ವಿಮಾನದಲ್ಲಿ ಮದ್ಯಪಾನ ಮಾಡಿದ ಪ್ರಯಾಣಿಕರು ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಇತ್ತೀಚಿನ ದಿನಗಳಲ್ಲಂತೂ ಕುಡುಕ ಪ್ರಯಾಣಿಕರು ವಿಮಾನದಲ್ಲಿ ಮಾರ್ಗ ಮಧ್ಯೆ ಸೃಷ್ಟಿಸುವ ಎಡವಟ್ಟುಗಳ ಬಗ್ಗೆ ಹಲವು ವರದಿಗಳನ್ನು ಓದುತ್ತಿದ್ದೇವೆ. ಇದೀಗ ಯುಎಸ್ನಲ್ಲಿ ಡೆಲ್ಟಾ ವಿಮಾನದಲ್ಲಿ (Delta Flight) ಪ್ರಯಾಣಿಕನೊಬ್ಬ ಮದ್ಯದ ಅಮಲು ಹತ್ತಿಸಿಕೊಂಡು, ಆ ವಿಮಾನದ ಪುರುಷ ಪರಿಚಾರಕ (Male Flight Attendant)ನೊಬ್ಬನ ಕುತ್ತಿಗೆಗೆ ಚುಂಬಿಸಿದ್ದಾನೆ. ಹೀಗೆ ಚುಂಬಿಸುತ್ತ ‘ನೀನು ನೋಡಲು ತುಂಬ ಸುಂದರವಾಗಿದ್ದೀಯಾ’ ಎಂದು ಹೇಳಿದ್ದಾನೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಆ ಕುಡುಕನನ್ನು ಪೊಲೀಸರು ಬಂಧಿಸಿದ್ದಾರೆ.
ಡೆಲ್ಟಾ ವಿಮಾನ ಮಿನ್ನೆಸೋಟದಿಂದ ಅಲಸ್ಕಾಕ್ಕೆ ಹೋಗುತ್ತಿತ್ತು. ಅದರಲ್ಲಿ ಡೇವಿಡ್ ಅಲಾನ್ ಬರ್ಕ್ ಎಂಬ 61ವರ್ಷದ ವ್ಯಕ್ತಿ ಪ್ರಯಾಣ ಮಾಡುತ್ತಿದ್ದ. ಈತನೇ ಈಗ ವಿಮಾನ ಪರಿಚಾರಕರು, ಇತರ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಬಂಧಿತನಾದವ. ಆ ವಿಮಾನ ಇನ್ನೂ ಹೊರಡುವ ಮೊದಲೇ ಬರ್ಕ್ ಕುಡಿಯಲು ಮದ್ಯ ಕೇಳಿದ್ದ. ಅದಕ್ಕೆ ಪರಿಚಾರಕ ಟಿ.ಸಿ.ಎಂಬುವರು ಈಗ ಸಮಯವಿಲ್ಲ ಆಮೇಲೆ ನೀಡುತ್ತೇನೆ ಎಂದಿದ್ದರು. ಅದರಂತೆ ವಿಮಾನ ಏರ್ಪೋರ್ಟ್ನಿಂದ ಹೊರಟ ಮೇಲೆ ಒಂದು ಗ್ಲಾಸ್ ರೆಡ್ವೈನ್ನ್ನು ತೆಗೆದುಕೊಂಡು ಹೋಗಿ ಡೇವಿಡ್ ಅಲಾನ್ ಬರ್ಕ್ಗೆ ಈ ಟಿ.ಸಿ.ನೀಡಿದ್ದಾರೆ. ಆ ಸಮಯದಲ್ಲಿ ಬರ್ಕ್ ಅನುಚಿತವಾಗಿ ವರ್ತಿಸಿದ್ದಾನೆ.
‘ನೀನು ಅತ್ಯಂತ ಸುಂದರವಾಗಿದ್ದೀಯಾ, ನೀನು ನನಗೊಂದು ಮುತ್ತು ಕೊಡು’ ಎಂದಿದ್ದಾನೆ. ಅದಕ್ಕೆ ನಗುತ್ತಲೇ ಉತ್ತರಿಸಿದ ಟಿ.ಸಿ., ‘ಇಲ್ಲ ಇಲ್ಲ, ಆದರೆ ಧನ್ಯವಾದಗಳು’ ಎಂದಷ್ಟೇ ಹೇಳಿದ್ದಾರೆ. ಆದರೆ ಬರ್ಕ್ ವಿಮಾನ ಹತ್ತುವಾಗಲೇ ಮದ್ಯಪಾನ ಮಾಡಿದ್ದರಿಂದ ಪೂರ್ತಿಯಾಗಿ ಅಮಲು ಏರಿತ್ತು. ಅಲ್ಲಿಂದ ಹೊರಟಿದ್ದ ಪರಿಚಾರಕ ಟಿ.ಸಿ.ಯನ್ನು ತನ್ನೆಡೆಗೆ ಎಳೆದು ಬಾಗಿಸಿಕೊಂಡು, ಅವನ ಕತ್ತಿನ ಮೇಲೆ ಚುಂಬಿಸಿದ್ದಾನೆ. ಇದರಿಂದ ವಿಮಾನ ಪರಿಚಾರಕ ತೀವ್ರ ಕಿರಿಕಿರಿಗೆ ಒಳಗಾಗಿದ್ದಾರೆ ಮತ್ತು ವಿಮಾನ ಅಲಸ್ಕಾದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಬರ್ಕ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ಇದನ್ನೂ ಓದಿ: New York Times On Kashmir: ಭಾರತದ ವಿರುದ್ಧ ನ್ಯೂಯಾರ್ಕ್ ಟೈಮ್ಸ್ ಪಿತೂರಿ, ಕಾಶ್ಮೀರ ಕುರಿತ ಲೇಖನಕ್ಕೆ ಕೇಂದ್ರ ಖಂಡನೆ
ಬರ್ಕ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ವಿಮಾನದ ಪೈಲೆಟ್ಗಾಗಿ ತೆಗೆದುಕೊಂಡು ಹೋಗಲಾಗುತ್ತಿದ್ದ ಊಟದ ಟ್ರೇಯನ್ನೂ ಕೂಡ ಮುರಿದು ಹಾಕಿದ್ದಾನೆ. ವಿಮಾನದಲ್ಲಿ ಇದ್ದಾಗಲೇ ಪೈಲೆಟ್ ಈತನ ಬಗ್ಗೆ ಡೆಲ್ಟಾ ವಿಮಾನಯಾನ ಸಂಸ್ಥೆ ಮತ್ತು ಕಾನೂನು ಜಾರಿ ಸಂಸ್ಥೆಗೆ ದೂರು ಕೊಟ್ಟಿದ್ದರು. ಹೀಗಾಗಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅವನನ್ನು ಅರೆಸ್ಟ್ ಮಾಡಲಾಗಿದೆ. ಆದರೆ ಪೊಲೀಸರು ಕೇಳಿದರೆ ಇವನಿಗೆ ಯಾವುದೂ ನೆನಪಿಲ್ಲ. ತಾನು ಮದ್ಯಪಾನ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಏಪ್ರಿಲ್ 27ಕ್ಕೆ ಅವನ ವಿಚಾರಣೆ ನಡೆಯಲಿದೆ.