ಬ್ರಿಟನ್ ನೂತನ ರಾಜ ಚಾರ್ಲ್ಸ್ III ಮತ್ತು ರಾಣಿ ಕಾನ್ಸೋರ್ಟ್ ಕ್ಯಾಮಿಲ್ಲಾ ಅವರೆಡೆಗೆ ಮೊಟ್ಟೆ ಎಸೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂಗ್ಲೆಂಡ್ನ ಯೋರ್ಕ್ ನಗರಕ್ಕೆ ಕಿಂಗ್ ಚಾರ್ಲ್ಸ್ ತಮ್ಮ ಪತ್ನಿಯೊಂದಿಗೆ ಬುಧವಾರ ಭೇಟಿ ಕೊಟ್ಟಿದ್ದರು. ರಾಜನ ಭೇಟಿಗಾಗಿ ಅಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಮಿಕ್ಲ್ಗೇಟ್ ಬಾರ್ ಗೇಟ್ ವೇ ಬಳಿಯೆಲ್ಲ ತಾತ್ಕಾಲಿಕ ಬೇಲಿಯನ್ನೂ ಹಾಕಿ, ಜನರನ್ನು ನಿಯಂತ್ರಿಸಲಾಗಿತ್ತು. ಪೊಲೀಸ್ ಬಿಗಿ ಭದ್ರತೆಯನ್ನೂ ಕಲ್ಪಿಸಲಾಗಿತ್ತು. ಆದರೂ ಕಿಂಗ್ ಚಾರ್ಲ್ಸ್ ಮತ್ತು ಕ್ವೀನ್ ಕಾನ್ಸೋರ್ಟ್ ಕ್ಯಾಮಿಲ್ಲಾ ಅಲ್ಲಿಗೆ ಬಂದು, ನಡೆದುಕೊಂಡು ಹೋಗುತ್ತಿದ್ದಾಗ, ವಿದ್ಯಾರ್ಥಿಯೊಬ್ಬ ಅವರೆಡೆಗೆ ಮೊಟ್ಟೆ ಎಸೆದು, ಪ್ರತಿಭಟನೆ ವ್ಯಕ್ತಪಡಿಸಿದ್ದ.
ರಾಜ-ರಾಣಿ ಆಗಷ್ಟೇ ಬಂದು ತಮ್ಮ ವಾಹನದಿಂದ ಇಳಿದಿದ್ದರು. ಯೋರ್ಕ್ ನಗರದ ಪ್ರಮುಖ ನಾಯಕರೆಲ್ಲ ಅವರನ್ನು ಸ್ವಾಗತಿಸಲು ಸಜ್ಜಾಗಿ ನಿಂತಿದ್ದರು. ಅವರಿಬ್ಬರೂ ಇಳಿದು ಬರುತ್ತಿದ್ದಾಗ ಪ್ರತಿಭಟನಾಕಾರ ಮೂರು ಮೊಟ್ಟೆಗಳನ್ನು ಅವರೆಡೆಗೆ ಎಸೆದಿದ್ದಾನೆ. ಅದೃಷ್ಟಕ್ಕೆ ಅವ್ಯಾವವೂ ರಾಜ-ರಾಣಿಗೆ ತಗುಲಿಲ್ಲ. ಅಷ್ಟರದಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ಆಚೆಗೆ ಕರೆದುಕೊಂಡು ಹೋಗಿದ್ದರು. ಇನ್ನು ಆ ವ್ಯಕ್ತಿ ಮೊಟ್ಟೆ ಎಸೆಯುವಾಗ ‘ಈ ದೇಶವನ್ನು ಗುಲಾಮರ ರಕ್ತದಿಂದ ಕಟ್ಟಲಾಗಿದೆ. ಕಿಂಗ್ ಚಾರ್ಲ್ಸ್ ನನ್ನ ರಾಜನಲ್ಲ’ ಎಂದು ಕೂಗುತ್ತಿದ್ದ. ಕೂಡಲೇ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಇಂಗ್ಲೆಂಡ್ನ್ನು ಸುದೀರ್ಘ ಅವಧಿಗೆ ಆಳಿದ ರಾಣಿ ಎಲಿಜಿಬಿತ್ ಸೆಪ್ಟೆಂಬರ್ನಲ್ಲಿ ನಿಧನರಾದ ಬಳಿಕ ಅವರ ಹಿರಿಯ ಪುತ್ರ ಚಾರ್ಲ್ಸ್ III ಬ್ರಿಟನ್ ರಾಜನ ಸ್ಥಾನಕ್ಕೆ ಏರಿ, ಆಡಳಿತ ನಡೆಸಲು ಪ್ರಾರಂಭಿಸಿದ್ದಾರೆ. ರಾಜನಾದ ಬಳಿಕ ಮೊದಲ ಬಾರಿಗೆ ಚಾರ್ಲ್ಸ್ ಯೋರ್ಕ್ ನಗರಕ್ಕೆ ತೆರಳಿದ್ದರು. ಅಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು. ದಿವಂಗತ ಕ್ವೀನ್ ಎಲಿಜಿಬಿತ್ರ ವಿಗ್ರಹವೊಂದನ್ನು ಅವರು ಅನಾವರಣಗೊಳಿಸುವುದಿತ್ತು. ಆಗಲೇ ಈ ಮೊಟ್ಟೆ ಎಸೆಯಲಾಗಿದೆ. ಮೂರು ಮೊಟ್ಟೆಗಳಲ್ಲಿ ಒಂದು ಮೊಟ್ಟೆ, ಆ ಯೋರ್ಕ್ನ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಬಿದ್ದಿದೆ. ಆಗ ಅಲ್ಲಿದ್ದವರೆಲ್ಲ ‘ಆ ದೇವರೇ ರಾಜ-ರಾಣಿಯರನ್ನು ಕಾಪಾಡಿದ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Queen Elizabeth | ದೇಶವೇ ನನ್ನುಸಿರು; ದೊರೆಯ ಪಟ್ಟ ದೊರೆತ ನಂತರ ಚಾರ್ಲ್ಸ್ III ಚೊಚ್ಚಲ ಭಾಷಣ