ ಪಾಲ್ ಆಂಡರ್ಸನ್ ಮಾದಕವಸ್ತು ಸಾಗಣೆ/ಸೇವನೆ ಅಪರಾಧದಡಿ 20ವರ್ಷಗಳಿಂದ ಜೈಲಿನಲ್ಲಿಯೇ ಇದ್ದು, 2021ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ. ಹೀಗೆ ಜೈಲಿಂದ ಹೊರಬಂದ ಒಂದೇ ವಾರದಲ್ಲಿ ಆಂಡ್ರಿಯಾ ಬ್ಲಾಂಕೆನ್‌ಶಿಪ್ ಎಂಬ ಮಹಿಳೆಯನ್ನು ಹತ್ಯೆಗೈದು, ಹೃದಯವನ್ನು ಕಿತ್ತು ತೆಗೆದ. ಅದನ್ನು ತಮ್ಮ ಅತ್ತೆ/ಮಾವನ ಮನೆಗೆ ತೆಗೆದುಕೊಂಡು ಹೋಗಿ, ಅಲ್ಲಿ ಆಲೂಗಡ್ಡೆಯೊಂದಿಗೆ ಹೃದಯವನ್ನು ಬೇಯಿಸಿದ್ದ. ಬಳಿಕ ಅದನ್ನು ಅತ್ತೆ ಡೆಲ್ಸಿ ಪ್ಯೇ ಮತ್ತು ಮಾವ ಲಿಯಾನ್ ಪ್ಯೇಗೆ ತಿನ್ನಿಸಲು ಪ್ರಯತ್ನಿಸಿದ. ಅವರು ಪ್ರತಿರೋಧ ಒಡ್ಡಿದರು. ಈ ವೇಳೆ ಕ್ರೋಧಗೊಂಡ ಲಾರೆನ್ಸ್ ಪಾಲ್, 67 ವರ್ಷದ ಮಾವ ಲಿಯಾನ್ರನ್ನು ಮತ್ತು ಅವರ ಮೊಮ್ಮಗಳು ಕೆಯೋಸ್ ಯೇಟ್ಸ್ ಅವರನ್ನು ಕೊಂದಿದ್ದಾನೆ. ಹಾಗೇ, ಅತ್ತೆ ಡೆಲ್ಸಿಗೆ ಗಂಭೀರವಾಗಿ ಗಾಯಗೊಳಿಸಿದ್ದ.
ಇದನ್ನೂ ಓದಿ: Silicon Valley Bank crisis : ಅಮೆರಿಕದಲ್ಲಿ 2008ರ ಬಳಿಕ ಅತಿ ದೊಡ್ಡ ಬ್ಯಾಂಕ್ ಇದೀಗ ದಿವಾಳಿ , ಷೇರುಪೇಟೆಯಲ್ಲಿ ತಲ್ಲಣ
ಬಳಿಕ ತಲೆಮರೆಸಿಕೊಂಡಿದ್ದ ಅವನನ್ನು ಪೊಲೀಸರು ಪತ್ತೆ ಮಾಡಿದ್ದರು. ಒಂದೂವರೆ ವರ್ಷದಿಂದ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿತ್ತು. ಡೆಲ್ಸಿ ಪ್ಯೇ (66) ಅವರು ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದಾರೆ. ನಮ್ಮ ಕುಟುಂಬದವನೇ ಇಂಥದ್ದೊಂದು ಕ್ರೈಂ ಮಾಡಿರುವ ಶಾಕ್ನಿಂದ ಹೊರಬರಲು ಸಾಧ್ಯವೇ ಆಗುತ್ತಿಲ್ಲ ಎಂದಿದ್ದಾರೆ. ಹಾಗೇ, ಹತ್ಯೆಗೀಡಾದ ಪುಟ್ಟ ಮಗು ಕೆಯೋಸ್ ಯೇಟ್ಸ್ ತಾಯಿ ತಾಶಾ ಯೇಟ್ಸ್ ಅವರಂತೂ ಕೋರ್ಟ್ನಲ್ಲಿ ಶಿಕ್ಷೆ ಪ್ರಕಟಿಸುವ ವೇಳೆ ಉದ್ವೇಗಗೊಂಡಿದ್ದರು. ಜೀವಾವಧಿ ಶಿಕ್ಷೆಗೆ ಒಳಗಾಗಿ ನ್ಯಾಯಾಲಯದಿಂದ ಹೊರಬಂದ ಲಾರೆನ್ಸ್ ಪಾಲ್ ಆಂಡರ್ಸನ್ಗೆ ಹೊಡೆಯಲು ಮುಂದಾದರು. ನನ್ನ ಬೇಬಿಯನ್ನು ಕೊಂದಿದ್ಯಾರು ಎಂದು ಅಳುತ್ತ ಅವನಿಗೆ ಶಾಪ ಹಾಕಿದರು.