ನಮ್ಮ ದೇಶದ ಸಂಸತ್ತಿನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಹೋದ ಸಂಸದರು ಎಂದಾದರೂ ಕನ್ನಡದಲ್ಲಿ ಮಾತನಾಡುತ್ತಾರಾ? ತುಂಬ ಕಷ್ಟಪಟ್ಟಾದರೂ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿಯೇ ಭಾಷಣ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಕೆನಡಾ ಸಂಸದರೊಬ್ಬರು ಅಲ್ಲಿನ ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಮಾತನಾಡಿ, ಕನ್ನಡಿಗರ ಪಾಲಿಗೆ ಹೆಮ್ಮೆಯೆನಿಸಿದ್ದಾರೆ. ತುಮಕೂರು ಮೂಲದ ಚಂದ್ರ ಆರ್ಯಾ, ಕೆನಡಾ ಪಾರ್ಲಿಮೆಂಟ್ (Canada Parliament)ನಲ್ಲಿ ನಿಂತು, ರಾಷ್ಟ್ರಕವಿ ಕುವೆಂಪು ಅವರ ʼಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರುʼ ಎಂಬ ಹಾಡಿನ ಸಾಲುಗಳನ್ನು ಉಚ್ಚರಿಸಿದ್ದಾರೆ. ಈ ವಿಡಿಯೋ ಈಗ ರಾಷ್ಟ್ರೀಯ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ವಿಶ್ವದಾದ್ಯಂತ ವಿದೇಶಿ ಸಂಸತ್ತೊಂದರಲ್ಲಿ ಸಂಸದರೊಬ್ಬರು ಕನ್ನಡದಲ್ಲಿ ಮಾತನಾಡಿದ್ದು ಇದೇ ಮೊದಲು ಮತ್ತು ಅದು ಕನ್ನಡ ಭಾಷೆಗೆ ಸಂದ ಗೌರವ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಚಂದ್ರ ಆರ್ಯಾ ಹೇಳಿದ ಕನ್ನಡದ ಮಾತುಗಳು ಹೀಗಿವೆ ʼಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿರುವುದು ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾದಲ್ಲಿರುವ ಕನ್ನಡಿಗರು ಈ ಸಂಸತ್ತಿನಲ್ಲಿ 2018ರಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಹಾಡಿರುವ ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಹಾಡಿನ ಸಾಲುಗಳೊಂದಿಗೆ ಮಾತು ಮುಗಿಸುತ್ತಿದ್ದೇನೆ..ಧನ್ಯವಾದಗಳುʼ.
ಇದನ್ನೂ ಓದಿ | Explainer: ಭಾರತೀಯರ ಫೇವರಿಟ್ ಆಗುವತ್ತ ಯುಎಇ, ಏನಿದರ ವಿಶೇಷ?
ತಾವು ಕನ್ನಡದಲ್ಲಿ ಮಾತನಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಸಂಸದ ಚಂದ್ರಾ ಆರ್ಯಾ, ನಾನು ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃ ಭಾಷೆಯನ್ನು ಮಾತನಾಡಿದೆ. ಈ ಸುಂದರವಾದ ಭಾಷೆಗೆ ಸುದೀರ್ಘ ಇತಿಹಾಸವಿದೆ. 5 ಕೋಟಿಗೂ ಅಧಿಕ ಜನ ಈ ಭಾಷೆ ಮಾತನಾಡುತ್ತಾರೆ. ಇದುವರೆಗೂ ಯಾವುದೇ ದೇಶಗಳ ಸಂಸತ್ತಿನಲ್ಲಿಯೂ (ಭಾರತ ಹೊರತುಪಡಿಸಿ) ಕನ್ನಡ ಮಾತನಾಡಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅಂದಹಾಗೇ, ಚಂದ್ರಾ ಆರ್ಯಾ ಅವರ ಪೂರ್ತಿ ಹೆಸರು ಚಂದ್ರಕಾಂತ್ ಆರ್ಯ ಎಂದಾಗಿದ್ದು, ಇವರು ಮೊಟ್ಟ ಮೊದಲಿಗೆ 2015ರಲ್ಲಿ ಕೆನಡಾ ಸಂಸತ್ತಿಗೆ ಆಯ್ಕೆಯಾದವರು.
ಇದನ್ನೂ ಓದಿ | Explainer: ಹಿಂದಿ ರಾಷ್ಟ್ರಭಾಷೆ ಹೌದೋ, ಅಲ್ಲವೋ?