ಲಂಡನ್: ಬ್ರಿಟನ್ ಪ್ರವಾಸದಲ್ಲಿರುವ ಕೇಂದ್ರ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್, ಐಟಿ ಖಾತೆಗಳ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಶುಕ್ರವಾರ ಲಂಡನ್‌ನಲ್ಲಿರುವ ವಿಶ್ವಗುರು ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ.
ಬ್ರಿಟನ್ ಸಂಸತ್ ಭವನದ ಎದುರುಗಡೆ ಥೇಮ್ಸ್ ನದಿ ದಂಡೆಯಲ್ಲಿ ಸ್ಥಾಪಿತವಾಗಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಅವರು ಪುಷ್ಪ ನಮನ ಸಲ್ಲಿಸಿದರು. ಬಸವಣ್ಣನ ಮೌಲ್ಯಯುತ ವಿಚಾರಗಳನ್ನು ಬ್ರಿಟನ್‌ನಲ್ಲಿ ಪ್ರಚಾರ ಮಾಡಲು ಲಂಡನ್‌ನ ಬಸವೇಶ್ವರ ಫೌಂಡೇಷನ್ ನಡೆಸುತ್ತಿರುವ ಪ್ರಯತ್ನಗಳನ್ನು ಅವರು ಪ್ರಶಂಸಿಸಿದರು.
ನಾಡಿನ ಹೆಮ್ಮೆಯ ಇತಿಹಾಸ ಪುರುಷರಾಗಿರುವ ಬಸವೇಶ್ವರ ಪುತ್ಥಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2015ರ ನವೆಂಬರ್ 14ರಂದು ಅನಾವರಣ ಮಾಡಿದ್ದರು. ಕಳೆದ ಬಸವ ಜಯಂತಿ ಸಂದರ್ಭದಲ್ಲಿ ಬ್ರಿಟನ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಮತ್ತೆ ಈ ಪ್ರತಿಮೆಗೆ ಗೌರವ ಸಲ್ಲಿಸಿ, ಇಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲಂಡನ್‌ನ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ಅಧ್ಯಕ್ಷ, ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬರಮಾಡಿಕೊಂಡು, ಪ್ರತಿಮೆಯ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ| ಬಸವ ಜಯಂತಿ: ಭಕ್ತಿ ಭಂಡಾರಿ ಬಸವಣ್ಣನವರ ನೆನಪು, ಸಂದೇಶ