Site icon Vistara News

Missing Titanic Sub: ಟೈಟಾನಿಕ್‌ ಮುಳುಗಿದ ತಾಣದಲ್ಲೇ ಇನ್ನೊಂದು ದುರಂತ, ನೋಡಲು ಹೋದ ಸಬ್‌ಮರ್ಸಿಬಲ್‌ ಸ್ಫೋಟ

titanic submercible

ನ್ಯೂಯಾರ್ಕ್‌: ಟೈಟಾನಿಕ್‌ ನೌಕೆ ಮುಳುಗಿದ ತಾಣದಲ್ಲಿ ಪ್ರವಾಸಕ್ಕೆಂದು ಸಮುದ್ರದಾಳಕ್ಕೆ ಇಳಿದು ನಾಪತ್ತೆಯಾಗಿದ್ದ ʼಟೈಟಾನ್‌ ಸಬ್‌ಮರ್ಸಿಬಲ್‌ʼನಲ್ಲಿದ್ದ (Missing Titanic Sub)‌ ಐದೂ ಜನ ದುರಂತ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಮುದ್ರದಾಳದ ಭಾರಿ ಒತ್ತಡದಿಂದಾಗಿ ಟೈಟಾನ್‌ ಸ್ಫೋಟಗೊಂಡಿದ್ದು, ಟೈಟಾನ್‌ನ ಅವಶೇಷಗಳು ಕಂಡುಬಂದಿವೆ. ಆದರೆ ಅದರಲ್ಲಿದ್ದವರ ಶವಗಳು ಸಿಕ್ಕಿಲ್ಲ. ಸಮುದ್ರದಡಿ 3,800 ಮೀಟರ್ (12,400 ಅಡಿ) ಇರುವ ಟೈಟಾನಿಕ್ ಅವಶೇಷಗಳ ಬಳಿ ಸಬ್‌ಮರ್ಸಿಬಲ್‌ನ ಅವಶೇಷಗಳನ್ನು ಕಂಡುಹಿಡಿಯಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಗುರುವಾರ ಹೇಳಿದೆ. ಅಷ್ಟು ಆಳದಲ್ಲಿ ಮನುಷ್ಯರು ಇಳಿದು ಶೋಧಿಸಲು ಸಾಧ್ಯವಿಲ್ಲದುದರಿಂದ, ಶೋಧ ಕಾರ್ಯಕ್ಕಾಗಿ ರೋಬೋಟ್‌ಗಳನ್ನು ಬಳಸಲಾಗಿತ್ತು.

ಇದರೊಂದಿಗೆ ನಾಲ್ಕು ದಿನಗಳ ಕಾಲ ನಡೆದ ಬಹುರಾಷ್ಟ್ರೀಯ ಶೋಧಕಾರ್ಯಾಚರಣೆ ಕೊನೆಗೊಂಡಿದೆ. ಸಮುದ್ರದ ತಳದಲ್ಲಿ ಇರುವ ಭಾರಿ ಒತ್ತಡ ಸಬ್‌ಮರ್ಸಿಬಲ್‌ನ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಊಹಿಸಿದ್ದಾರೆ. ಟೈಟಾನ್‌ನ ಒಳಗೆ ಅದನ್ನು ಚಲಾಯಿಸುತ್ತಿದ್ದ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟಾಕ್‌ಟನ್ ರಶ್, ಬ್ರಿಟಿಷ್ ಬಿಲಿಯನೇರ್ ಮತ್ತು ಪರಿಶೋಧಕ ಹ್ಯಾಮಿಶ್ ಹಾರ್ಡಿಂಗ್, ಪಾಕಿಸ್ತಾನಿ ಮೂಲದ ಉದ್ಯಮಿ ಶಹಜಾದಾ ದಾವೂದ್, ಅವರ 19 ವರ್ಷದ ಮಗ ಸುಲೇಮಾನ್, ಫ್ರೆಂಚ್ ಸಮುದ್ರಶಾಸ್ತ್ರಜ್ಞ ಮತ್ತು ಹೆಸರಾಂತ ಟೈಟಾನಿಕ್ ತಜ್ಞ ಪೌಲ್-ಹೆನ್ರಿ ನರ್ಜೆಲೆಟ್ ಇದ್ದರು. ಯಾರೂ ಉಳಿದಿಲ್ಲ.

Missing Titanic Sub

ಅಮೆರಿಕದ ಮೂಲದ ಕಂಪನಿ OceanGate Expeditions ಟೈಟಾನಿಕ್‌ ಪ್ರವಾಸೋದ್ಯಮ ನಿರ್ವಹಿಸುತ್ತಿದ್ದು, ಐವರು ಬಿಲಿಯನೇರ್‌ಗಳು ಕೂತಿದ್ದ ಟೈಟಾನ್ ಸಬ್‌ ಅನ್ನು ಭಾನುವಾರ ಬೆಳಗ್ಗೆ ಅವಶೇಷಗಳು ಇದ್ದಲ್ಲಿಗೆ ಕಳುಹಿಸಿತ್ತು. ಎರಡು ಗಂಟೆಯೊಳಗೆ ಹಿಂದಿರುಗಬೇಕಿದ್ದ ಸಬ್‌ ಒಂದು ಗಂಟೆ 45 ನಿಮಿಷಗಳ ನಂತರ ಮೇಲ್ಮೈ ಬೆಂಬಲ ಹಡಗಿನ ಸಂಪರ್ಕವನ್ನು ಕಳೆದುಕೊಂಡಿತ್ತು.

ಓಷನ್‌ಗೇಟ್ ಈ ಸಬ್‌ಮೆರೀನ್‌ ಅನ್ನು ನಿರ್ವಹಿಸುತ್ತಿದೆ. ಇದರೊಳಗೆ ಒಂದು ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ 250,000 ಡಾಲರ್‌ ಶುಲ್ಕ ವಿಧಿಸುತ್ತಿತ್ತು. ಟೈಟಾನ್‌ನ ಸುರಕ್ಷತೆಯ ಕುರಿತು 2018ರಲ್ಲಿ ಸಬ್‌ಮರ್ಸಿಬಲ್ ಉದ್ಯಮದ ತಜ್ಞರ ವಿಚಾರ ಸಂಕಿರಣದ ಸಮಯದಲ್ಲಿ ಆತಂಕಗಳನ್ನು ವ್ಯಕ್ತಪಡಿಸಲಾಗಿತ್ತು.

RMS ಟೈಟಾನಿಕ್ ಹಡಗು 1912ರಲ್ಲಿ ತನ್ನ ಚೊಚ್ಚಲ ಸಮುದ್ರಯಾನದ ಸಮಯದಲ್ಲಿ ಉತ್ತರ ಧ್ರುವ ಸಮೀಪ ಮಂಜುಗಡ್ಡೆಗೆ ಅಪ್ಪಳಿಸಿ ಮುಳುಗಿತ್ತು. ಹಡಗಿನಲ್ಲಿದ್ದ 1,500ಕ್ಕೂ ಹೆಚ್ಚು ಜನ ಸತ್ತಿದ್ದರು. ಈ ತಾಣ ಕೇಪ್ ಕಾಡ್‌ನ ಪೂರ್ವಕ್ಕೆ 1,450 ಕಿಮೀ ದೂರದಲ್ಲಿದೆ.

ಇದನ್ನೂ ಓದಿ: Missing Titanic Sub: ಟೈಟಾನಿಕ್‌ ಮುಳುಗಿದ ಸ್ಥಳದಲ್ಲೇ ಇನ್ನೊಂದು ಟೈಟಾನ್‌ ಕಣ್ಮರೆ! ಆ 5 ಜನ ಬದುಕಿದ್ದಾರಾ ಅನ್ನೋದೇ ಈಗ ಪ್ರಶ್ನೆ!

Exit mobile version