ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಉತ್ತುಂಗಕ್ಕೇರಿರುವ ಜತೆಗೆ ರಾಜಕೀಯ ಕ್ಷೋಭೆಯೂ ಮಿತಿ ಮೀರಿದೆ. ಏತನ್ಮಧ್ಯೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಜತೆಗೆ ಪಾಕಿಸ್ತಾನ ಸರಕಾರ ನಡೆಸಿದ ಮಾತುಕತೆಯೂ ವಿಫಲಗೊಂಡಿದೆ. ಇದರ ಬೆನ್ನಲ್ಲೇ ಅಲ್ಲಿನ ಸೇನಾ ಕಮಾಂಡರ್ಗಳು ಸಭೆ ಸೇರಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಶೀಘ್ರದಲ್ಲೇ ಮಿಲಿಟರಿ ದಂಗೆ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಸರಕಾರಗಳು ವಿಫಲಗೊಂಡ ವೇಳೆಯಲ್ಲಿ ಆಡಳಿತ ಚುಕ್ಕಾಣಿಯನ್ನು ಸೇನೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಅಲ್ಲಿ ಸರ್ವೆ ಸಾಮಾನ್ಯ ಸಂಗತಿಯಾಗಿರುವ ಕಾರಣ ಮತ್ತೊಂದು ಬಾರಿ ಅಂಥದ್ದೇ ಬೆಳವಣಿಗೆ ನಿರೀಕ್ಷೆ ಮಾಡಲಾಗಿದೆ.
ಪಾಕಿಸ್ತಾನ ಆರ್ಥಿಕ ಹಿಂಜರಿತದಿಂದ ನಲುಗಿ ಹೋಗಿದೆ. ಜಿಡಿಪಿ ಪಾತಾಳಕ್ಕೆ ಕುಸಿದಿದ್ದು, ಬೆಲೆ ಏರಿಕೆ ನಿಯಂತ್ರಣ ಮಾಡಲಾಗದ ಅಲ್ಲಿನ ಶಹಬಾಜ್ ಷರೀಫ್ ನೇತೃತ್ವದ ಸರಕಾರ ಬೇಸ್ತು ಬಿದ್ದಿದೆ. ಇದರ ಜತೆ ರಾಜಕೀಯ ಅಸ್ಥಿರತೆಯೂ ಉಂಟಾಗಿದೆ. ಭಯೋತ್ಪಾದನೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನಕ್ಕೆ ಸರಕಾರ ಮುಂದಾಗಿದ್ದರೂ, ಬೆಂಬಲಿಗರ ಪ್ರತಿರೋಧದಿಂದ ಅದು ಸಾಧ್ಯವಾಗುತ್ತಿಲ್ಲ. ಅಹಿಂಸಾತ್ಮಕ ಗಲಾಟೆಗಳು ನಡೆಯುತ್ತಿರುವ ಕಾರಣ ಅದನ್ನು ನಿಯಂತ್ರಣ ಮಾಡುವುದಕ್ಕೂ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಅತಂತ್ರಗಳ ನಡುವೆ ಆಡಳಿತದಲ್ಲಿ ಹಿಡಿತ ಸಾಧಿಸಲು ಸೇನೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಭಯೋತ್ಪಾದನೆ ಮಿತಿ ಮೀರಿದೆ
ಇಮ್ರಾನ್ ಖಾನ್ ಸರಕಾರವಿದ್ದ ಅವಧಿಯಲ್ಲಿ ನಿಯಂತ್ರಣದಲ್ಲಿದ್ದ ಭಯೋತ್ಪಾದನೆ ಮತ್ತೆ ಮಿತಿ ಮೀರಿದೆ. ಕರಾಚಿ ಹಾಗೂ ಬಲೂಚಿಸ್ತಾನದಲ್ಲಿ ದೊಡ್ಡ ಮಟ್ಟದ ಉಗ್ರ ಕೃತ್ಯಗಳು ನಡೆಯುತ್ತಿವೆ. ಕಳೆದ ಜನರಿಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ನಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನ ಇನ್ಸ್ಟಿಟ್ಯೂಟ್ ಆಫ್ ಪೀಸ್ ಸ್ಟಡಿ ಪ್ರಕಾರ 2021ಕ್ಕೆ ಹೋಲಿಕೆ ಮಾಡಿದರೆ 2022ರಲ್ಲಿ ಉಗ್ರ ಕೃತ್ಯಗಳ ಪ್ರಮಾಣ ಶೇಕಡಾ 27ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ : Pakistan Economic Crisis: ಚುನಾವಣೆ ನಡೆಸಲೂ ಕಾಸಿಲ್ಲ ನಮ್ಮ ಬಳಿ ಎಂದ ಪಾಕಿಸ್ತಾನ ರಕ್ಷಣಾ ಸಚಿವ
ಇದೇ ಸಂದರ್ಭದಲ್ಲಿ ದೇಶದಲ್ಲಿ ಹಣಕಾಸಿನ ಬಿಕ್ಕಟ್ಟು ಉಂಟಾಗಿದೆ. ಒಟ್ಟು ಜಿಡಿಪಿಯ ಶೇಕಡಾ 95.39 ವಿದೇಶಿ ಸಾಲವನ್ನೇ ನೆಚ್ಚಿಕೊಂಡಿದೆ. ಕೈಗಾರಿಕೋತ್ಪನ್ನಗಳ ಕುಸಿತ, ರಫ್ತು ಪ್ರಮಾಣದಲ್ಲಿ ಇಳಿಕೆಯಿಂದಾಗಿ ಆರ್ಥಿಕತೆ ತತ್ತರಿಸಿದೆ. ಅದೇ ರೀತಿ ಕಳೆದ ಮಳೆಗಾಲದಲ್ಲಿ ಉಂಟಾದ ನೆರೆ ಪರಿಸ್ಥಿತಿ ಆರ್ಥಿಕತೆಯ ಇನ್ನಷ್ಟು ನೆಲಕಚ್ಚುವಂತೆ ಮಾಡಿದೆ.
ಸೇನಾ ಬಜೆಟ್ ಇಳಿಕೆಯ ಪರಿಣಾಮ
ಆರ್ಥಿಕತೆಯ ಕುಸಿತದ ಕಾರಣಕ್ಕೆ ಅಲ್ಲಿನ ಸರಕಾರ ಸೇನೆಯ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡಿದೆ. ಅನುದಾನ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೋಪಗೊಂಡಿರುವ ಸೇನಾ ಪಡೆ ಸರಕಾರವನ್ನೇ ಉರುಳಿಸಲು ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಜತೆಗಿನ ಮಾತುಕತೆ ನಡೆಯದ ಕಾರಣ ಸಂದರ್ಭಕ್ಕೆ ಕಾದು ಕಮಾಂಡರ್ಗಳು ಸಭೆ ಸೇರಿದ್ದಾರೆ. ಅಲ್ಲಿನ ನಿರ್ಣಯ ತೆಗೆದುಕೊಂಡು ಸರಕಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಅಂದ ಹಾಗೆ ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಜಾರಿಗೆ ಬರುವುದು ಇದೇ ಮೊದಲೇನೂ ಅಲ್ಲ. 75 ವರ್ಷಗಳ ಹಿಂದೆ ಭಾರತದ ಜತೆಗೇ ಸ್ವಾತಂತ್ರ್ಯ ಪಡೆದುಕೊಂಡಿರುವ ಪಾಕಿಸ್ತಾನದಲ್ಲಿ ಮೂರು ಬಾರಿ ಸೇನಾಡಳಿತ ಹೇರಲಾಗಿದೆ. ನಾಲ್ಕು ದಶಗಳ ಕಾಲ ಅಲ್ಲಿನ ನಾಗರಿಕರು ಸೇನಾಡಳಿತಕ್ಕೆ ಸಾಕ್ಷಿಯಾಗಿದ್ದಾರೆ.