ಕೊಲೊಂಬೊ: ಪ್ರವಾಸೋದ್ಯಮದ ಮೇಲೆಯೇ ಹೆಚ್ಚಿನ ಅವಲಂಬನೆ, ಆಳುವ ಸರ್ಕಾರಗಳ ಅದಕ್ಷತೆ, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದಾಗಿ ಶ್ರೀಲಂಕಾ ಆರ್ಥಿಕವಾಗಿ ತತ್ತರಿಸಿಹೋಗಿದೆ. ವಿದೇಶಿ ವಿನಿಮಯ ಕೊರತೆ, ಅಗತ್ಯ ವಸ್ತುಗಳ ಬೆಲೆಯೇರಿಕೆ, ಆರ್ಥಿಕ ಸ್ಥಿತಿ ಸುಧಾರಿಸದ ಕಾರಣ ದ್ವೀಪರಾಷ್ಟ್ರದ ಜನ ನರಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವ ಮಧ್ಯೆಯೇ, ಚೀನಾ ಜತೆ ಶ್ರೀಲಂಕಾ ‘ಮಂಕಿ ಬ್ಯುಸಿನೆಸ್’ಗೆ (Monkey Business) ಮುಂದಾಗಿದೆ. ಅಂದರೆ, ಚೀನಾಗೆ ಲಂಕಾ ಒಂದು ಲಕ್ಷ ಕೋತಿಗಳನ್ನು ರಫ್ತು ಮಾಡುವ ಮೂಲಕ ಆರ್ಥಿಕ ಸ್ಥಿತಿ ಹಳಿಗೆ ತರಲು ಪ್ರಯತ್ನ ಮಾಡುತ್ತಿದೆ.
ಒಂದು ಲಕ್ಷ ಕೋತಿಗಳನ್ನು ರಫ್ತು ಮಾಡಬೇಕು ಎಂಬುದಾಗಿ ಚೀನಾದ ಮನವಿಯನ್ನು ಶ್ರೀಲಂಕಾ ಕೃಷಿ ಸಚಿವಾಲಯವು ಪರಿಗಣಿಸುತ್ತಿದೆ. ಲಂಕಾದಲ್ಲಿ ರೈತರಿಗೆ ಕಂಟಕವಾಗಿರುವ ಟಾಕ್ ಮಕಾಕ್ (Toque Macaque) ಪ್ರಭೇದದ ಕೋತಿಗಳನ್ನು ಚೀನಾಗೆ ರಫ್ತು ಮಾಡುವ ಕುರಿತು ನಡೆದ ಸಭೆಯಲ್ಲಿ ಶ್ರೀಲಂಕಾ ವ್ಯಾಪಾರಕ್ಕೆ ಆಸಕ್ತಿ ತೋರಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾಗೆ ಚೀನಾ ಜತೆಗಿನ ವ್ಯಾಪಾರವು ಆರ್ಥಿಕವಾಗಿ ನೆರವಾಗಲಿದೆ.
ಕೋತಿಗಳ ನಾಡು ಲಂಕಾ
ಶ್ರೀಲಂಕಾ ಕೋತಿಗಳ ನಾಡಾಗಿದ್ದು, ಟಾಕ್ ಮಕಾಕ್ ಪ್ರಭೇದದ ಕೋತಿಗಳೇ 30 ಲಕ್ಷ ಇವೆ. ಹಾಗೆಯೇ, ಇವು ರೈತರ ಬೆಳೆಗಳನ್ನು ಹಾನಿ ಮಾಡುತ್ತಿರುವುದರಿಂದ ರೈತರಿಗೆ ಮಾತ್ರವಲ್ಲ ಸರ್ಕಾರಕ್ಕೂ ತಲೆನೋವಾಗಿವೆ. ಆದರೂ, ಇವುಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದದ ಕೋತಿಗಳು ಎಂದು ಪರಿಗಣಿಸಲಾಗಿದೆ. ಈ ಪ್ರಭೇದದ ಕೋತಿಗಳನ್ನು ಚೀನಾಗೆ ರಫ್ತು ಮಾಡುವ ಕುರಿತು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಕೃಷಿ ಸಚಿವ ಮಹಿಂದಾ ಅಮರವೀರ ಸೂಚಿಸಿದ್ದಾರೆ. ಅಧ್ಯಯನ ವರದಿ ಆಧಾರದ ಮೇಲೆ ರಫ್ತಿನ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಕೋತಿಗಳನ್ನು ಖರೀದಿಸಿ ಚೀನಾ ಏನು ಮಾಡುತ್ತದೆ?
ಒಂದು ಲಕ್ಷ ಕೋತಿಗಳನ್ನು ಖರೀದಿಸುವ ಚೀನಾ, ಅವುಗಳನ್ನು ಹಲವು ಕಾರಣಗಳಿಗಾಗಿ ಬಳಸಲಿದೆ. ಮಾಂಸ ಸೇವನೆ, ದೇಶಾದ್ಯಂತ ಪ್ರಾಣಿ ಸಂಗ್ರಹಾಲಯಗಳಿಗೆ ರವಾನಿಸುವುದು ಸೇರಿ ವಿವಿಧ ಉದ್ದೇಶಗಳಿಗೆ ಕೋತಿಗಳನ್ನು ಬಳಸುತ್ತದೆ. ಅದರಲ್ಲೂ, ಔಷಧ, ಲಸಿಕೆಗಳ ತಪಾಸಣೆ, ಅಂಗಾಂಗಗಳ ಕಸಿ ಸೇರಿ ವೈದ್ಯಕೀಯ ಕ್ಷೇತ್ರದ ಹತ್ತಾರು ಪ್ರಯೋಗಗಳಿಗೆ ಚೀನಾ ಈ ಕೋತಿಗಳನ್ನು ಬಳಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಚೀನಾ ಮಾತ್ರವಲ್ಲ, ಬೇರೆ ದೇಶಗಳು ಕೂಡ ಕೋತಿಗಳನ್ನು ಆಮದು ಮಾಡಿಕೊಳ್ಳುತ್ತವೆ. ವರದಿಯೊಂದರ ಪ್ರಕಾರ, ಅಮೆರಿಕವು 2000ರಿಂದ 2020ರ ಅವಧಿಯಲ್ಲಿ 4.82 ಲಕ್ಷ ಕೋತಿಗಳನ್ನು ಆಮದು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ಕೂಡ ಕತ್ತೆ, ನಾಯಿಗಳನ್ನು ಚೀನಾಗೆ ರಫ್ತು ಮಾಡಿ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಯತ್ನಿಸುತ್ತಿದೆ. ಪಾಕಿಸ್ತಾನದಲ್ಲಿ ಕತ್ತೆಗಳ ಸಾಕಣೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಅಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಿದೆ.
ಇದನ್ನೂ ಓದಿ: Fact Check: ಕನ್ನಡ ಗೊತ್ತಿಲ್ಲದ್ದಕ್ಕೆ ಬಿಹಾರ ಯುವಕನ ಮೇಲೆ ದೌರ್ಜನ್ಯ ನಡೆಯಿತೇ? ವೈರಲ್ ವಿಡಿಯೋ ಅಸಲಿಯತ್ತೇನು?