Site icon Vistara News

Mehul Choksi: ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪದ ಆಂಟಿಗುವಾ, ಬಾರ್ಬುಡಾ ಕೋರ್ಟ್

#image_title

ರೋಸೌ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13000 ಕೋಟಿ ರೂ. ವಂಚಿಸಿರುವ ಪ್ರಕರಣ ಪ್ರಮುಖ ಆರೋಪಿ, ವಜ್ರ ಉದ್ಯಮಿ ಮೆಹುಲ್‌ ಚೋಕ್ಸಿ (Mehul Choksi) ಅವರನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ನ್ಯಾಯಾಲಯ ತಡೆ ನೀಡಿದೆ. ಮೆಹುಲ್‌ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಏಪ್ರಿಲ್‌ 14ರಂದು ತೀರ್ಪು ನೀಡಿದೆ.‌

ಕೆಲ ದಿನಗಳ ಹಿಂದೆಯಷ್ಟೇ ಇಂಟರ್‌ಪೋಲ್‌ ತನ್ನ ಮೋಸ್ಟ್‌ ವಾಂಟೆಡ್‌ ಪಟ್ಟಿಯಿಂದ ಮೆಹುಲ್‌ ಅವರನ್ನು ಕೈಬಿಟ್ಟಿತ್ತು. ಅದರ ಬೆನ್ನಲ್ಲೇ ಇದೀಗ ಆಂಟಿಗುವಾ ಮತ್ತು ಬಾರ್ಬುಡಾ ನ್ಯಾಯಾಲಯ ಭಾರತದ ಸಿಬಿಐ ಅಧಿಕಾರಿಗಳಿಗೆ ಹಿನ್ನಡೆ ಉಂಟುಮಾಡಿದೆ.

ಇದನ್ನೂ ಓದಿ: Mehul Choksi : ವಂಚಕ ಮೆಹುಲ್‌ ಚೋಕ್ಸಿ ವಿರುದ್ಧದ ರೆಡ್‌ ಕಾರ್ನರ್‌ ನೋಟಿಸ್‌ ರದ್ದು, ಸಿಬಿಐಗೆ ಹಿನ್ನಡೆ

ವಂಚನೆಯ ಪ್ರಕರಣ ವಿಚಾರದಲ್ಲಿ ಪ್ರತಿವಾದಿಗಳಾಗಿರುವ ಆಂಟಿಗುವಾದ ಅಟಾರ್ನಿ ಜನರಲ್‌ ಹಾಗೂ ಪೊಲೀಸ್‌ ಮುಖ್ಯಸ್ಥರು ಸಮಗ್ರ ತನಿಖೆ ನಡೆಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಮೆಹುಲ್‌ ಜೋಕ್ಸಿ ಅವರು ವಾದಿಸಿರುವುದಾಗಿ ವರದಿಯಾಗಿದೆ. ಫಿರ್ಯಾದಿಯು ಅಮಾನವೀಯ ಚಿಕಿತ್ಸೆ ಅಥವಾ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಮೆಹುಲ್‌ ಅವರು ವಾದ ಮಾಡಿರುವುದು ಮಾನ್ಯವಾಗಿದೆ ಎಂದು ಅವರ ಪರ ವಕೀಲರು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಮೆಹುಲ್‌ ಅವರು ತಮ್ಮ ಮೇಲಿನ ಆರೋಪಗಳ ಕುರಿತು ನ್ಯಾಯಾಲಯದಲ್ಲಿ ತನಿಖೆಗೆ ವಿನಂತಿಸಿದ್ದಾರೆ. ಹಾಗೆಯೇ 2021ರ ಮೇ 23ರಂದು ಆಂಟಿಗುವಾ ಮತ್ತು ಬಾರ್ಬುಡಾದಿಂದ ಬಲವಂತವಾಗಿ ಗಡಿಪಾರು ಮಾಡಿದ ವಿಚಾರದಲ್ಲಿಯೂ ಸಮಗ್ರ ತನಿಖೆಯಾಗಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಪರಿಹಾರ ಸಿಗಬೇಕು ಎಂದು ಅವರು ಕೋರಿದ್ದಾರೆ.

ನ್ಯಾಯಾಲಯದ ತೀರ್ಪು ಹೊರಬೀಳುವುದಕ್ಕೆ ಮುನ್ನ ಅಂದರೆ ಮಾರ್ಚ್‌ 21ರಂದು ಭಾರತದ ಕೇಂದ್ರೀಯ ತನಿಖಾ ದಳವು ವಂಚಕ ಮೆಹುಲ್‌ ಚೋಕ್ಸಿ ಅವರನ್ನು ಭಾರತಕ್ಕೆ ಕರೆತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿತ್ತು.

Exit mobile version